ಚುನಾವಣೆಯಲ್ಲಿಯೂ ಕನ್ನಡ ಕಾಣದಾಗುತ್ತಿದೆ
ಮಾನ್ಯರೇ,
ಈಗಾಗಲೇ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿ ಮನೆಯಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುವುದೇ ದೊಡ್ಡಸ್ತಿಕೆ ಎಂಬ ಭ್ರಮೆಗೆ ಬಿದ್ದು, ಕನ್ನಡ ಮಾತನಾಡಿದರೆ ಅವಮಾನವೆಂದು ಅನೇಕ ಕುಟುಂಬಗಳಲ್ಲಿ ಮನೆಯ ವಾತಾವರಣವೂ ಇಂಗ್ಲಿಷ್ ಮಯವಾಗಿದೆ. ಪಾರ್ಕ್ಗಳಲ್ಲಿ ತೆಲುಗಿನಲ್ಲಿ ಮಾತನಾಡುವವರ ಒಂದು ಗುಂಪು, ಹಿಂದಿಯಲ್ಲಿ ಮಾತನಾಡುವವರ ಗುಂಪು, ತಮಿಳಿನಲ್ಲಿ ಮಾತನಾಡುವವರ ಗುಂಪು ಹೀಗೆ ಇಲ್ಲಿಯೂ ಕನ್ನಡ ಶಬ್ದಗಳು ಕೇಳುವುದು ಕಡಿಮೆಯಾಗುತ್ತಿದೆ. ಇನ್ನು ಬ್ಯಾಂಕ್ಗಳಲ್ಲಿ ಉತ್ತರಭಾರತೀಯರೇ ತುಂಬಿಕೊಂಡು ಗ್ರಾಹಕರು ಅನಿವಾರ್ಯವಾಗಿ ಅಲ್ಲಿನ ಸಿಬ್ಬಂದಿಯವರೊಂದಿಗೆ ಹಿಂದಿಯಲ್ಲಿಯೇ ಮಾತನಾಡಬೇಕಾಗಿದೆ. ಇಲ್ಲಿಯೂ ಕನ್ನಡ ಕಡೆಗಣಿಸಲ್ಪಡುತ್ತಿದೆ. ಇನ್ನು ವ್ಯಾಪಾರಸ್ಥರು ಎಷ್ಟೇ ಕಾನೂನು ರಚಿಸಿದರು ನಾಮಫಲಕದಲ್ಲಿ ಮತ್ತು ತಮ್ಮ ವ್ಯವಹಾರದಲ್ಲಿ ಕನ್ನಡವನ್ನು ಕಡೆಗಣಿಸುತ್ತಲೇ ಇದ್ದಾರೆ. ಅವರ ಭಾಷೆಯಲ್ಲಿಯೇ ಮಾತನಾಡಿ ನಾವು ಅವರೊಂದಿಗೆ ವ್ಯಾಪಾರ ಮಾಡುವ ಸ್ಥಿತಿಗೆ ಬಂದಿದ್ದೇವೆ. ಬೆಳಗಾವಿ ಭಾಗದಲ್ಲಿ ಚುನಾವಣೆಯ ಪ್ರಚಾರ ಮರಾಠಿಯಲ್ಲಿ ನಡೆಯುತ್ತಿದ್ದು, ಕನ್ನಡವನ್ನು ಕಡೆಗಣಿಸಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರಾಂತದಲ್ಲಿ ತೆಲುಗು ಮತ್ತು ಹಿಂದಿ ಪ್ರಚಾರದ ಬಳಕೆಯ ಭಾಷೆಯಾಗಿದೆ. ಕೋಲಾರ ಭಾಗದಲ್ಲಿ ತೆಲುಗು ಭಾಷಣಗಳಲ್ಲಿ ವಿಜೃಂಭಿಸುತ್ತಿದೆ.
ನಡೆಯುತ್ತಿರುವುದು ಕರ್ನಾಟಕ ರಾಜ್ಯದ ಚುನಾವಣೆ. ಈ ರಾಜ್ಯದ ಭಾಷೆ ಕನ್ನಡ ಆದರೆ ಚುನಾವಣೆಯಲ್ಲಿ ಮಾತ್ರ ಅನೇಕ ಭಾಷೆಗಳಲ್ಲಿ ಮತವನ್ನು ಕೇಳುತ್ತಾ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯೆಂಬುದನ್ನು ಎಲ್ಲಾ ರಾಜಕೀಯ ಪಕ್ಷದವರು ಮರೆತಿದ್ದಾರೆ. ಉತ್ತರಭಾರತೀಯ ನಾಯಕರ ಹಿಂದಿ ಭಾಷೆಯ ಆರ್ಭಟದ ಮುಂದೆ ಕನ್ನಡದ ಭಾಷಣಗಾರರ ಮಾತುಗಳು ಕಡೆಗಣಿಸಲ್ಪಟ್ಟಿದೆ.