ಭಟ್ಕಳದಲ್ಲಿ ಶಾಂತಿ ಸೌಹಾರ್ದತೆ, ಯುವಕರ ಭವಿಷ್ಯ ರೂಪಿಸುವ ವ್ಯಕ್ತಿಗೆ ಮತ ನೀಡುವಂತೆ ತಂಝೀಮ್ ಕರೆ
ಭಟ್ಕಳ: ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಒದಗಿಸಬಲ್ಲವು. ಮೇ.10 ರಂದು ನಡೆಯುವ ಮತದಾನದಲ್ಲಿ ಎಲ್ಲರೂ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತವನ್ನು ಚಲಾಯಿಸಿ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದಿರಿ. ಭಟ್ಕಳ ಹೊನ್ನಾವರ-ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಮತದಾನವಾಗಬೇಕು. ಭಟ್ಕಳದಲ್ಲಿ ಶಾಂತಿ ಸೌಹಾರ್ದತೆ, ಅಭಿವೃದ್ಧಿ, ಯುವಕರ ಭವಿಷ್ಯ ರೂಪಿಸುವ ವ್ಯಕ್ತಿಗೆ ಮತನೀಡುವಂತೆ ತಂಝೀಮ್ ಸಂಸ್ಥೆಯ ರಾಜಕೀಯ ಸಮಿತಿ ಸಂಚಾಲಕ ನ್ಯಾಯವಾದಿ ಇಮ್ರಾನ್ ಲಂಕಾ ಕರೆ ನೀಡಿದರು.
ಅವರು ಶುಕ್ರವಾರ ಸಂಜೆ ತಂಝೀಮ್ ಕಾರ್ಯಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮತದಾನ ಹೆಚ್ಚಳಕ್ಕೆ ಸರ್ಕಾರವು ಕೂಡ ಜಾಗೃತಿ ಮೂಡಿಸುತ್ತಿದೆ. ಸಾರ್ವಜನಿಕರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮತ ಚಲಾಯಿಸುವಾಗ ಖಂಡಿತವಾಗಿಯೂ ನಿಮ್ಮ ಮಕ್ಕಳ, ಭವಿಷ್ಯ, ಅವರ ಉದ್ಯೋಗ, ನಿಮ್ಮ ನಿಮ್ಮ ಪ್ರದೇಶದಲ್ಲಿನ ಶಾಂತಿ, ಸುವಸ್ಥೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವ ಯೋಗ್ಯ ವ್ಯಕ್ತಿಗೆ ಮತ ನೀಡಿ. ಹಾಗೆಯೇ ಭ್ರಷ್ಟಚಾರ ರಹಿತ ಆಡಳಿತ, ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಪಕ್ಷಕ್ಕೆ ನಿಮ್ಮ ಮತ ನೀಡಿ ಎಂದು ಲಂಕಾ ಮನವಿ ಮಾಡಿಕೊಂಡರು.
ತಂಝೀಮ್ ಈ ಬಾರಿ ಯಾರನ್ನು ಬೆಂಬಲಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್ ಲಂಕಾ, ತಮಗೆ ಬೆಂಬಲ ನೀಡುವಂತೆ ಆಮ್ ಆದ್ಮಿ, ಜೆ.ಡಿ.ಎಸ್ ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ತಂಝೀಮ್ ಸಂಸ್ಥೆಗೆ ಮನವಿ ಸಲ್ಲಿದ್ದಾರೆ. ಈ ಮೂವರಲ್ಲಿ ಕೋಮುವಾದಿ ಶಕ್ತಿಯ ವಿರುದ್ಧ ಯಾರು ಸುಲಭವಾಗಿ ಗೆಲ್ಲುತ್ತಾರೋ ಅವರ ಬೆಂಬಲಕ್ಕೆ ತಂಝೀಮ್ ನಿಲ್ಲುತ್ತದೆ. ಜೆ.ಡಿ.ಎಸ್ ಮತ್ತು ಕಾಂಗ್ರೇಸ್ ಇವೆರಡರ ನಡುವೆ ಯಾರನ್ನೂ ಬೆಂಬಲಿಸಬೇಕು ಎಂಬ ಗೊಂದಲದಲ್ಲಿ ನಾವಿದ್ದೇವೆ. ಇನ್ನೂ ನಮ್ಮಲ್ಲಿ ಸಮಯವಿದೆ. ಒಂದೆರಡು ದಿನದಲ್ಲಿ ನಮ್ಮ ನಿರ್ಣಯ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜಕೀಯ ಸಮಿತಿಯ ಸದಸ್ಯ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ಉಪಸ್ಥಿತರಿದ್ದರು.