ಐಪಿಎಲ್ ಪಂದ್ಯದ ವೇಳೆ ಗಂಭೀರ್-ನವೀನ್ ಜೊತೆ ವಾಗ್ದಾದ: ದಂಡ ವಿಧಿಸಿದ ಬಿಸಿಸಿಐ ಕುರಿತು ಕೊಹ್ಲಿ ಅಸಮಾಧಾನ
ಹೊಸದಿಲ್ಲಿ: ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ಮೇ 1 ರಂದು ಎಕನಾ ಸ್ಟೇಡಿಯಮ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೊ ಆಟಗಾರರಾದ ನವೀನ್-ಉಲ್-ಹಕ್, ಅಮಿತ್ ಮಿಶ್ರಾ ಹಾಗೂ ಆ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರೊಂದಿಗೆ ವಾಗ್ವಾದ ನಡೆಸಿದ್ದ ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟರ್ ವಿರಾಟ್ ಕೊಹ್ಲಿಗೆ(Virat Kohli ) ಪಂದ್ಯಶುಲ್ಕದಲ್ಲಿ ಶೇ.100ರಷ್ಟು ದಂಡ ವಿಧಿಸಲಾಗಿತ್ತು.
ನವೀನ್-ಉಲ್-ಹಕ್ ಹಾಗೂ ಗಂಭೀರ್ ಅವರೊಂದಿಗೆ ಮೈದಾನದಲ್ಲಿ ಜಗಳವಾಡಿದ ಸುಮಾರು ಐದು ದಿನಗಳ ನಂತರ, ಮಾಜಿ ಆರ್ ಸಿಬಿ ನಾಯಕ ಕೊಹ್ಲಿ ಪರಿಸ್ಥಿತಿಯನ್ನು ವಿವರಿಸಿ ಕೆಲವು ಬಿಸಿಸಿಐ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ.
'ದೈನಿಕ್ ಜಾಗರಣ್' ವರದಿಯ ಪ್ರಕಾರ, ಕೊಹ್ಲಿ ತನ್ನ ಮೇಲೆ ಪಂದ್ಯ ಶುಲ್ಕದಲ್ಲಿ ಶೇ.100ರಷ್ಟು ದಂಡ ವಿಧಿಸಿರುವುದಕ್ಕೆ ಬಿಸಿಸಿಐ ಅಧಿಕಾರಿಗಳ ಬಳಿ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐನಿಂದ ಶಿಕ್ಷೆಗೆ ಗುರಿಯಾಗಲು ಕಾರಣವಾಗಿರುವ ಘಟನೆಯ ವೇಳೆ ತಾನು ನವೀನ್-ಉಲ್-ಹಕ್ ಅಥವಾ ಗಂಭೀರ್ಗೆ ಏನನ್ನೂ ಹೇಳಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಪಂದ್ಯದ ರೆಫರಿಗಳು ಹಾಗೂ ಮೈದಾನದ ಅಂಪೈರ್ಗಳು ಲೆವೆಲ್ 2 ಅಪರಾಧ ಎಂದು ಪರಿಗಣಿಸಿ, ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಕೊಹ್ಲಿ ಮತ್ತು ಗಂಭೀರ್ ಇಬ್ಬರಿಗೂ ಪಂದ್ಯದ ಶುಲ್ಕದಲ್ಲಿ 100 ಶೇ.ದಂಡವನ್ನು ವಿಧಿಸಿದ್ದಾರೆ.
ತನ್ನ ನಡವಳಿಕೆಗಾಗಿ ಅಷ್ಟೊಂದು ದಂಡ ವಿಧಿಸುತ್ತಾರೆ ಎಂದು ಕೊಹ್ಲಿ ಭಾವಿಸಿರಲಿಲ್ಲ. ಕೊಹ್ಲಿ ದಂಡದ ರೂಪದಲ್ಲಿ ಸುಮಾರು ರೂ. 1.25 ಕೋಟಿ ನೀಡಬೇಕಾಗುತ್ತದೆ. ಆದಾಗ್ಯೂ, ಮೈದಾನದಲ್ಲಿನ ತಪ್ಪುಗಳಿಗಾಗಿ ತಮ್ಮ ಆಟಗಾರರ ಸಂಬಳದಿಂದ ಪಂದ್ಯದ ಶುಲ್ಕವನ್ನು ಕಡಿತಗೊಳಿಸದಿರುವ ನೀತಿಯನ್ನು ಆರ್ ಸಿಬಿ ಹೊಂದಿರುವುದರಿಂದ ಕೊಹ್ಲಿ ದಂಡವನ್ನು ಪಾವತಿಸುವುದಿಲ್ಲ.
ಲಕ್ನೊ ತಂಡ ರನ್ ಚೇಸಿಂಗ್ ನಡೆಸುತ್ತಿದ್ದಾಗ ನವೀನ್ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಅಮಿತ್ ಮಿಶ್ರಾ ಕೂಡ ಕೊಹ್ಲಿ ವರ್ತನೆಯ ಬಗ್ಗೆ ಅಂಪೈರ್ಗಳಿಗೆ ದೂರು ನೀಡಿದ್ದರು.
ಆರ್ಸಿಬಿ ವೇಗಿ ಮುಹಮ್ಮದ್ ಸಿರಾಜ್ ಬೌನ್ಸರ್ ಅನ್ನು ನವೀನ್-ಉಲ್-ಹಕ್ ಮೇಲೆ ಎಸೆದಿರುವುದು ಅಫ್ಘಾನಿಸ್ತಾನ ವೇಗಿ ಹಕ್ ರನ್ನು ಕೆರಳಿಸಿತ್ತು.
ಬಿಸಿಸಿಐ ಅಧಿಕಾರಿಗಳಿಗೆ ನೀಡಿದ ಸಂದೇಶದಲ್ಲಿ ಕೊಹ್ಲಿ ಅವರು ನವೀನ್ಗೆ ಚೆಂಡಿನಿಂದ ಬೆದರಿಸಲು ಸಿರಾಜ್ಗೆ ನಿರ್ದೇಶನ ನೀಡಲಿಲ್ಲ. ಬದಲಿಗೆ ಬೌನ್ಸರ್ಗಳನ್ನು ಬೌಲ್ ಮಾಡಲು ಮಾತ್ರ ಸೂಚಿಸಿದ್ದೆ ಎಂದಿದ್ದಾರೆ.