ಮಧ್ಯಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾಗೆ ಶೇ. 100 ರಿಯಾಯಿತಿ: ಮುಖ್ಯಮಂತ್ರಿ ಘೋಷಣೆ
ಭೋಪಾಲ್: ಮಧ್ಯಪ್ರದೇಶ ರಾಜ್ಯದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾಗೆ ಶೇ. 100 ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಶನಿವಾರ ಘೋಷಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ಸಿನಿಮಾವು ಲವ್ ಜಿಹಾದ್, ಮತಾಂತರ ಹಾಗೂ ಭಯೋತ್ಪಾದನೆಯ ಭಯಾನಕ ಮುಖವನ್ನು ತೆರೆದಿಟ್ಟಿದೆ" ಎಂದು ಬಣ್ಣಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಚೌಹಾಣ್, "ಲವ್ ಜಿಹಾದ್ ಬಲೆಗೆ ಸಿಲುಕುವ ಹಣ್ಣು ಮಕ್ಕಳ ಜೀವನ ಹೇಗೆ ನಾಶವಾಗುತ್ತದೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಹಾಗೆಯೇ ಈ ಸಿನಿಮಾ ಭಯೋತ್ಪಾದನೆಯ ಮಾದರಿಯನ್ನೂ ಬಯಲು ಮಾಡುತ್ತದೆ" ಎಂದೂ ಹೇಳಿದ್ದಾರೆ.
"ನಾವು ಈಗಾಗಲೇ ಬಲವಂತದ ಮತಾಂತರದ ವಿರುದ್ಧ ಕಾನೂನು ತಂದಿದ್ದು, ಸಿನಿಮಾವು ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸುತ್ತದೆ. ಈ ಸಿನಿಮಾವನ್ನು ಎಲ್ಲರೂ ವೀಕ್ಷಿಸಬೇಕು ಮತ್ತು ಅದಕ್ಕಾಗಿಯೇ ಮಧ್ಯಪ್ರದೇಶ ಸರ್ಕಾರ ಶೇ. 100 ತೆರಿಗೆ ವಿನಾಯಿತಿ ಘೋಷಿಸುತ್ತಿದೆ" ಎಂದು ತಿಳಿಸಿದ್ದಾರೆ.
ಸುದೀಪ್ತೊ ಸೇನ್ ರಚಿಸಿ, ನಿರ್ದೇಶಿಸಿರುವ, ಅಧಾ ಶರ್ಮಾ ನಾಯಕಿಯಾಗಿರುವ 'ದಿ ಕೇರಳ ಸ್ಟೋರಿ' ಮೇ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೇರಳದಿಂದ ಕಾಣೆಯಾಗಿರುವ 32,000 ಯುವತಿಯರು ಇಸ್ಲಾಂಗೆ ಮತಾಂತರಗೊಂಡು ನಂತರ ಅವರು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ತಪ್ಪಾಗಿ ತನ್ನ ಟೀಸರ್‌ನಲ್ಲಿ ಚಿತ್ರ ತಂಡವು ಉಲ್ಲೇಖಿಸಿರುವುದರಿಂದ ಈ ಚಿತ್ರವು ಭಾರಿ ವಿವಾದಕ್ಕೆ ಗುರಿಯಾಗಿದೆ.