ಅನ್ಯಾಕ್ರಮಣಕಾರಿಗಳಿಗಾಗಿ ಇತಿಹಾಸ
ಇತಿಹಾಸವೆನ್ನುವುದು, ಮಹಾನ್ ಡಚ್ ವಿದ್ವಾಂಸ ಪೀಟರ್ ಗೈಲ್ ಒಮ್ಮೆ ಹೇಳಿದ್ದಂತೆ ಕೊನೆಯೇ ಇರದ ವಾದ. ವಿಭಿನ್ನ ಚೌಕಟ್ಟುಗಳು, ವಿಭಿನ್ನ ವಿಧಾನಗಳು, ವಿಭಿನ್ನ ನಿರೂಪಣಾ ತಂತ್ರಗಳೊಂದಿಗೆ ತೆರೆದುಕೊಳ್ಳುವ ಮೂಲಕ ಮಾತ್ರವೇ ಭಾರತದ ಇತಿಹಾಸದ ಅಧ್ಯಯನವನ್ನು ಶ್ರೀಮಂತಗೊಳಿಸಲು ಸಾಧ್ಯ. ಆದರೆ, ಇತಿಹಾಸಕಾರನ ಮೇಲೆ ಸೈದ್ಧಾಂತಿಕ ಕಟ್ಟಳೆ ಹಾಕಿ, ಅವರು ಏನನ್ನು ಎತ್ತಿಹೇಳಬೇಕು, ಯಾವುದನ್ನು ಹೇಳಬಾರದು ಎಂದು ಅಧಿಕಾರದಲ್ಲಿರುವ ರಾಜಕಾರಣಿ ಆದೇಶಿಸಿದರೆ ಅದು ಸಂಭವಿಸಲಾರದು.
ಕಳೆದ ನವೆಂಬರ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಹೊಸದಿಲ್ಲಿಯಲ್ಲಿ ಮಾಡಿದ ಭಾಷಣದಲ್ಲಿ, ಇತಿಹಾಸವನ್ನು ಸರಿಯಾಗಿ ಮತ್ತು ವೈಭವಯುತವಾಗಿ ನಿರೂಪಿಸಲು ವಿದ್ವಾಂಸರಿಗೆ ಸೂಚಿಸಿದರು. ದೇಶದಲ್ಲಿ 150 ವರ್ಷಗಳ ಕಾಲ ಆಳ್ವಿಕೆ ನಡೆಸಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಕುರಿತು ಸಂಶೋಧನೆಗೆ ಕರೆ ನೀಡಿದರು.
ಗೃಹ ಸಚಿವರ ಮನವಿಗೆ ತಕ್ಷಣವೇ ಸ್ಪಂದಿಸಿದ್ದು ಕೇಂದ್ರ ಸರಕಾರದಿಂದ ಧನಸಹಾಯ ಪಡೆಯುವ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್(ಐಸಿಎಚ್‌ಆರ್). ಫೆಬ್ರವರಿ ಕೊನೇ ವೇಳೆಗೆ 'ದಿ ಪ್ರಿಂಟ್'ನಲ್ಲಿ ಪ್ರಕಟವಾದ ವರದಿಯೊಂದು, ದಾಖಲೆಯ ಮೂರೇ ವಾರಗಳ ಅವಧಿಯಲ್ಲಿ ಐಸಿಎಚ್‌ಆರ್ 'ಮಧ್ಯಯುಗೀನ ಭಾರತದ ವೈಭವ: 8ರಿಂದ 18ನೇ ಶತಮಾನದ ಭಾರತೀಯ ರಾಜವಂಶಗಳ ಕುರಿತ ಅನ್ವೇಷಣೆ' ಎಂಬ ಪ್ರದರ್ಶನವೊಂದನ್ನು ವ್ಯವಸ್ಥೆಗೊಳಿಸಿದ್ದರ ಬಗ್ಗೆ ಹೇಳಿತ್ತು. ಪ್ರದರ್ಶನದಲ್ಲಿ ಒಳಪಡಿಸಲಾದ ರಾಜವಂಶಗಳಲ್ಲಿ ಚೋಳರು, ಕಾಕತೀಯರು, ಮರಾಠರು ಮತ್ತು ವಿಜಯನಗರ ಸಾಮ್ರಾಜ್ಯದ ಅರಸರು ಸೇರಿದ್ದರು. ಆದರೆ ಯಾವುದೇ ಮುಸ್ಲಿಮ್ ಆಡಳಿತಗಾರ ಅಥವಾ ರಾಜವಂಶದ ಬಗ್ಗೆ ಪ್ರಸ್ತಾಪವಿರಲಿಲ್ಲ.
ಸರಕಾರಿ ಸಂಸ್ಥೆಯಾಗಿ ಐಸಿಎಚ್‌ಆರ್ ಯಾವಾಗಲೂ ಆಡಳಿತ ಪಕ್ಷದ ರಾಜಕೀಯ ಆದ್ಯತೆಗಳನ್ನೇ ಪ್ರತಿಬಿಂಬಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದು, ಇತಿಹಾಸದ ಮಾರ್ಕ್ಸ್‌ವಾದಿ ಪ್ರೇರಿತ ಆವೃತ್ತಿಯನ್ನು ಎತ್ತಿಹಿಡಿದ ಎಡ ರಾಷ್ಟ್ರೀಯವಾದಿಗಳ ಗುಂಪಿನ ಕೈಯಲ್ಲಿತ್ತು. ಹಿಂದಿನ ಈ ನಡೆಯನ್ನೇ ಅದರ ಈಗಿನ ಪಕ್ಷಪಾತ ಧೋರಣೆಯ ಸಮರ್ಥನೆಗಾಗಿ ಸರಕಾರದ ಬೆಂಬಲಿಗರು ಬಳಸುತ್ತಾರೆ.
ಆದರೂ ಅತ್ಯುತ್ತಮ ಮಾರ್ಕ್ಸ್‌ವಾದಿ ಇತಿಹಾಸಕಾರರು ತಮ್ಮ ಕಾರ್ಯಕ್ಕೆ ಒಂದು ನಿರ್ದಿಷ್ಟ ವಿಶ್ಲೇಷಣಾತ್ಮಕ ಸ್ಪಷ್ಟತೆ ತಂದಿದ್ದರು. ಪ್ರಾಥಮಿಕ ಆಕರಗಳ ಆಳವಾದ ನೋಟವಿತ್ತು. ಆದರೆ ಪ್ರಸಕ್ತ ಹಿಂದುತ್ವ ಗುಂಪಿನಿಂದಾಗುತ್ತಿರುವ ಇತಿಹಾಸ ಬರವಣಿಗೆಯಲ್ಲಿ (ಅಥವಾ ತಿದ್ದಿ ಬರೆಯುವಲ್ಲಿ) ಇವೆರಡೂ ಅಂಶಗಳ ಕೊರತೆಯಿದೆ. ನೆನಪಿಡಬೇಕಾಗಿರುವ ಅತಿ ಮುಖ್ಯ ವಿಷಯವೆಂದರೆ ನಮ್ಮ ಅತ್ಯುತ್ತಮ ಇತಿಹಾಸಕಾರರು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಅಡಿಯಲ್ಲಿಯೇ ಬರುತ್ತಾರೆಂಬುದು. ಅವರು ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದವರು. ಅಲ್ಲಿ ಅವರು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದವರು. ತಮ್ಮದೇ ಆದ ಪುಸ್ತಕಗಳು, ಪ್ರಬಂಧಗಳನ್ನು ಬರೆದವರು. ಅವು ವ್ಯಾಪಕ ವಿಷಯ ವ್ಯಾಪ್ತಿಯವಾಗಿದ್ದು, ಅಷ್ಟೇ ದೊಡ್ಡ ವ್ಯಾಪ್ತಿಯ ಪ್ರಾಥಮಿಕ ಆಕರಗಳನ್ನು ಬಳಸಿಕೊಂಡಿವೆ ಮತ್ತು ಅಪರೂಪಕ್ಕೆ ಪಕ್ಷ-ರಾಜಕೀಯ ಅಜೆಂಡಾವನ್ನೂ ಪೂರೈಸಿವೆ. ಈ ಇತಿಹಾಸಗಳನ್ನು ಬರೆದವರು ವಿದ್ವಾಂಸರೇ ಹೊರತು ತೀರಾ ಸಾಮಾನ್ಯ ಬರಹಗಾರರಲ್ಲ. ಅವರಲ್ಲಿ ಮಾರ್ಕ್ಸ್ ವಾದಿಗಳಾಗಿದ್ದವರು ಕೆಲವರಷ್ಟೇ. ಹೆಚ್ಚಿನವರು ಅಲ್ಲ.
ಸ್ವಾತಂತ್ರ್ಯದ ನಂತರದ ದಶಕಗಳಲ್ಲಿನ ಐತಿಹಾಸಿಕ ಸಂಶೋಧನೆಯ ವಿಚಾರಕ್ಕೆ ನಾನು ನಂತರ ಬರುತ್ತೇನೆ. ಸದ್ಯಕ್ಕೆ, ಇಂದಿನ ಸರಕಾರ ಉತ್ಸಾಹದಿಂದ ಉತ್ತೇಜಿಸುತ್ತಿರುವ ಇತಿಹಾಸದ ಮರುರಚನೆ ಬಗ್ಗೆ ಹೇಳಬೇಕು. ಇತಿಹಾಸವನ್ನು ಅಧ್ಯಯನ ಮಾಡುವ ಅಥವಾ ಬರೆಯುವವರಿಂದ ಬಿಜೆಪಿ ವಿಚಾರಧಾರೆಯವರು ಮತ್ತವರ ಬೆಂಬಲಿಗರು ಏನನ್ನು ನಿರೀಕ್ಷಿಸುತ್ತಾರೆ? ಅವರು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿರುವುದರ ಆಧಾರದ ಮೇಲೆ, 'ಹಿಂದುತ್ವ ಇತಿಹಾಸ' ಎಂದು ಕರೆಯಬಹುದಾದ ಅದು ಮೂರು ಕೇಂದ್ರ ತತ್ವಗಳನ್ನು ಹೊಂದಿರುವಂತೆ ಕಾಣಿಸುತ್ತದೆ. ಅದು ಹೀಗಿದೆ:
ಪ್ರಾಚೀನ ಚರಿತ್ರೆಯ ವಿಚಾರಕ್ಕೆ ಬಂದಾಗ, ತತ್ವಶಾಸ್ತ್ರ, ಭಾಷೆ, ಸಾಹಿತ್ಯ, ರಾಜ್ಯಶಾಸ್ತ್ರ, ವೈದ್ಯಕೀಯ, ಖಗೋಳಶಾಸ್ತ್ರ ಇತ್ಯಾದಿಗಳಲ್ಲಿ ಭಾರತ ಪ್ರಪಂಚಕ್ಕಿಂತ (ಅದರಲ್ಲೂ ವಿಶೇಷವಾಗಿ ಯುರೋಪ್ ಮತ್ತು ಅಮೆರಿಕಗಳಿಗಿಂತ) ಮುಂದಿತ್ತು ಎಂದು ಚಿತ್ರಿಸಲು ಇತಿಹಾಸಕಾರರನ್ನು ಹಿಂದುತ್ವ ಕೇಳುತ್ತದೆ. ಇದು ಸಾಂಸ್ಕೃತಿಕ ಹೆಮ್ಮೆಯನ್ನು ಹೆಚ್ಚಿಸುವ ಪ್ರಯತ್ನ. ಅಲ್ಲದೆ, ಭಾರತ ಶೀಘ್ರದಲ್ಲೇ ಪ್ರಪಂಚವನ್ನು ಮತ್ತೆ ಮುನ್ನಡೆಸಲಿದೆ ಎಂಬುದಕ್ಕೆ ಭಾಗಶಃ ಸಮರ್ಥನೆ.
ಮಧ್ಯಯುಗೀನ ಅವಧಿಗೆ ಬಂದಾಗ, ಹಿಂದುತ್ವ ಮುಸ್ಲಿಮ್ ಯೋಧರು ಮತ್ತು ಆಡಳಿತಗಾರರನ್ನು ದುಷ್ಟರು ಮತ್ತು ದ್ರೋಹಿಗಳೆಂದು ಚಿತ್ರಿಸಲು, ಆದರೆ ಹಿಂದೂ ಯೋಧರು ಮತ್ತು ಆಡಳಿತಗಾರರನ್ನು ಉದಾತ್ತ ಮತ್ತು ಸದ್ಗುಣವಂತರು ಎಂದು ಬಿಂಬಿಸಲು ಇತಿಹಾಸಕಾರರನ್ನು ಕೇಳುತ್ತದೆ.
ಆಧುನಿಕ ಕಾಲಕ್ಕೆ ಬಂದಾಗ, ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರವನ್ನು ಕಡಿಮೆ ಮಾಡಲು ಮತ್ತು ಪೂರ್ತಿ ಯಾಗಿ ಅಥವಾ ಭಾಗಶಃ ಕಾಂಗ್ರೆಸೇತರ ನೆಲೆಗಳನ್ನು ಮೌಲ್ಯೀಕರಿಸಲು ಇತಿಹಾಸಕಾರರನ್ನು ಹಿಂದುತ್ವ ಕೇಳುತ್ತದೆ. ವೈಯಕ್ತಿಕವಾಗಿ, ಗಾಂಧಿ ಮತ್ತು ನೆಹರೂ ಅವರನ್ನು ದುರ್ಬಲ ಮತ್ತು ಚಂಚಲ ಎಂದು, ಸಾವರ್ಕರ್ ಮತ್ತು ಬೋಸ್‌ರನ್ನು ವೀರರು ಮತ್ತು ಮಣಿಯದವರು ಎಂದು ನಿರೂಪಿಸಬೇಕೆಂಬುದು ಈ ಸಿದ್ಧಾಂತದ ಒತ್ತಾಯ.
ಹಿಂದುತ್ವ ಇತಿಹಾಸ ಅಸಂಗತತೆ ಮತ್ತು ವಾಸ್ತವಿಕ ದೋಷಗಳಿಂದ ಕೂಡಿದೆ. ಭಾರತವನ್ನು 'ಪ್ರಜಾಪ್ರಭುತ್ವದ ತಾಯಿ' ಎಂದು ಹೇಳಿಕೊಳ್ಳಲಾಗದು ಮತ್ತು ಅದೇ ವೇಳೆ ರಾಜರನ್ನು ದೈವತ್ವಕ್ಕೇರಿಸುವ ಮಧ್ಯಯುಗೀನ ಅಥವಾ ಪ್ರಾಚೀನ ರಾಜ್ಯಗಳ ವೈಭವೀಕರಣವೂ ಸಾಧ್ಯವಿಲ್ಲ. ದೇಶದಲ್ಲಿ ಎಲ್ಲಿಯೂ 150 ವರ್ಷಗಳಿಗೂ ಹೆಚ್ಚು ಕಾಲ ಆಳಿದ ರಾಜವಂಶಗಳಿವೆ ಎನ್ನಲಾಗದು. ಅದೇ ಸಮಯದಲ್ಲಿ, ಕಾಂಗ್ರೆಸ್‌ನದು ವಂಶಪಾರಂಪರ್ಯ ರಾಜಕಾರಣ ಎಂಬ ಟೀಕೆಯೂ ಸಲ್ಲದು. ಹಾಗೆಯೇ, ಬೋಸ್ ಮತ್ತು ಗಾಂಧಿ ಪ್ರತಿಸ್ಪರ್ಧಿಗಳೆಂದು ಬಿಂಬಿಸುವುದು, ಅವರಿಬ್ಬರೂ ದೀರ್ಘ ಕಾಲದವರೆಗೆ ಒಟ್ಟಿಗೆ ಕೆಲಸ ಮಾಡಿದ್ದನ್ನು, ರಾಜಕೀಯವಾಗಿ ಬೇರ್ಪಟ್ಟ ಬಳಿಕವೂ ಗಾಂಧಿ ಕುರಿತು ಬೋಸ್ ಅಗಾಧ ಗೌರವ ಹೊಂದಿದ್ದನ್ನು, ಅವರನ್ನು 'ರಾಷ್ಟ್ರಪಿತ' ಎಂದು ಶ್ಲಾಘಿಸಿದ್ದನ್ನು ಹಾಗೂ ಗಾಂಧಿ, ನೆಹರೂ ಮತ್ತು ಮೌಲಾನಾ ಆಝಾದ್ ಹೆಸರಿನ ಬ್ರಿಗೇಡ್‌ಗಳೊಂದಿಗೆ ಸೈನ್ಯವನ್ನು ಬೋಸ್ ಮುನ್ನಡೆಸಿದ್ದರೆಂಬುದನ್ನು ನಿರಾಕರಿಸಿದಂತಾಗುತ್ತದೆ. ಅಂತಿಮವಾಗಿ, ಹಿಂದೂಗಳನ್ನು ಸ್ವಾಭಾವಿಕವಾಗಿ ಸದ್ಗುಣಿಗಳು ಮತ್ತು ವಿದೇಶಿಯರು ಅಥವಾ ಆಕ್ರಮಣಕಾರರಿಂದ ತಾರತಮ್ಯಕ್ಕೆ ಒಳಗಾದರು ಎಂದು ಬಿಂಬಿಸುವುದು, ಪಿತೃಪ್ರಧಾನ ಮತ್ತು ಜಾತಿ ವ್ಯವಸ್ಥೆಯ ಮೂಲಕ, ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಿಗಿಂತಲೂ ಹಿಂದೂಗಳಿಂದಲೇ ಹಿಂದೂಗಳು ಹೆಚ್ಚು ಕ್ರೌರ್ಯ ಮತ್ತು ಅನ್ಯಾಯಕ್ಕೆ ತುತ್ತಾದರೆಂಬ ಅಂಶವನ್ನು ಮರೆಮಾಚುತ್ತದೆ.
ಹಿಂದುತ್ವ ಇತಿಹಾಸದ ಬಗ್ಗೆ ಹೆಚ್ಚು ಸ್ಥೂಲವಾದ ಟೀಕೆ ಎಂದರೆ, ಅದು ಇತಿಹಾಸದ ಕಟ್ಟುವಿಕೆಯಲ್ಲಿ ತಿಳುವಳಿಕೆಯ ಆಳವಾದ ಕೊರತೆಯುಳ್ಳದ್ದಾಗಿದೆ ಎಂಬುದು. ಹಿಂದುತ್ವ ಇತಿಹಾಸಕಾರರು ಪ್ರಸಿದ್ಧ, ಶಕ್ತಿಶಾಲಿ ಮತ್ತು ಪ್ರಭಾವಶಾಲಿ ವ್ಯಕ್ತಿಗಳ ಕೆಲಸದ ಮೇಲೆ ವಿಶೇಷ ಗಮನ ಹರಿಸುತ್ತಾರೆ. ಸೂಕ್ಷ್ಮ ವ್ಯತ್ಯಾಸ ಅಥವಾ ಸಂದರ್ಭವನ್ನು ಗಮನಿಸದೆ ಅವರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ಬಿಂಬಿಸುತ್ತಾರೆ. ಆ ವ್ಯಕ್ತಿಗಳ ಮನುಷ್ಯ ಸಂಬಂಧಗಳು, ಅವರ ಮೇಲಿದ್ದ ಸಾಮಾಜಿಕ ಅಥವಾ ಸಾಂಸ್ಕೃತಿಕ ಪ್ರಭಾವಗಳು, ಅವರ ಕೆಲಸಗಳ ಹಿಂದಿನ ಮಾನಸಿಕ ಪ್ರೇರಣೆಗಳು, ಅವರು ಮಾಡಿಕೊಂಡಿದ್ದಿರಬಹುದಾದ ಹೊಂದಾಣಿಕೆಗಳು ಮತ್ತು ಅವರು ಬಿಟ್ಟುಹೋದ ಸಂಕೀರ್ಣ (ಮತ್ತು ಅಪರೂಪಕ್ಕೊಮ್ಮೆ ಕಪ್ಪು-ಬಿಳುಪು) ಪರಂಪರೆಗಳ ಬಗ್ಗೆ ನಮಗೆ ತಿಳಿದಿರುವುದು ತೀರಾ ಕಡಿಮೆ.
ಯಾವುದೇ ಸಂದರ್ಭದಲ್ಲಿ ಇತಿಹಾಸವು ಪ್ರಸಿದ್ಧ ಅಥವಾ ಶಕ್ತಿಯುತ ಪುರುಷರ ಜೀವನ ಮತ್ತು ಕೆಲಸಗಳಿಗಿಂತ ಹೆಚ್ಚಿನದ್ದಾಗಿರುತ್ತದೆ. ಇತ್ತೀಚಿನ ದಶಕಗಳಲ್ಲಿ, ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ಇತಿಹಾಸಕಾರರು ಗಣ್ಯರಿಗಿಂತಲೂ ಜನಸಾಮಾನ್ಯರ ಕಡೆ ನೋಡುವ ಮೂಲಕ, ಸೋತ ಅಥವಾ ಗೆದ್ದ ಯುದ್ಧಗಳಿಗಿಂತಲೂ ಇತರ ಘಟನೆಗಳನ್ನು ಗಮನಿಸುವ ಮೂಲಕ ಇತಿಹಾಸವನ್ನು ಅದರ ಬಹುಮುಖಿ ನೆಲೆಯಿಂದ ಶೋಧಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ, ರೈತರು, ಕಾರ್ಮಿಕರು, ಕುಶಲಕರ್ಮಿಗಳು, ಆದಿವಾಸಿಗಳು ಮತ್ತಿತರ ಸಬಾಲ್ಟರ್ನ್ ಗುಂಪುಗಳ ಜೀವನ ಮತ್ತು ಹೋರಾಟಗಳ ಅಧ್ಯಯನವಾಗಿರುವ 'ತಳಮಟ್ಟದ ಇತಿಹಾಸ' ಪ್ರವರ್ಧಮಾನಕ್ಕೆ ಬರುತ್ತಿದೆ. ಇದರಿಂದಾಗಿಯೇ, ಸಾಂಪ್ರದಾಯಿಕ ಪುರುಷ ಪ್ರಾಬಲ್ಯದ ದೃಷ್ಟಿಕೋನಗಳಿಂದಾಗಿ ಕಾಣದೆ ಉಳಿದಿದ್ದ ಮನುಷ್ಯಕುಲದ ಅರ್ಧದಷ್ಟು ಕಥೆಗಳನ್ನು ಮುಖ್ಯ ನೆಲೆಗೆ ತರುವ ಮಹಿಳಾ ಇತಿಹಾಸದ ಬೆಳವಣಿಗೆ ಸಾಧ್ಯವಾಗಿದೆ. ಪ್ರಕೃತಿ ಮತ್ತು ನೈಸರ್ಗಿಕ ನಿರ್ಬಂಧಗಳಿಂದ ಮನುಷ್ಯರು ಹೇಗೆ ರೂಪುಗೊಂಡಿದ್ದಾರೆ ಮತ್ತು ಮರುರೂಪುಗೊಳ್ಳುತ್ತಾರೆ ಎಂಬುದನ್ನು ಅಧ್ಯಯನಿಸುವ ಪರಿಸರ ಇತಿಹಾಸದ ಕ್ರಿಯಾತ್ಮಕ ಕ್ಷೇತ್ರ ಪರಿಗಣಿತವಾಗಿದೆ. ಅಥವಾ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ ಮತ್ತು ವಾಸ್ತುಶಿಲ್ಪದಲ್ಲಿನ ಮನುಷ್ಯನ ಸೃಜನಶೀಲತೆಯ ಆಯಾಮಗಳನ್ನು ಪರಿಶೋಧಿಸುವ ಸಾಂಸ್ಕೃತಿಕ ಇತಿಹಾಸದ ಕ್ಷೇತ್ರ, ಸಾಂಸ್ಕೃತಿಕ ಬೇರುಗಳು ಮತ್ತು ಆಧುನಿಕ ಭಾರತೀಯರ ಚಲನಚಿತ್ರ ಮತ್ತು ಕ್ರಿಕೆಟ್ ಗೀಳಿನ ಸಾಮಾಜಿಕ ಪರಿಣಾಮ ಇಂಥವುಗಳ ಕುರಿತ ಮರುಸೃಷ್ಟಿ ಮತ್ತು ಮನರಂಜನೆಯ ಇತಿಹಾಸ ಮುಖ್ಯವಾಗಿವೆ.
ಐತಿಹಾಸಿಕ ಅಧ್ಯಯನದ ರೋಚಕ ಕ್ಷೇತ್ರಗಳ ಈ ಪಟ್ಟಿ ವಿವರಣಾತ್ಮಕವಾಗಿದೆ, ಸಮಗ್ರವಾಗಿಲ್ಲ. ಆದರೂ ಹಿಂದುತ್ವ ಇತಿಹಾಸಕಾರರು ನಿರ್ಲಕ್ಷಿಸುವ, ಆದರೆ ಇತಿಹಾಸದ ಬಗ್ಗೆ ನಿಜವಾದ ಕುತೂಹಲ ಹೊಂದಿರುವ ವಿದ್ಯಾವಂತ ಭಾರತೀಯರು ತಿಳಿಯಲು ಬಯಸಬಹುದಾದ ಮಾನವ ಜೀವನದ ವಿಶಾಲ ನೆಲೆ ಮತ್ತು ಅನುಭವದ ಬಗ್ಗೆ ಸ್ಥೂಲ ನೋಟವನ್ನು ಇದು ನೀಡುತ್ತದೆ. ಅದೃಷ್ಟವಶಾತ್, ಯಾವುದೇ ಸೈದ್ಧಾಂತಿಕ ಅಂಕುಶವಿರದ ವೃತ್ತಿಪರ ಇತಿಹಾಸಕಾರರು ಈ ವಿಷಯಗಳ ಬಗ್ಗೆ ಒಳನೋಟದಿಂದ ಬರೆದಿದ್ದಾರೆ. ಅವರ ಹೆಚ್ಚಿನ ಬರಹಗಳು ಇಂಡಿಯನ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಹಿಸ್ಟರಿ ರಿವ್ಯೆ (ಐಉಖಏ್ಕ) ನಲ್ಲಿ ಪ್ರಕಟಗೊಂಡಿವೆ. ಇದನ್ನು ಸುಮಾರು ಮೂರು ದಶಕಗಳ ಕಾಲ ಸಂಪಾದಿಸಿದ್ದವರು ದಿವಂಗತ ಪ್ರೊ. ಧರ್ಮಾ ಕುಮಾರ್. ಅವರೊಬ್ಬ ತತ್ವಬದ್ಧ ಉದಾರವಾದಿಯಾಗಿದ್ದು, ಎಡ ಮತ್ತು ಬಲ ಸಿದ್ಧಾಂತಗಳೆರಡರಿಂದಲೂ ದೂರವಿದ್ದರು (ಮಾರ್ಕ್ಸ್‌ವಾದಿಗಳಿಗೆ ಅವರೆಂದರೇ ಆಗುತ್ತಿರಲಿಲ್ಲ). ಅವರು ಐತಿಹಾಸಿಕ ಶೋಧದ ವ್ಯಾಪ್ತಿಯನ್ನು ವಿಸ್ತರಿಸುವತ್ತ ಆಸಕ್ತರಾಗಿದ್ದರು. ಸಾಮಾಜಿಕ ಮತ್ತು ಸಾಂಸ್ಕೃತಿಕ, ಹಾಗೆಯೇ ಆರ್ಥಿಕ ಮತ್ತು ರಾಜಕೀಯ ಇತಿಹಾಸದಲ್ಲಿ ತೀವ್ರ ಆಸಕ್ತಿ ಅವರಿಗಿತ್ತು. ಕಿರಿಯ ವಿದ್ವಾಂಸರನ್ನು ಪ್ರೋತ್ಸಾಹಿಸುವ ಹಿರಿತನ ಹೊಂದಿದ್ದರು. ಐಉಖಏ್ಕನಂತಹ ನಿಯತಕಾಲಿಕೆಗಳಲ್ಲಿನ ಸಂಶೋಧನಾ ಪ್ರಬಂಧಗಳಲ್ಲದೆ, ದೇಶದ ಅತ್ಯುತ್ತಮ ಇತಿಹಾಸಕಾರರು ಪ್ರಕಟಿಸಿರುವ ಹಲವಾರು ಕೃತಿಗಳು ಪರಿಣಿತರಿಗಾಗಿ ಮಾತ್ರವಲ್ಲ, ಜನಸಾಮಾನ್ಯರಿಗೂ ಉಪಯುಕ್ತವಾಗಿವೆ.
ಇತಿಹಾಸಕಾರರು ಮಾನವ ಅನುಭವದ ಎಲ್ಲಾ ಆಯಾಮಗಳನ್ನು ಅಧ್ಯಯನ ಮಾಡುತ್ತಾರೆ: ಹಿಂದಿನ ತಲೆಮಾರಿನವರು ಮನೆಗಳನ್ನು ಯಾವುದರಿಂದ ಕಟ್ಟುತ್ತಿದ್ದರು, ಯಾವ ಬೆಳೆಗಳನ್ನು ಬೆಳೆಯುತ್ತಿದ್ದರು, ಅವರ ಆಹಾರ ಯಾವುದಿತ್ತು, ಯಾವ ಬಟ್ಟೆಗಳನ್ನು ಧರಿಸುತ್ತಿದ್ದರು, ಎಂಥ ಹಾಡುಗಳನ್ನು ಹಾಡುತ್ತಿದ್ದರು, ಸಾಮಾಜಿಕ ಸ್ತರ ಮತ್ತು ಸಾಮಾಜಿಕ ಸಂಘರ್ಷದ ಪ್ರಮುಖ ನೆಲೆಗಳೇನಿದ್ದವು, ಯಾವ ಹೊಸ ತಂತ್ರಜ್ಞಾನಗಳನ್ನು ಕಂಡುಕೊಂಡರು ಮತ್ತು ಹಳೆಯ ಯಾವುದನ್ನು ಬಿಟ್ಟರು, ಯಾವ ರಾಜಕೀಯ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದವು ಮತ್ತು ಯಾವ ಕಾನೂನು ಮತ್ತು ಆಡಳಿತಾತ್ಮಕ ಚೌಕಟ್ಟುಗಳಿದ್ದವು, ಅರಣ್ಯ, ನೀರು, ಹವಾಮಾನ ಮತ್ತು ಭೂಮಿಯೆಲ್ಲವೂ ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಎಂಥ ಪಾತ್ರವನ್ನು ವಹಿಸಿದ್ದವು ಎಂಬುದೆಲ್ಲ ಬರುತ್ತವೆ. ಪೂರ್ವ ಇತಿಹಾಸದಿಂದ ಇಂದಿನವರೆಗೆ ಈ ವಿಷಯಗಳ ಕುರಿತು ಭಾರತೀಯ ಮತ್ತು ವಿದೇಶಿ ವಿದ್ವಾಂಸರ ಕೃತಿಗಳ ಬೃಹತ್ತಾದ ಮತ್ತು ಬೆಳೆಯುತ್ತಲೇ ಇರುವ ಗ್ರಂಥಭಂಡಾರವೇ ಇದೆ. ಇತರರ ಪಾಲಿನ ನಿರಂತರ ಆಕರ್ಷಣೆಯಾದ ಈ ಐತಿಹಾಸಿಕ ವಿಷಯಗಳು ಹಿಂದುತ್ವ ಇತಿಹಾಸದ ಅಭ್ಯಾಸಿಗಳಿಗೆ ಮಾತ್ರ ಅಷ್ಟು ರುಚಿಸುವುದಿಲ್ಲ. ಅವರು ತಮ್ಮ ಸೈದ್ಧಾಂತಿಕ ಪಕ್ಷಪಾತವನ್ನು ಹಿಂದೂ ವೀರರು ಮತ್ತು ಹಿಂದೂ ನಾಗರಿಕತೆ ಎಂದು ಉದಾತ್ತಗೊಳಿಸುವ ಮೂಲಕ ಹಾಗೂ ಮುಸಲ್ಮಾನರನ್ನು (ಮತ್ತು ಸಾಂದರ್ಭಿಕವಾಗಿ ಕ್ರಿಶ್ಚಿಯನ್ನರನ್ನು) ವಿಲನ್ ಎಂದು ಪರಿಗಣಿಸುವ ಮೂಲಕ ಖಚಿತಪಡಿಸಲು ಬಯಸುತ್ತಾರೆ.
ಇತಿಹಾಸವೆನ್ನುವುದು, ಮಹಾನ್ ಡಚ್ ವಿದ್ವಾಂಸ ಪೀಟರ್ ಗೈಲ್ ಒಮ್ಮೆ ಹೇಳಿದ್ದಂತೆ ಕೊನೆಯೇ ಇರದ ವಾದ. ವಿಭಿನ್ನ ಚೌಕಟ್ಟುಗಳು, ವಿಭಿನ್ನ ವಿಧಾನಗಳು, ವಿಭಿನ್ನ ನಿರೂಪಣಾ ತಂತ್ರಗಳೊಂದಿಗೆ ತೆರೆದುಕೊಳ್ಳುವ ಮೂಲಕ ಮಾತ್ರವೇ ಭಾರತದ ಇತಿಹಾಸದ ಅಧ್ಯಯನವನ್ನು ಶ್ರೀಮಂತಗೊಳಿಸಲು ಸಾಧ್ಯ. ಆದರೆ, ಇತಿಹಾಸಕಾರನ ಮೇಲೆ ಸೈದ್ಧಾಂತಿಕ ಕಟ್ಟಳೆ ಹಾಕಿ, ಅವರು ಏನನ್ನು ಎತ್ತಿಹೇಳಬೇಕು, ಯಾವುದನ್ನು ಹೇಳಬಾರದು ಎಂದು ಅಧಿಕಾರದಲ್ಲಿರುವ ರಾಜಕಾರಣಿ ಆದೇಶಿಸಿದರೆ ಅದು ಸಂಭವಿಸಲಾರದು. ವಿದ್ವಾಂಸರು ಒಮ್ಮೆ ಇತಿಹಾಸದ ಸ್ಟಾಲಿನಿಸ್ಟ್ ಸುಳ್ಳಿನ ಬಗ್ಗೆ ಮಾತನಾಡಿದ್ದರು. ಅದೃಷ್ಟವಶಾತ್ ಆ ಸಮಸ್ಯೆ ಅಸ್ತಿತ್ವದಲ್ಲಿಲ್ಲ. ಈಗ ನಾವು ಹೋರಾಡಬೇಕಾಗಿರುವುದು ಇತಿಹಾಸದ ಹಿಂದುತ್ವ ವಿರೂಪ ಹಾಗೂ ಬರಿಯ ಬಹುಸಂಖ್ಯಾತ ಮತ್ತು ಅನ್ಯಾಕ್ರಮಣಕಾರಿ ಅಜೆಂಡಾದೊಂದಿಗಿರುವ ಇತಿಹಾಸದ ಉದ್ದೇಶಪೂರ್ವಕ ತಪ್ಪುನಿರೂಪಣೆಯ ವಿರುದ್ಧ