ಸಂವಿಧಾನ ವಿರೋಧಿ ‘ಡಬಲ್ ಇಂಜಿನ್’
ಸೋಲಿನ ಭೀತಿಯಿಂದ ತತ್ತರಿಸಿ ಹೋಗಿರುವ ಬಿಜೆಪಿ ಕರ್ನಾಟಕದ ಮತದಾರರಿಗೆ ಧಮಕಿ ಹಾಕಿ ವೋಟು ಹಾಕಿಸಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿದೆ. ಕರ್ನಾಟಕದಲ್ಲಿ ಬಿಜೆಪಿ ಸೋತರೆ ಕೇಂದ್ರದ ಯೋಜನೆಗಳನ್ನು ಬಂದ್ ಮಾಡುವುದಾಗಿ ಆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಕಳೆದ ವಾರ ಗೃಹ ಮಂತ್ರಿ ಅಮಿತ್ ಶಾ ಕೂಡ ಇದೇ ರೀತಿ ಧಮಕಿಯ ಭಾಷೆಯಲ್ಲಿ ಮಾತನಾಡುತ್ತ ‘‘ಕರ್ನಾಟಕದಲ್ಲಿ ಬಿಜೆಪಿ ಗೆಲ್ಲದಿದ್ದರೆ ಕೋಮು ಗಲಭೆಗಳು ನಡೆಯುತ್ತವೆ’’ ಎಂದು ಹೇಳಿದ್ದರು. ಇವರಿಬ್ಬರು ಮಾತ್ರವಲ್ಲ ಬಹುತೇಕ ಒಕ್ಕೂಟ ಸರಕಾರದ ಮಂತ್ರಿಗಳ ಭಾಷೆ ಸೌಜನ್ಯ ಮತ್ತು ಸಭ್ಯತೆಯಿಂದ ಕೂಡಿಲ್ಲ. ಕಾನೂನು ಮತ್ತು ಶಿಸ್ತನ್ನು ಕಾಪಾಡುವ ಹೊಣೆ ಹೊತ್ತ ಗೃಹ ಮಂತ್ರಿಯ ಬಾಯಿಯಲ್ಲೇ ಕೋಮು ಗಲಭೆಯ ಮಾತು ಬರುವುದು ಪ್ರಜಾಪ್ರಭುತ್ವಕ್ಕೆ ಎದುರಾದ ಅಪಾಯದ ಮುನ್ಸೂಚನೆಯಾಗಿದೆಯೆಂದರೆ ಅತಿಶಯೋಕ್ತಿಯಲ್ಲ.
ಅಮಿತ್ ಶಾ ಮತ್ತು ನಡ್ಡಾ ಮಾತ್ರವಲ್ಲ ಡಬಲ್ ಇಂಜಿನ್ ಸರಕಾರದ ಬಗ್ಗೆ ಮಾತಾಡುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರೆಲ್ಲರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಭಾರತ ಎಂಬುದು ಒಕ್ಕೂಟ ರಾಷ್ಟ್ರ. ಇಲ್ಲಿ ಸಾಂವಿಧಾನಿಕವಾಗಿ ಕೇಂದ್ರ ಸರಕಾರದ ಪರಿಕಲ್ಪನೆ ಎಂಬುದಿಲ್ಲ. ಭಾರತ ಎಂಬುದು ವಿವಿಧ ರಾಜ್ಯ ಮತ್ತು ಪ್ರದೇಶಗಳ ಒಕ್ಕೂಟ. ಇದನ್ನು ಊಛಿಛ್ಟಿಚ್ಝ ಖಠಿಛಿಞ ಎಂದು ಇಂಗ್ಲಿಷ್‌ನಲ್ಲಿ ಕರೆಯಲಾಗುತ್ತದೆ. ಒಕ್ಕೂಟ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಅಸ್ತಿತ್ವಕ್ಕೆ ಬರುವುದು ಆಯಾ ರಾಜ್ಯಗಳ, ಪ್ರದೇಶಗಳ ಜನರಿಂದ. ಆದ್ದರಿಂದ ಒಕ್ಕೂಟ ಸರಕಾರಕ್ಕೆ ಇರುವಷ್ಟೇ ಅಧಿಕಾರ ರಾಜ್ಯ ಮತ್ತು ಪ್ರದೇಶವಾರು ಸರಕಾರಗಳಿಗೂ ಇರುತ್ತದೆ. ಒಕ್ಕೂಟ ಸರಕಾರದ ಸೂತ್ರ ಹಿಡಿದ ಪಕ್ಷವೇ ಎಲ್ಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬೇಕೆಂಬುದು ಸರ್ವಾಧಿಕಾರಿ ನೀತಿಯಾಗಿದೆ. ಪ್ರಧಾನ ಮಂತ್ರಿ ಭಾರತದ ಮಹಾರಾಜನಲ್ಲ, ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಗೆ ಕಪ್ಪಕಾಣಿಕೆ ಸಲ್ಲಿಸುವ ಮಾಂಡಲಿಕರಲ್ಲ. ಒಕ್ಕೂಟ ಸರಕಾರಕ್ಕೆ ಇರುವಷ್ಟೇ ಅಧಿಕಾರ ರಾಜ್ಯ ಸರಕಾರಗಳಿಗೂ ಇದೆ ಎಂಬುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕದಲ್ಲಿ ಬಿಜೆಪಿ ಪರಾಭವಗೊಂಡರೆ ಕೇಂದ್ರದ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಲು ಜೆ.ಪಿ.ನಡ್ಡಾ ಯಾರು? ಅವರಿಗಿರುವ ಸಾಂವಿಧಾನಿಕ ಅಧಿಕಾರ ವೇನು? ಆಡಳಿತ ಪಕ್ಷದ ಅಧ್ಯಕ್ಷನಾದ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತಾಡಬಹುದೇ? ಈ ಮಾತನ್ನು ಸಾಂವಿಧಾನಿಕ ಅಧಿಕಾರ ಸ್ಥಾನದಲ್ಲಿ ಇರುವ ನರೇಂದ್ರ ಮೋದಿ ಹೇಳಿ ಸಮರ್ಥಿಸಿಕೊಳ್ಳಲಿ.
ಜೆ.ಪಿ. ನಡ್ಡಾ ಕರ್ನಾಟಕದ ಮತದಾರರಿಗೆ ಈ ರೀತಿ ಬೆದರಿಕೆ ಹಾಕುತ್ತಿರುವುದು ಇದೇ ಮೊದಲ ಸಲವಲ್ಲ. ‘‘ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಬೇಕಿದ್ದರೆ ಬಿಜೆಪಿಗೆ ಮತ ಹಾಕಿ’’ ಎಂದು ಇತ್ತೀಚೆಗೆ ಹೇಳಿದ್ದರು. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ ಇರುವವರು ಜನತೆಯ ಆಶೀರ್ವಾದ ಪಡೆಯಬೇಕೇ ಹೊರತು ಜನರಿಗೆ ಆಶೀರ್ವಾದ ನೀಡಲು ಹೋಗಬಾರದು. ಆದರೆ ಪ್ರಜಾಪ್ರಭುತ್ವದ ಈ ನಾಗರಿಕ ಸಭ್ಯತೆ ಬಿಜೆಪಿ ನಾಯಕರಿಗಿಲ್ಲ. ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲು, ಬಸನಗೌಡ ಪಾಟೀಲ್ ಯತ್ನಾಳ್, ತೇಜಸ್ವಿ ಸೂರ್ಯ ಮುಂತಾದವರ ಭಾಷಣಗಳನ್ನು ಕೇಳಿದರೆ ಭಾರತದ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಕಳವಳ ಉಂಟಾಗುತ್ತದೆ.
ಕೋಮು ಗಲಭೆಗಳ ಬಗ್ಗೆ ಭಾರತದ ಗೃಹ ಮಂತ್ರಿ ಮತ್ತು ಬಿಜೆಪಿ ಸೋತರೆ ಅಭಿವೃದ್ಧಿ ಯೋಜನೆಗಳನ್ನು ಬಂದ್ ಮಾಡುವುದಾಗಿ ಆಡಳಿತ ಪಕ್ಷದ ಅಧ್ಯಕ್ಷರು ಬಹಿರಂಗವಾಗಿ ಹೇಳಿಕೆ ನೀಡಿದ ನಂತರವೂ ಚುನಾವಣಾ ಆಯೋಗ ಕಂಡೂ ಕಾಣದಂತಿರುವುದು ಕಳವಳದ ಸಂಗತಿಯಾಗಿದೆ. ಬಿಜೆಪಿ ನಾಯಕರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತಿದ್ದರೂ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರಲ್ಲೂ ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳಲ್ಲಿ ಭಿನ್ನ ಪಕ್ಷಗಳ ಸರಕಾರಗಳಿರುವುದು ಸಹಜ. ಇಂತಹ ಸನ್ನಿವೇಶದಲ್ಲಿ ಪರಸ್ಪರ ಹೊಂದಿಕೊಂಡು ಹೋದರೆ ಬಹುತ್ವ ಭಾರತ ಸುರಕ್ಷಿತವಾಗಿ ಇರುತ್ತದೆ.
ಭಾರತೀಯ ಜನತಾ ಪಕ್ಷ ಒಕ್ಕೂಟ ಸರಕಾರದ ಸೂತ್ರವನ್ನು ಹಿಡಿದ ನಂತರ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ತಾರತಮ್ಯದ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಚುನಾಯಿತ ಸರಕಾರಗಳನ್ನು ಉರುಳಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದೆ. ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲನ್ನು ನಿರಾಕರಿಸುತ್ತಲೇ ಬಂದಿದೆ. ಇದಕ್ಕೆ ಕರ್ನಾಟಕವೇ ಒಂದು ಉದಾಹರಣೆಯಾಗಿದೆ. ರಾಜ್ಯದಲ್ಲಿ ನೆರೆ ಹಾವಳಿ ಉಂಟಾದಾಗ ಪ್ರಧಾನಿ ಬರಲಿಲ್ಲ, ನೆರವನ್ನು ನೀಡಲಿಲ್ಲ. ಕೋವಿಡ್ ಉಲ್ಬಣಿಸಿದಾಗ ಸಾಯುತ್ತಿರುವವರನ್ನು ಬದುಕಿಸಲು 1,200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಲು ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದರೂ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋದವರು ಯಾರೆಂದು ಎಲ್ಲರಿಗೂ ಗೊತ್ತಿದೆ.
ಬಿಜೆಪಿಗೆ ಮತ ಹಾಕದಿದ್ದರೆ ಅಭಿವೃದ್ಧಿ ಯೋಜನೆಗಳನ್ನು ಬಂದ್ ಮಾಡುವ ಬೆದರಿಕೆ ಹಾಕುವವರು ಕರ್ನಾಟಕದ ಜಿಎಸ್‌ಟಿಗೆ ಕೈ ಚಾಚಬಾರದು.ಕರ್ನಾಟಕದಿಂದ ಬರುವ ತೆರಿಗೆಯ ಹಣದ ಮೇಲೆ ಕಣ್ಣು ಹಾಕಬಾರದು. ಬಿಜೆಪಿ ನಾಯಕರು ಭಾರತದ ಮೇಲೆ ಏಕ ಪಕ್ಷ, ಏಕ ಧರ್ಮ, ಏಕ ಭಾಷೆಯನ್ನು, ಏಕ ಸಿದ್ಧಾಂತವನ್ನು ಹೇರುವ ದುಸ್ಸಾಹಸಕ್ಕೆ ಕೈ ಹಾಕಬಾರದು.
ಭಾರತ ಎಂಬುದು ಯಾವುದೇ ಒಂದು ಧರ್ಮಕ್ಕೆ, ಜಾತಿಗೆ, ಭಾಷೆಗೆ, ಸಂಸ್ಕೃತಿಗೆ ಮತ್ತು ಆಹಾರ ಪದ್ಧತಿಗೆ ಸೇರಿದ ಭೂ ಪ್ರದೇಶವಲ್ಲ. ಅನೇಕತೆ ಈ ನೆಲದ ಅಂತಃಸತ್ವ. ಈ ಬಹುತ್ವವನ್ನು ಗೌರವಿಸದೆ ಏಕ ಚಕ್ರಾಧಿಪತ್ಯ ಹೇರಲು ಹೊರಟರೆ ಯಾದವೀ ಕಲಹಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಅದಕ್ಕೆ ಬಿಜೆಪಿ ನಾಯಕರು ಅವಕಾಶ ಮಾಡಿ ಕೊಡಬಾರದು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತಮ್ಮ ಪಕ್ಷದ ಸರಕಾರದ ಸಾಧನೆಗಳ ಬಗ್ಗೆ ಮತ್ತು ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಕಾರ್ಯಕ್ರಮದ ಬಗ್ಗೆ ಮಾತಾಡಲಿ, ತಮಗೆ ಅಧಿಕಾರ ನೀಡುವ ಮತದಾರರಿಗೆ ಧಮಕಿ ಹಾಕುವುದನ್ನು ತಕ್ಷಣ ನಿಲ್ಲಿಸಲಿ.