ಪಾತಾಳಕ್ಕಿಳಿದ ಮತದ ಮೌಲ್ಯ
ಮಾನ್ಯರೇ,
1. ಮುಳಬಾಗಿಲಿನ ನಮ್ಮ ಸ್ನೇಹಿತರೊಬ್ಬರು ಹೇಳುತ್ತಾರೆ: (ಪಕ್ಷದ ಅಭ್ಯರ್ಥಿ ಹೆಸರು ಬೇಡ) ಸಾರ್ ಅವರ ಏಜೆಂಟ್ ಮಾಂಸಾಹಾರಿ ಕುಟುಂಬಗಳನ್ನು ತಲಾಸ್ ಮಾಡಿ ವೋಟಿನ ಸಂಖ್ಯೆಯ ಲೆಕ್ಕದ ಮೇಲೆ ಆ ಕ್ಷೇತ್ರದ ಮನೆಮನೆಗೆ 3ರಿಂದ 5 ಕೆ.ಜಿ. ತೂಕದ ಕೋಳಿಗಳನ್ನು ಸಪ್ಲೈ ಮಾಡ್ತಿದ್ದಾರೆ.
2. ಶಿರಾ ಕ್ಷೇತ್ರಕ್ಕೆ ಸೇರಿದ ಇನಕನಹಳ್ಳಿಯಿಂದ ನಮ್ಮ ಮೊಮ್ಮಗಳು ಹೇಳ್ತಾಳೆ: ನಮ್ಮ ಮನೆಗೆ ತಂದು ಕೊಟ್ಟ ಕೋಳಿಯನ್ನು ನನ್ನ ತಮ್ಮ (ಶಾಲಾ ಬಾಲಕ) ಆ ಏಜೆಂಟ್ ಬಾಗಿಲಿಗೆ ಎಸೆದು ಬಂದ.
3. ನಮ್ಮ ಸ್ನೇಹಿತರೊಬ್ಬರು ಮುಳಬಾಗಿಲಿನ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು. ಚುನಾವಣಾ ಕರ್ತವ್ಯದ ಮೇಲಿರುವ ಅವರಿಗೆ ತಾಲೂಕು ಆಫೀಸಿನಲ್ಲಿ ಮೊದಲೇ ವೋಟು ಮಾಡುವ ವ್ಯವಸ್ಥೆ ಇದೆ. ಉಪಾಧ್ಯಾಯ ಸಂಘದ ಕಾರ್ಯಕರ್ತರೊಬ್ಬರು ಫೋನ್ ಮಾಡಿ: ನಿಮಗೆ ಇಂತಹ ಪಕ್ಷದ ಏಜೆಂಟ್ ಹಣ ಕೊಟ್ಟಿದ್ದಾರೆ, ನಿಮಗೆ ಹೇಗೆ ತಲುಪಿಸುವುದು ಎಂದು ಕೇಳುತ್ತಾರೆ. ಅದಕ್ಕಿವರು ‘‘ಅದಕ್ಕ್ಯಾಕೆ ಹಣ? ವೋಟು ಮಾಡುವುದು ನನ್ನ ಕರ್ತವ್ಯ. ಅದಕ್ಕೆ ದುಡ್ಡು ಏನು ಮಾಡಾಕೆ? ಆ ಉಸಾಬರಿ ನಿಮಗ್ಯಾಕೆ?’’ ಎನ್ನುತ್ತಾರೆ. ಆ ಕಡೆಯಿಂದ ಅವರು ‘‘ಅರೆ ಸ್ವಾಮಿ; ನೀವೊಬ್ಬರು ಸತ್ಯ ಹರಿಶ್ಚಂದ್ರರಾದರೆ ದೇಶ ಉದ್ಧಾರ ಆಗಲ್ಲ! ತಿನ್ನೋರು ತಿಂತಾರೆ! ನಿಮ್ಮ ಪಾಲಿನ ಹಣ ತಕ್ಕೊಂಡು ಯಾರಿಗಾದರೂ ಬಡಬಗ್ಗರಿಗೆ ಕೊಡ್ರಿ’’ ಎಂದು ಉಪದೇಶ ಮಾಡ್ತಾರೆ. ಹೀಗೆ ಕ್ಯಾಷ್ ಆ್ಯಂಡ್ ಕೈಂಡ್ ವ್ಯವಹಾರ ನಡೆಯುವುದು ಸಾಮಾನ್ಯ. ಇನ್ನೂ ಭಯಂಕರ ಬಹಿರಂಗ ಗುಟ್ಟು ಏನೆಂದರೆ ಪ್ರಸಕ್ತ ಊರು ಕೇರಿ ಗಲ್ಲಿಗಲ್ಲಿಗಳಲ್ಲಿ ಸಂಚಾರ ಮಾಡಿ ನೋಡಿದರೆ ಒಂದು ವೋಟಿಗೆ ಒಂದು ಸಾವಿರದಿಂದ ಐದು ಸಾವಿರ ರೂ. ವರೆಗೆ ಮಾರಾಟವಾಗುತ್ತಿದೆ.
4. ಇಷ್ಟಾದಾಗ್ಯೂ ಬೆಂಗಳೂರಿನ ನಾಗರಭಾವಿಯಲ್ಲಿ ಒಬ್ಬರು ಮತದಾನ ಒಂದು ಪವಿತ್ರ ರಾಷ್ಟ್ರೀಯ ಕರ್ತವ್ಯ, ನಿಮ್ಮ ವೋಟನ್ನು ತಪ್ಪದೇ ಚಲಾಯಿಸಿ ಎಂದು ಕರಪತ್ರವನ್ನು ಮುದ್ರಿಸಿ ಮನೆಮನೆಗೂ ಹಂಚುತ್ತಿದ್ದಾರೆ;
ಮೇಲ್ಕಂಡ ಪ್ರಸಂಗಗಳನ್ನು ಅವರ ಗಮನಕ್ಕೆ ತಂದಾಗ ಅವರು ಹೇಳಿದ್ದು: ‘‘ಆದರೂ ನಮ್ಮ ಪ್ರಯತ್ನ ನಿಲ್ಲಿಸಬಾರದಷ್ಟೆ. ಮುಂದಿನ ದಿನಗಳಲ್ಲಾದರೂ ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳ್ಳಬಹುದಲ್ಲವೇ’’ ಎನ್ನುತ್ತಾರೆ. ನಾನು ‘‘ಕಳೆದ 75 ವರ್ಷಗಳಿಂದ ನಾವು ಕಟ್ಟಿದ ಸ್ವಾತಂತ್ರ್ಯದ ಸ್ವರ್ಗ ಹೀಗೆ ಇಂಚಿಂಚೇ ಕರಗಿ ಕುಸಿಯುತ್ತಿದೆ, ಆದರೂ ನಿಮ್ಮ ಆಶಾವಾದಕ್ಕೆ ಧನ್ಯವಾದಗಳು’’ ಎಂದೆ. ಉಳಿದ ಚುನಾವಣಾ ಆಮಿಷ ಪ್ರಣಾಳಿಕೆಗಳ ಬಗ್ಗೆ ಇನ್ನು ಹೇಳುವುದೇನಿದೆ? ಈಗ ಪ್ರಜಾತಂತ್ರವೆಂಬ ಪಶುವಿನ ನಾಲ್ಕು ಕಾಲುಗಳಲ್ಲಿ ಒಂದಾದ ಮಾಧ್ಯಮದ ಕಾಲು ಮುರಿದು ಕುಂಟು ಬಿದ್ದಿದೆ. ಸ್ವತಂತ್ರ ಸಂಸ್ಥೆಗಳೆಲ್ಲ ಆಳುವ ಪಕ್ಷದ ಅಡಿದಾವರೆಯಲ್ಲಿವೆ. ಪ್ರಜಾಪ್ರಭುತ್ವದಲ್ಲಿ ಪ್ರಭುವೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದಾನೆ. ಕೊಡುವವನ, ಪಡೆಯುವವನ ತಡೆದು ನಿಲ್ಲಿಸುವವರಾರು? ಇಂತಲ್ಲಿ ಜನತಂತ್ರದ ಪಾವಿತ್ರ್ಯತೆಯನ್ನು ನಾವು ಕಾಪಾಡಿಕೊಳ್ಳುವುದು ಹೇಗೆ? ವೋಟಿನ ಬೆಲೆ ಗಗನಕ್ಕೇರುತ್ತಿದೆ; ಮತದ ಮೌಲ್ಯ ಪಾತಾಳಕ್ಕಿಳಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ವಿಶ್ವಗುರುವಿನ ಸ್ಥಾನ ಮಾನಕ್ಕೆ ಅರ್ಹವಾಗುವುದು ಹೇಗೆ? ನಮ್ಮ ಜನತಂತ್ರ ಎನ್ನುವುದು ಕೇವಲ ಅಣಕ ನಾಟಕ ಎಂದು ಹೇಳದೆ ವಿಧಿಯಿಲ್ಲ.