ದೇಶದ ಸಂಕಟಗಳಿಗೆ ಧ್ವನಿಯಾಗದ ಪ್ರಧಾನಿಯ 'ಮನ್ ಕಿ ಬಾತ್'
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
'ಮನ್ ಕಿ ಬಾತ್' 100ನೇ ಆವೃತ್ತಿಯನ್ನು ಪೂರೈಸಿದ ಸಂಭ್ರಮದಲ್ಲಿದೆ ಕೇಂದ್ರ ಸರಕಾರ. ಇದನ್ನು ಸ್ವತಃ ಸರಕಾರ ಆಚರಿಸುತ್ತಿದೆ ಮಾತ್ರವಲ್ಲ, ಸರಕಾರದ ವೆಚ್ಚದಲ್ಲಿ ಜನರಿಂದಲೂ ಆಚರಿಸಲು ಒತ್ತಾಯಗಳನ್ನು ಹೇರುತ್ತಿದೆ. ಸ್ವತಃ ನರೇಂದ್ರ ಮೋದಿಯವರೇ ಇದನ್ನೊಂದು ಸಾಧನೆಯಾಗಿ ಬಿಂಬಿಸುವ ಪ್ರಯತ್ನದಲ್ಲಿದ್ದಾರೆ. ''ಮನ್ ಕಿ ಬಾತ್ ನನ್ನ ಅಧ್ಯಾತ್ಮ ಯಾನ' ಎಂದು ಕರೆದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಇಷ್ಟಕ್ಕೇ ಅವರ ಮಾತು ಸೀಮಿತವಾಗಿದ್ದರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಒಬ್ಬ ಪ್ರಧಾನಿ ತನ್ನ ಅಧ್ಯಾತ್ಮ ಗೀಳಿಗಾಗಿ ಜನರ ಕೆಲವು ಕೋಟಿ ಹಣವನ್ನು ಖರ್ಚು ಮಾಡುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಏಳುತ್ತದೆಯಾದರೂ, ದೇಶದಲ್ಲಿ ಭ್ರಷ್ಟಾಚಾರ, ಅಕ್ರಮಗಳ ಹೆಸರಿನಲ್ಲಿ ಸಾವಿರಾರು ಕೋಟಿ ಹಣ ಪೋಲಾಗುತ್ತಿರುವಾಗ, ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚೆಂದರೆ 800 ಕೋಟಿ ರೂ. ವೆಚ್ಚ ಮಾಡಿ ಪ್ರಧಾನಿ ತಮ್ಮ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲೇನಿದೆ? ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಪ್ರಧಾನಿ ಮೋದಿಯವರು ಮುಂದುವರಿದು, ''50 ವರ್ಷಗಳ ಹಿಂದೆ ನಾನು ಮನೆಯನ್ನು ತೊರೆದು ಹೋಗಿದ್ದು ಜನರ ನಡುವೆ ಇರುವುದಕ್ಕಾಗಿ. ಪ್ರಧಾನಿಯಾಗಿ ದಿಲ್ಲಿಗೆ ಬಂದ ಬಳಿಕ ಜನರಿಂದ ದೂರವಾದ ಕೊರತೆ ಕಾಡುತ್ತಿತ್ತು. ಆ ಶೂನ್ಯವನ್ನು ನೀಗಿಸಿದ್ದು ಮನ್ ಕಿ ಬಾತ್'' ಎಂದು ಹೇಳಿ, ತಮ್ಮ ಅಧ್ಯಾತ್ಮದ ಆ ಗೀಳನ್ನು ದೇಶದ ಜನರ ತಲೆಗೆ ಕಟ್ಟಿದ್ದಾರೆ. 'ಪ್ರಧಾನಿಯಾದ ದಿನದಿಂದ ನನಗೆ ಜನರಿಂದ ದೂರವಾದ ಕೊರತೆ ಕಾಡುತ್ತಿತ್ತು. ಅದನ್ನು ತುಂಬಿಸಿದ್ದು ಮನ್ ಕಿ ಬಾತ್' ಎನ್ನುವ ಪ್ರಧಾನಿ ಮೋದಿಯವರ ಮಾತು, ಈ ದೇಶದ ಪ್ರಧಾನಿಯಾಗಿ ಜನರ ಸಂಕಟ, ನೋವುಗಳನ್ನು ಆಲಿಸುವಲ್ಲಿ ಅವರು ಯಾಕೆ ವಿಫಲರಾದರು ಎನ್ನುವುದನ್ನು ಹೇಳುತ್ತದೆ.
ಕೈ ಹಿಡಿದ ಪತ್ನಿಯನ್ನು ತೊರೆದು ತಾನು ಹಿಮಾಲಯಕ್ಕೆ ಹೋದೆ ಎಂದು ಒಂದು ಕಾಲದಲ್ಲಿ ಪ್ರಧಾನಿ ಮೋದಿಯವರು ಹೇಳಿಕೊಂಡಿದ್ದರು. ಮನ್ ಕಿ ಬಾತ್ನ 100ರ ಸಂಭ್ರಮದ ಸಂದರ್ಭದಲ್ಲಿ ಅದನ್ನು ಮತ್ತೆ ಮೋದಿ ನೆನೆದುಕೊಂಡಿದ್ದಾರೆ. ಪ್ರಧಾನಿಯಾಗುವುದೆಂದರೆ ಜನರ ಸಂಕಟ, ನೋವುಗಳಿಗೆ ಕಿವಿಯಾಗುವ ಒಂದು ಅವಕಾಶ. ಆದರೆ ಪ್ರಧಾನಿಯಾಗಿ ಜನರಿಂದ ದೂರವಾದ ಕೊರತೆಯನ್ನು ಅವರು ಎದುರಿಸಿದರು. ಅಂದರೆ, ಪ್ರಧಾನಿಯಾಗಿ ಅವರಿಗೆ ಜನರನ್ನು ತಲುಪಲು ಸಾಧ್ಯವಾಗಲಿಲ್ಲ ಅಥವಾ ಅವರ ಸುತ್ತಲಿರುವವರು ಅವರನ್ನು ಜನರೆಡೆಗೆ ತಲುಪಲು ಬಿಡಲಿಲ್ಲ ಎನ್ನುವುದು ಪರೋಕ್ಷವಾಗಿ ವೇದ್ಯವಾಗುತ್ತದೆ. ಆ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ 'ಮನ್ ಕಿ ಬಾತ್' ರೇಡಿಯೋ ಭಾಷಣವನ್ನು ನೆಚ್ಚಿಕೊಳ್ಳಬೇಕಾಯಿತು ಎಂದು ಅವರೇ ಹೇಳಿಕೊಂಡಂತಾಗಿದೆ. ಪ್ರಧಾನಿಯಾಗಿ ಜನರ ಸಂಕಟಗಳ ಬಗ್ಗೆ, ನೋವುಗಳ ಬಗ್ಗೆ ಆಲಿಸುವುದು ಬಹಳ ಮುಖ್ಯ ಆ ಬಳಿಕ ಅವುಗಳಿಗೆ ಪರಿಹಾರ ರೂಪದಲ್ಲಿ ಮಾತುಗಳನ್ನು ಆಡಬೇಕು. ಆದರೆ ಜನ ಸಾಮಾನ್ಯರ ಮಾತುಗಳನ್ನು ಕೇಳಿಸಿಕೊಳ್ಳುವ ಎಲ್ಲ ದಾರಿಗಳನ್ನು ಮುಚ್ಚಿ, ಮಾಸಿಕ 'ಪ್ರವಚನ'ಕ್ಕಷ್ಟೇ ಸೀಮಿತರಾಗಿ ಅದಕ್ಕೆ ಅವರು 'ಮನ್ ಕಿ ಬಾತ್' ಎಂದು ಹೆಸರಿಟ್ಟರು. ಅದು ಅವರ ಮನದ ಮಾತಾಗಿತ್ತೇ ಹೊರತು, ಜನರ ಮನದ ಮಾತಾಗಿರಲಿಲ್ಲ.
ಕನಿಷ್ಠ ತಾನು ಆಡುವ ಮಾತುಗಳನ್ನು ಜನಸಾಮಾನ್ಯರು ಎಷ್ಟರಮಟ್ಟಿಗೆ ಕೇಳಿಸಿಕೊಂಡಿದ್ದಾರೆ ಎನ್ನುವ ಅರಿವೂ ಅವರಿಗಿದ್ದಂತೆ ಇಲ್ಲ. ಇದ್ದಿದ್ದರೆ, 'ಮನ್ ಕಿ ಬಾತ್' ನೂರು ತಲುಪಿದ ಸಂಭ್ರಮವನ್ನು ಅವರು ಆಚರಿಸಿಕೊಳ್ಳುತ್ತಿರಲಿಲ್ಲ. ತಾನೇ ಆಡಿದ ಮಾತುಗಳನ್ನು ತಾನೇ ಸಂಭ್ರಮಿಸಿ ಅದನ್ನು ಆಚರಿಸಿಕೊಂಡ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರೇ ಇರಬೇಕು. ಈ ದೇಶದಲ್ಲಿ ಪ್ರವಚನ ನೀಡುವವರ ಕೊರತೆಯಿಲ್ಲ. ಪ್ರಧಾನಿಯ ಕೆಲಸ ಪ್ರವಚನ ನೀಡುವುದು ಖಂಡಿತ ಅಲ್ಲ, ಜೀವನದಲ್ಲಿ ಎಲ್ಲ ಕೆಲಸ ಒತ್ತಡಗಳಿಂದ ಮುಕ್ತರಾದವರು ಅಂತಿಮವಾಗಿ 'ಪ್ರವಚನ'ವನ್ನು ವೃತ್ತಿಯಾಗಿ ಆರಿಸಿಕೊಳ್ಳುತ್ತಾರೆ. ಹಾಗೆಯೇ ನಿವೃತ್ತಿಯ ಆನಂತರದ ದಿನಗಳನ್ನು ಕಳೆಯಲು ಪ್ರವಚನ ಆಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ದೈನಂದಿನ ಸಂಕಟಗಳಲ್ಲಿ ಬೇಯುವವರ ಮುಂದೆ ಪ್ರವಚನಗಳನ್ನು ಮಾಡುವುದೆಂದರೆ, ರೋಮ್ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸಿದಂತೆ. ಪ್ರಧಾನಿಯಾದಾಕ್ಷಣ ನಾಯಕನೊಬ್ಬ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಾನೆ. ಯಾಕೆಂದರೆ ದೇಶದ ಜನರ ನೋವು ನಲಿವುಗಳ ಹೊಣೆ ಅವನ ಕೈಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಜನರೊಂದಿಗೆ ಬೆರೆಯಲು ಪ್ರಧಾನಿಗೆ ನೂರಾರು ದಾರಿಗಳಿವೆ.
ಕನಿಷ್ಠ ಪತ್ರಿಕಾಗೋಷ್ಠಿಗಳನ್ನು ನಡೆಸಿ ಮಾಧ್ಯಮದ ಜನರ ನಡುವೆ ಮಾತುಕತೆ ನಡೆಸಿದರೂ ಅದು ಪರೋಕ್ಷವಾಗಿ ಈ ದೇಶದ ಜನರ ಜೊತೆಗೆ ಮಾತುಕತೆ ನಡೆಸಿದಂತೆ. ಪತ್ರಕರ್ತರು ಜನರನ್ನು ಪ್ರತಿನಿಧಿಸುತ್ತಾರೆ. ಜನರ ನೋವು, ಸಂಕಟಗಳ ಪ್ರತಿನಿಧಿಯಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ನೀಡುವ ಉತ್ತರ ತಲುಪುವುದು ಜನರಿಗೆ. ಜನರ ಸಂಕಟಗಳನ್ನು ಆಲಿಸುವುದಕ್ಕೆ ಮತ್ತು ಅವರ ನೋವುಗಳ ಜೊತೆಗೆ ಬೆರೆಯುವುದಕ್ಕಿರುವ ಅತ್ಯುತ್ತಮ ಮಾರ್ಗ ಪತ್ರಿಕಾಗೋಷ್ಠಿ. ಆದರೆ ಪ್ರಧಾನಿಯಾದ ದಿನದಿಂದ ಅವರು ಪತ್ರಿಕಾಗೋಷ್ಠಿಯನ್ನು ಎದುರಿಸಲೇ ಇಲ್ಲ. ಅಂದರೆ ಜನಸಾಮಾನ್ಯರನ್ನು ಎದುರಿಸುವ ಧೈರ್ಯವನ್ನು ಅವರು ತೋರಿಸಲೇ ಇಲ್ಲ. ಸ್ವಯಂ ದಿಲ್ಲಿಯ ನಿವಾಸದಲ್ಲಿ ತನಗೆ ತಾನೇ ದಿಗ್ಬಂಧನ ಹೇರಿಕೊಂಡು ''ಜನರಿಂದ ದೂರವಾದ ಕೊರತೆ ಕಾಡುತ್ತಿತ್ತು' ' ಎಂದರೆ ಆ ಕೊರತೆಗೆ ನಿಜಕ್ಕೂ ಯಾರು ಹೊಣೆ?
'ಮನ್ ಕಿ ಬಾತ್' ಸಂವಾದ ಆಗಿರಲಿಲ್ಲ. ಪ್ರಧಾನಿ ತಿಂಗಳಿಗೊಂದು ವಿಷಯವನ್ನು ಆರಿಸಿ ಅದರ ಬಗ್ಗೆ ಕೊರೆಯುತ್ತಿದ್ದರು. ಕನಿಷ್ಠ ದೇಶ ಎದುರಿಸುತ್ತಿರುವ ವರ್ತಮಾನದ ವಿವಿಧ ವಿಷಯಗಳನ್ನು ತೆಗೆದುಕೊಂಡು ಅದಕ್ಕೊಂದು ಪರಿಹಾರ ನೀಡಿದ್ದರೂ ಮನ್ಕಿ ಬಾತ್ ಅರ್ಥಪೂರ್ಣವಾಗಿ ಬಿಡುತ್ತಿತ್ತೇನೋ. ಮನ್ ಕಿ ಬಾತ್ ಜನರ ನಡುವೆ ಬೆರೆಯುವ ಪ್ರಯತ್ನವೇ ಆಗಿದ್ದಿದರೆ, ಈ ದೇಶದಲ್ಲಿ ನೋಟು ನಿಷೇಧದಿಂದ ಬೀದಿಗೆ ಬಿದ್ದ ಕಾರ್ಮಿಕರು, ಉದ್ಯಮಿಗಳ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿ ಬಿಡುತ್ತಿತ್ತು. ಕೊರೋನ ಕಾಲದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಜನರೆಷ್ಟು ಎನ್ನುವ ಅಂಕಿಅಂಶಗಳ ಬಗ್ಗೆ ಅವರಲ್ಲಿ ಮಾಹಿತಿ ಇರುತ್ತಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಬೀದಿ ಪಾಲಾಗಿ ರಸ್ತೆಯಲ್ಲಿ ಮೃತಪಟ್ಟ ಕಾರ್ಮಿಕರ ಅಂಕಿ ಸಂಕೆಗಳ ಬಗ್ಗೆಯೂ ಅವರಲ್ಲಿ ದಾಖಲೆಯಿರುತ್ತಿತ್ತು. ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾ ರಸ್ತೆಯಲ್ಲೇ ಮೃತಪಟ್ಟ ರೈತರ ಸಂಖ್ಯೆಯ ಬಗ್ಗೆಯೂ ಅವರಿಗೆ ಅರಿವಿರುತ್ತಿತ್ತು. ಸಂಸತ್ನಲ್ಲಿ ಈ ಬಗ್ಗೆ ವಿರೋಧ ಪಕ್ಷ ಪ್ರಶ್ನೆ ಮಾಡಿದಾಗ ''ನಮ್ಮ ಬಳಿ ಅಂಕಿ ಸಂಕೆಗಳಿಲ್ಲ. ನಮ್ಮ ಬಳಿ ಆ ಬಗ್ಗೆ ಮಾಹಿತಿಗಳಿಲ್ಲ'' ಎಂದು ಕೈಚೆಲ್ಲುವ ಸ್ಥಿತಿ ಪ್ರಧಾನಿಗೆ ಬರುತ್ತಿರಲಿಲ್ಲ. ಕನಿಷ್ಠ ಭಾಷಣಗಳನ್ನು ಗೊಬ್ಬರವಾಗಿ ಬಳಸುವ ಅವಕಾಶವಿದ್ದಿದ್ದರೆ ಪ್ರಧಾನಿ ಮೋದಿಯವರು ಮಾಡಿದ 'ಮನ್ ಕಿ ಬಾತ್' ಉಪಯೋಗಕ್ಕೆ ಬರುತ್ತಿತ್ತು.
ಅವರ ಭಾಷಣಗಳನ್ನೇ ಗೊಬ್ಬರವಾಗಿ ಹಲವು ದಶಕಗಳ ಕಾಲ ರೈತರು ಬಳಸಬಹುದಾಗಿತ್ತು. ಅವರ ಭಾಷಣಗಳನ್ನು ಬೇಯಿಸಿ ಗಂಜಿ ಮಾಡುವ ಅವಕಾಶವಿದ್ದಿದ್ದರೆ, 'ಮನ್ ಕಿ ಬಾತ್'ನ್ನು ರೇಷನ್ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ವಿತರಿಸಿ ಅವರ ಹಸಿವನ್ನಾದರೂ ತಣಿಸಬಹುದಿತ್ತು ಅಥವಾ ಅದರಲ್ಲಿ ಒಂದಿಷ್ಟು ಎನರ್ಜಿ ಇದ್ದಿದ್ದರೆ, ಅನಿಲ ಸಿಲಿಂಡರ್ ಕೊರತೆಯಿಂದ ನರಳುತ್ತಿರುವ ದೇಶ, ಅಡುಗೆಗೆ ಇಂಧನವಾಗಿಯಾದರೂ ಬಳಸುತ್ತಿತ್ತು. ಉಪನ್ಯಾಸಕನಾಗಲು ಕೂಡ ಕಾಲೇಜುಗಳು ವಿದ್ಯಾರ್ಹತೆಯನ್ನು ಕೇಳುತ್ತದೆ. ತನ್ನ ವಿದ್ಯಾರ್ಹತೆಯನ್ನೇ ಬಹಿರಂಗ ಪಡಿಸಲು ಸಿದ್ಧರಿಲ್ಲದ ಪ್ರಧಾನಿ ಮೋದಿಯವರು, ಇದೀಗ ಈ ದೇಶದ ಜನಸಾಮಾನ್ಯರ ನೋವು ಸಂಕಟಗಳೊಂದಿಗೆ ಯಾವೊಂದು ಬಂಧವೂ ಇಲ್ಲದ ಒಣ ಭಾಷಣ ಗಳನ್ನು ಮಾಡಿ ಸಮಯ ಕಳೆದು, ಅದನ್ನೇ ತನ್ನ ಸಾಧನೆಯೆಂದು ಬಿಂಬಿಸಲು ಹೊರಟಿರುವುದು ವಿಪರ್ಯಾಸವೇ ಸರಿ.