ಭಟ್ಕಳ: ಚುನಾವಣೆಗೆ ಸಿದ್ಧವಾಗುತ್ತಿರುವ ಸಿಬ್ಬಂದಿ
ಭಟ್ಕಳ, ಮೇ 9: ಬುಧವಾರ ನಡೆಯುವ ವಿಧಾನಸಭಾ ಚುನಾವಣೆಗಾಗಿ ಮತಗಟ್ಟೆಗೆ ತೆರಳಲು ಇಲ್ಲಿನ ಸಾಗರ ರಸ್ತೆಯ ಗುರುಸುಧೀಂದ್ರ ಕಾಲೇಜಿನಲ್ಲಿ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಮತಗಟ್ಟೆ ಅಧಿಕಾರಿಗಳು, ಸಹಾಯಕರು ತಾವು ಕರ್ತವ್ಯ ನಿರ್ವಹಿಸಲಿರುವ ಮತಗಟ್ಟೆಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚುನಾವಣಾಧಿಕಾರಿಯೂ ಆಗಿರುವ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್., ಬುಧವಾರ ನಡೆಯಲಿರುವ ಮತದಾನ ಪ್ರಕ್ರಿಯೆ ಎಲ್ಲರೂ ಭಾಗವಹಿಸಬೇಕು. ಶಾಂತಿ ಕಾಪಾಡಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ ಎಂದರು.
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,708 ಮತದಾರರಿದ್ದು ಇದರಲ್ಲಿ 1,12,988 ಪುರುಷರು, 1,09,729 ಮಹಿಳಾ ಮತದಾರರಿದ್ದಾರೆ. ಒಟ್ಟು 248 ಮತಗಟ್ಟೆಗಳಿದ್ದು, 279 ಪಿಆರ್‌ಒ, 279 ಎಪಿಆರ್‌ಒ, 279 ಮತಗಟ್ಟೆ ಅಧಿಕಾರಿಗಳು-1, 279 ಮತಗಟ್ಟೆ ಅಧಿಕಾರಿ-2, 248 ಪೊಲೀಸ್ ಸಿಬ್ಬಂದಿ ಹಾಗೂ 248 ಡಿ ದರ್ಜೆ ನೌಕರು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.