ರಾಜ್ಯ ವಿಧಾನ ಸಭಾ ಚುನಾವಣೆ: ಮೇ 10ಕ್ಕೆ ಸಾರ್ವತ್ರಿಕ ರಜೆ ಘೋಷಣೆ
ಉಡುಪಿ, ಮೇ 2: ರಾಜ್ಯ ವಿಧಾನಸಭಾ ಚುನಾವಣೆ ಮೇ 10ರ ಬುಧವಾರದಂದು ನಡೆಯಲಿದ್ದು, ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘಸಂಸ್ಥೆ ಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ) ಸರಕಾರವು ಮೇ 10ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಆದರೆ ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರಕಾರಿ ನೌಕರರು ಚುನಾವಣಾ ಕಾರ್ಯಗಳಿಗೆ ಹಾಜರಾಗಬೇಕು.
ಈ ಕ್ಷೇತ್ರಗಳಲ್ಲಿ ಮತದಾನವು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತದಾನ ನಡೆಯುವ ಮತಗಟ್ಟೆಯನ್ನು ಸರಕಾರಿ ಕಚೇರಿಗಳಲ್ಲಿ ಹಾಗೂ ಸರಕಾರಿ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅಂತಹ ಕಚೇರಿ ಹಾಗೂ ಶಾಲೆಗಳಿಗೆ ಪೂರ್ವತಯಾರಿಗಾಗಿ ಮೇ 9ರ ಮಂಗಳವಾರದಂದು ಹಾಗೂ ಮತ ಎಣಿಕೆ ನಡೆಯುವ ಮೇ 13ರಂದು ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜೆ ಘೋಷಿಸುವ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸರಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.