ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಕಾಂಗ್ರೆಸ್ ದೂರು
ಬೆಂಗಳೂರು, ಮೇ 8: ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಸೋತರೆ ಕಿಸಾನ್ ಸಮ್ಮಾನ್ ಸೇರಿದಂತೆ ಕೇಂದ್ರ ಸರಕಾರದ ಹಲವು ಯೋಜನೆಗಳು ಸ್ಥಗಿತವಾಗಲಿವೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಸೋಮವಾರ ಈ ಸಂಬಂಧ ಭಾರತೀಯ ಮುಖ್ಯ ಚುನಾವಣಾ ಆಯುಕ್ತರಿಗೆ ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ, ಕಾನೂನು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್, ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಹಾಗೂ ಉಪಾಧ್ಯಕ್ಷ ದಿವಾಕರ್ ನಾರಾಯಣಸ್ವಾಮಿ ದೂರು ಸಲ್ಲಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಪರ ರೋಡ್ ಶೋ ನಡೆಸಿ ಮಾತನಾಡಿದ ಜೆ.ಪಿ.ನಡ್ಡಾ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ಸೇರಿದಂತೆ ಕೇಂದ್ರದ ಹಲವು ಯೋಜನೆಗಳು ಬಂದ್ ಆಗಲಿವೆ. ಏಕೆಂದರೆ ಕಾಂಗ್ರೆಸ್ ಈ ಯೋಜನೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇವರ ವಿರುದ್ಧ ಚುನಾವಣಾ ಆಯೋಗವು ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.