ಮೀನುಗಾರರಿಗೆ ನ್ಯಾಯ ಕೊಡುವಲ್ಲಿ ಬಿಜೆಪಿ ವಿಫಲ: ತಲ್ಲೂರಿನಲ್ಲಿ ಗೋಪಾಲ ಪೂಜಾರಿ ರೋಡ್ ಶೋ
ಬೈಂದೂರು, ಮೇ 7: ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ರವಿವಾರ ತಲ್ಲೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ತಲ್ಲೂರಿನ ಕುಂತಿ ಅಮ್ಮ ದೇವಸ್ಥಾನ ಬಳಿಯಿಂದ ಆರಂಭಗೊಂಡ ರೋಡ್ ಶೋ, ತಲ್ಲೂರು ಪೇಟೆ ಮೂಲಕ ಸಾಗಿ, ಹೋಟೆಲ್ ಪ್ರವಾಸಿ ಕ್ರಾಸ್ ಬಳಿ ಯೂ ಟರ್ನ್ ಪಡೆದು, ವಾಪಾಸು ತಲ್ಲೂರು ಪೇಟೆಯಲ್ಲಿ ಸಮಾಪನ ಗೊಂಡಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸೋತಾಗ, ಅನಾರೋಗ್ಯದಲ್ಲಿದ್ದಾಗ ನನ್ನೊಂದಿ ಗಿದ್ದ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಈಗಲೂ ಮನೆ-ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೊರತುಪಡಿಸಿ, ರಾಷ್ಟ್ರ- ರಾಜ್ಯ ಮಟ್ಟದ ಯಾವ ನಾಯಕರನ್ನು ಪ್ರಚಾರಕ್ಕೆ ಆಹ್ವಾನಿಸಿಲ್ಲ. ಕಾರ್ಯಕರ್ತರೇ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಸುಕುಮಾರ್ ಶೆಟ್ಟರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಅಭ್ಯರ್ಥಿ ಸೋಲಿನ ಭಯದಿಂದ ಹತಾಶರಾಗಿದ್ದು ಸುಕುಮಾರ್ ಶೆಟ್ಟಿಯವರ ಬಗ್ಗೆ ಆರೋಪಿಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಅಭ್ಯರ್ಥಿ ಹಾಗೂ ಸುಕುಮಾರ ಶೆಟ್ಟಿಯವರೆ ಪ್ರತಿಕ್ರಿಸಬೇಕು ಎಂದು ಅವರು ತಿಳಿಸಿದರು.
ಬೈಂದೂರಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಕಳೆದ ಬಾರಿ ಪರೇಶ್ ಮೇಸ್ತ ಪ್ರಕರಣದಲ್ಲಿ ನನ್ನನ್ನು ಸೋಲಿಸಿದ ನೋವು ಮತದಾರರಲ್ಲಿದೆ. ಸಂವಿಧಾನ ವಿರೋಧಿ ಕಾರ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅಂತಹ ಸಂಘಟನೆ ನಿಷೇಧ ಎಂದು ಹೇಳಲಾಗಿದೆಯೇ ಹೊರತು ಯಾವುದೇ ಸಂಘಟನೆ ಗಳನ್ನು ಕಾಂಗ್ರೆಸ್ ನಿಷೇಧ ಮಾಡಲ್ಲ ಎಂದವರು ಸ್ಪಷ್ಟಪಡಿಸಿದರು.
ಕುಡಿಯುವ ನೀರಿನ ವಾರಾಹಿ ಕಾಮಗಾರಿ ವಿಳಂಬ, 94ಸಿ ಹಕ್ಕುಪತ್ರ, ಅಕ್ರಮ-ಸಕ್ರಮ ನೆನೆಗುದಿಗೆ ಬಿದ್ದಿರುವ ಬಗ್ಗೆ, ಉಪ್ಪುನೀರಿನ ತಡೆಗೋಡೆ, ವಾರಾಹಿ ಬಲದಂಡೆ ಯೋಜನೆ, ಸಿದ್ದಾಪುರ ಏತ ನೀರಾವರಿ, ಬಂದೂರನ್ನು ಮಾದರಿಯಾಗಿಸಲು ಪಣ, ಗಂಗೊಳ್ಳಿ, ಮರವಂತೆ, ಕೊಡೇರಿ, ಅಳ್ವೆಗದ್ದೆ ಬಂದರುಗಳ ಅಭಿವೃದ್ಧಿಗೆ ಚಾಲನೆ, ಸೀಮೆಎಣ್ಣೆ 3 ಸಾವಿರ ಲೀ. ಕೊಡಬೇಕಿತ್ತು. ಆದರೆ ವರ್ಷದಲ್ಲಿ ಒಟ್ಟಾರೆ ಕೊಟ್ಟಿರುವುದು ಕೇವಲ 670 ಲೀ. ಮಾತ್ರ. ಮತ್ಸಾಶ್ರಯ ಮನೆ ಕೊಟ್ಟಿಲ್ಲ, ಮೀನುಗಾರರಿಗೆ ನ್ಯಾಯ ಕೊಡಿಸಿಲ್ಲ, ನಮ್ಮ ಸರಕಾರ ಬಂದರೆ ಬಜೆಟ್ನಲ್ಲಿಯೇ ಹಣವಿಟ್ಟು, ಸೀಮೆಎಣ್ಣೆ ನಿರಂತರ ಪೂರೈಕೆ ಮಾಡಲು ಶ್ರಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪಾಂಡು ಹೆಮ್ಮಾಡಿ, ಗುಲ್ವಾಡಿ ಗ್ರಾಪಂ ಅಧ್ಯಕ್ಷ ಸುದೀಶ್ ಶೆಟ್ಟಿ, ತಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಬಿಲ್ಲವ, ಗ್ರಾಪಂ ಸದಸ್ಯೆ ಜುಡಿತ್ ಮೆಂಡೊನ್ಸಾ, ಪ್ರಮುಖರಾದ ಹರೀಶ್ ತೋಳಾರ್, ಪ್ರಶಾಂತ್ ಪೂಜಾರಿ ಕರ್ಕಿ ಮೊದಲಾದವರು ಉಪಸ್ಥಿತರಿದ್ದರು.