ನಬ್ಲುಸ್ ಮೇಲೆ ಇಸ್ರೇಲ್ ಸೇನೆ ದಾಳಿ: 3 ಫೆಲೆಸ್ತೀನೀಯರ ಸಾವು, ನಾಲ್ವರಿಗೆ ಗಾಯ
ರಮಲ್ಲಾ (ಆಕ್ರಮಿತ ಪಶ್ಚಿಮ ದಂಡೆ), ಮೇ 4: ಫೆಲೆಸ್ತೀನ್ನ ಉತ್ತರದ ನಗರ ನಬ್ಲುಸ್ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂವರು ಫೆಲೆಸ್ತೀನಿಯರು ಹತರಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಇಸ್ರೇಲಿ ಸೈನಿಕರು ಗುರುವಾರ ಮೂವರು ಫೆಲೆಸ್ತೀನೀಯರನ್ನು ಹತ್ಯೆಗೈದಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.
ಈ ನಡುವೆ, ಇಸ್ರೇಲ್ ಸೇನೆ ಮತ್ತು ಬೇಹುಗಾರಿಕಾ ಇಲಾಖೆಯು ಹೇಳಿಕೆಯೊಂದನ್ನು ನೀಡಿ, ಮೃತರಲ್ಲಿ ಇಬ್ಬರು ಎಪ್ರಿಲ್ 7ರಂದು ಜೆರಿಕೊದಲ್ಲಿ ನಡೆದ ಗುಂಡು ಹಾರಾಟಕ್ಕೆ ಸಂಬಂಧಿಸಿದವರಾಗಿದ್ದಾರೆ ಎಂದು ಹೇಳಿದೆ. ಆ ಘಟನೆಯಲ್ಲಿ, ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಸ್ರೇಲ್ನ ವಸಾಹತುಗಳಲ್ಲಿ ನೆಲೆಸಿದ್ದ ಇಬ್ಬರು ಸೋದರಿಯರು ಮೃತಪಟ್ಟಿದ್ದರು. ಅವರ ವಾಹನದ ಮೇಲೆ ದಾಳಿ ನಡೆಸಲಾಗಿತ್ತು. ಗಾಯಗೊಂಡಿದ್ದ ಅವರ ತಾಯಿ ಬಳಿಕ ಕೊನೆಯುಸಿರೆಳೆದಿದ್ದರು.
ನಬ್ಲುಸ್ ಹಳೆನಗರದಲ್ಲಿ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 150 ಮಂದಿ ಆಶ್ರುವಾಯು ಉಸಿರಾಡಿ ಅಸ್ವಸ್ಥರಾಗಿದ್ದಾರೆ ಎಂದು ಫೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ತಿಳಿಸಿದೆ.
2023ರಲ್ಲಿ ಈವರೆಗೆ ಇಸ್ರೇಲ್ ಸೇನೆ ಮತ್ತು ಇಸ್ರೇಲಿ ವಸಾಹತುಗಾರರು 20 ಮಕ್ಕಳು ಸೇರಿದಂತೆ ಕನಿಷ್ಠ 107 ಫೆಲೆಸ್ತೀನೀಯರನ್ನು ಕೊಂದಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ತಿಳಿಸಿದೆ.