ರಾಜಸ್ಥಾನ ರಾಯಲ್ಸ್ ವಿರುದ್ಧ ಹೈದರಾಬಾದ್‌ಗೆ ರೋಚಕ ಜಯ
ಬಟ್ಲರ್,ಸ್ಯಾಮ್ಸನ್ ಅರ್ಧಶತಕ ವ್ಯರ್ಥ
ಜೈಪುರ, ಮೇ 7: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(55 ರನ್, 34 ಎಸೆತ) ಅರ್ಧಶತಕದ ಕೊಡುಗೆಯ ಸಹಾಯದಿಂದ ರವಿವಾರ ನಡೆದ ಐಪಿಎಲ್‌ನ 52ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 4 ವಿಕೆಟ್ ಅಂತರದಿಂದ ರೋಚಕವಾಗಿ ಮಣಿಸಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(95 ರನ್, 59 ಎಸೆತ) ಹಾಗೂ ನಾಯಕ ಸಂಜು ಸ್ಯಾಮ್ಸನ್(ಔಟಾಗದೆ 66 ರನ್, 38 ಎಸೆತ)ಶತಕಾರ್ಧದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು.
ಗೆಲ್ಲಲು 215 ರನ್ ಗುರಿ ಪಡೆದ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 217 ರನ್ ಗಳಿಸಿತು. ಅಬ್ದುಲ್ ಸಮದ್(ಔಟಾಗದೆ 17, 7 ಎಸೆತ, 2 ಸಿಕ್ಸರ್) ಹಾಗೂ ಮಾರ್ಕೊ ಜಾನ್ಸನ್(ಔಟಾಗದೆ 3) ಹೈದರಾಬಾದ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಜಯ ತಂದುಕೊಟ್ಟರು.
ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(55 ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್ ) ಸರ್ವಾಧಿಕ ಸ್ಕೋರ್ ಗಳಿಸಿದರು. ರಾಹುಲ್ ತ್ರಿಪಾಠಿ(47 ರನ್, 29 ಎಸೆತ),ಅಮೋಲ್‌ಪ್ರೀತ್ ಸಿಂಗ್(33 ರನ್, 25 ಎಸೆತ) ,ಹೆನ್ರಿಕ್ ಕ್ಲಾಸನ್(26 ರನ್,12 ಎಸೆತ) ಹಾಗೂ ಗ್ಲೆನ್ ಫಿಲಿಪ್ಸ್(25 ರನ್, 7 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.
ರಾಜಸ್ಥಾನದ ಪರ ಸ್ಪಿನ್ನರ್ ಯಜುವೇಂದ್ರ ಚಹಾಲ್(4-29)ಯಶಸ್ವಿ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ರಾಜಸ್ಥಾನದ ಪರ ಇನಿಂಗ್ಸ್ ಆರಂಭಿಸಿದ ಬಟ್ಲರ್(95 ರನ್, 59 ಎಸೆತ, 10 ಬೌಂಡರಿ, 4 ಸಿಕ್ಸರ್) ಹಾಗೂ ಯಶಸ್ವಿ ಜೈಸ್ವಾಲ್ (35 ರನ್, 18 ಎಸೆತ) ಮೊದಲ ವಿಕೆಟ್‌ಗೆ 54 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
2ನೇ ವಿಕೆಟ್‌ಗೆ 138 ರನ್ ಜೊತೆಯಾಟ ನಡೆಸಿದ ಬಟ್ಲರ್ ಹಾಗೂ ಸ್ಯಾಮ್ಸನ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಸ್ಯಾಮ್ಸನ್(ಔಟಾಗದೆ 66 ರನ್, 38 ಎಸೆತ, 4 ಬೌಂಡರಿ, 5 ಸಿಕ್ಸರ್)ಹೆಟ್ಮೆಯರ್(ಔಟಾಗದೆ 7) ಜೊತೆ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 22 ರನ್ ಸೇರಿಸಿದರು.