ಮತ್ತೆ ಎದುರಾಗುತ್ತಿದೆಯೇ ನೆಲವೇ ಸುಡುತ್ತಿದ್ದ ಕಾಲ?
ಪಾಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ನ ಜಾರ್ಜ್ ಫ್ಯೂಲ್ನರ್ ಹೇಳುವಂತೆ, ನಿಧಾನಗತಿಯ ತಾಪಮಾನ ಜೀವಿಗಳಿಗೆ ಪ್ರಕೃತಿಯೊಡನೆ ಹೊಂದಿಕೊಳ್ಳುವ ಅವಕಾಶ ನೀಡುತ್ತದೆ. ತೀವ್ರ ಶಾಖಕ್ಕೆ ಹೊಂದಿಕೊಳ್ಳಲಾರದ ಪ್ರಾಣಿ ಪ್ರಭೇದಗಳು ಭೂಗೋಳದ ಮತ್ತೊಂದು ದಿಕ್ಕಿಗೆ ಹೋಗಲು ಅವಕಾಶವಿರುತ್ತದೆ ಅಥವಾ ವಿಕಸನ ಪ್ರಕ್ರಿಯೆಗಳ ಮೂಲಕವೂ ಹೊಂದಿಕೊಳ್ಳಲು ಸಾಧ್ಯವಿರುತ್ತದೆ.
ಆದರೆ, ಅಂಥ ಅವಕಾಶವೇ ಸಿಗಲಾರದ ಮಟ್ಟಿನ ವೇಗದಲ್ಲಿ ತಾಪಮಾನ ಏರಿಕೆಯಾದರೆ ಏನು ಗತಿ?
ಅದು 25 ಮೀಟರ್ ಉದ್ದದ ಡೈನೋಸಾರ್ಗಳು ಸಮುದ್ರಗಳಲ್ಲಿ ಈಜುತ್ತಿದ್ದ ಕಾಲ. ಟಿರಾನೊಸಾರಸ್ ರೆಕ್ಸ್ ಮತ್ತು ಟ್ರೈಸೆರಾಟಾಪ್ಗಳಂಥ ದೊಡ್ಡ ಕುಲದ ಡೈನೋಸಾರ್ಗಳು ನಾವಿಂದು ಇರುವ ನೆಲದ ಮೇಲೆ ಓಡಾಡಿಕೊಂಡಿದ್ದ ಕಾಲ. ಆಗ ಭೂಮಿ ವಾಸಿಸಲು ಕಷ್ಟವಾಗುವ ಮಟ್ಟಿಗಿನ ಉಷ್ಣತೆಯನ್ನು ಹೊಂದಿತ್ತು. ಲಕ್ಷಾಂತರ ವರ್ಷಗಳ ಹಿಂದಿನ ಆ ಮೆಸೊಜೊಯಿಕ್ ಅಥವಾ ಮಧ್ಯಜೀವಯುಗದಲ್ಲಿ ಈಗಿರುವುದಕ್ಕಿಂತ 16 ಪಟ್ಟು ಹೆಚ್ಚು ಇದ್ದ ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಸಾಂದ್ರತೆ ಹಸಿರುಮನೆ ವಾತಾವರಣವನ್ನು ಸೃಷ್ಟಿಸಿತ್ತು. ಡೈನೋಸಾರ್ಗಳ ದೇಹದಿಂದ ಹೊರದೂಡಲ್ಪಡುತ್ತಿದ್ದ ವಾಯುವಿನಲ್ಲಿಯ ಮೀಥೇನ್ ಆ ಸಮಯದಲ್ಲಿ ತಾಪಮಾನಕ್ಕೆ ಕಾರಣವಾಗಿತ್ತೆಂದು ವಿಜ್ಞಾನಿಗಳು ಊಹಿಸುತ್ತಾರೆ. ಆದರೆ ಮುಖ್ಯ ಕಾರಣವೆಂದರೆ ಪ್ಯಾಂಜಿಯಾ ಮಹಾಖಂಡ ನಿಧಾನವಾಗಿ ಚಲಿಸಲು ಮತ್ತು ಒಡೆಯಲು ಪ್ರಾರಂಭಿಸಿದ್ದು. ಇದು ಅಂತಿಮವಾಗಿ ನಮಗಿಂದು ಗೊತ್ತಿರುವಂತೆ ಖಂಡಗಳ ಸೃಷ್ಟಿಗೆ ಕಾರಣವಾಯಿತು. ಆದರೆ ಬದಲಾದ ಹವಾಮಾನಕ್ಕೆ ಕಾರಣವಾದದ್ದೂ ಇದೇ ವಿದ್ಯಮಾನ.
ಖಂಡಗಳ ಚಲನೆ ಅಗಾಧವಾದ ಜ್ವಾಲಾಮುಖಿ ಸ್ಫೋಟಗಳನ್ನು ಉಂಟುಮಾಡಿತು. ಹಾನಿಕಾರಕ ಅನಿಲಗಳು ವಾತಾವರಣದೊಳಕ್ಕೆ ಸೇರಲು ಕಾರಣವಾಯಿತು. ತಾಪಮಾನ ಹೆಚ್ಚಿತು. ಆಮ್ಲ ಮಳೆ, ಸಮುದ್ರದ ಆಮ್ಲೀಕರಣ ಮತ್ತು ಭೂಮಿ ಮತ್ತು ನೀರಿನಲ್ಲಿ ರಾಸಾಯನಿಕ ಸಂಯೋಜನೆಗಳಲ್ಲಿ ಆಮೂಲಾಗ್ರ ಬದಲಾವಣೆಗಳು ಉಂಟಾದದ್ದು ಇದೇ ಕಾಲಘಟ್ಟದಲ್ಲಿ. ನಾವು ಮಧ್ಯಜೀವಯುಗದಲ್ಲಿದ್ದ ತಾಪಮಾನಕ್ಕಿಂತ ಬಹು ದೂರದಲ್ಲಿದ್ದೇವೆ. ಆದರೂ ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಭಾರೀ ಪ್ರಮಾಣದಲ್ಲಿ ಸುಡುವ ಮೂಲಕ ಈಗಾಗಲೇ ತೀವ್ರವಾದ ತಾಪಮಾನಕ್ಕೆ ಭೂಮಿ ಒಡ್ಡುಕೊಳ್ಳುವಂತಾಗಿದೆ. ಪರಿಸರ ವ್ಯವಸ್ಥೆ ಹಿಂದೆಂದಿಗಿಂತಲೂ ವೇಗವಾಗಿ ಕ್ಷೀಣಿಸುತ್ತಿದೆ. ಜಗತ್ತಿನಾದ್ಯಂತ ಜನರು ಮತ್ತು ಭೂಮಿ, ಅರಣ್ಯ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳ ಮೇಲೆ ಇದು ಕಂಡರಿಯದ ಪರಿಣಾಮಗಳನ್ನು ಬೀರುತ್ತಿದೆ. ಮಧ್ಯ ಅಮೆರಿಕದಲ್ಲಿ ಬರಗಾಲದ ಸರಾಸರಿ ಅವಧಿ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
ಭಾರೀ ಪ್ರವಾಹಗಳು, ಚಂಡಮಾರುತಗಳು, ಸಮುದ್ರ ಮಟ್ಟದಲ್ಲಿ ಏರಿಕೆ ಮತ್ತು ತೀವ್ರ ಶಾಖದ ಅಲೆಗಳಿಗೆ ಕಾರಣವಾಗುವ ಹಸಿರುಮನೆ ಅನಿಲ ಹೊರಸೂಸುವಿಕೆ ಅನಿಯಂತ್ರಿತವಾಗಿ ಮುಂದುವರಿದರೆ ಶತಮಾನದ ಅಂತ್ಯದ ವೇಳೆಗೆ ನಾವು ಕೂಡ ಆ ಮಧ್ಯಜೀವಯುಗದ ತಾಪಮಾನದ ಹಂತ ತಲುಪುತ್ತೇವೆ ಎನ್ನುತ್ತಾರೆ ವಿಜ್ಞಾನಿಗಳು. ಹವಾಮಾನ ಬಿಕ್ಕಟ್ಟು ಮನುಷ್ಯನ ಅಸ್ತಿತ್ವಕ್ಕೇ ಕುತ್ತು ತರಲಿದೆ ಎಂದು ಅವರು ಎಚ್ಚರಿಸುತ್ತಿರುವುದು ಇದೇ ಕಾರಣಕ್ಕೆ.
ಡೈನೋಸಾರ್ಗಳು ಅವು ವಾಸಿಸುತ್ತಿದ್ದ ಹವಾಮಾನ ಪರಿಸ್ಥಿತಿಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು ಸಾಧ್ಯವಿತ್ತು. ಅದಕ್ಕೆ ಕಾರಣ, ಮಧ್ಯಜೀವಯುಗದಲ್ಲಿ ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಸಾಂದ್ರತೆ ತುಂಬಾ ಹೆಚ್ಚಿದ್ದರೂ, ಅದರ ಏರುವಿಕೆ ತುಂಬಾ ನಿಧಾನ ಗತಿಯಲ್ಲಿತ್ತು. ಜ್ವಾಲಾಮುಖಿ ಸ್ಫೋಟದಂಥ ವಿದ್ಯಮಾನಗಳು ಕೂಡ ತಾಪಮಾನ ಏರಿಕೆಗೆ ಲಕ್ಷಾಂತರ ವರ್ಷಗಳನ್ನು ತೆಗೆದುಕೊಂಡಿದ್ದರೆ, ನಾವಿಂದು ಪಳೆಯುಳಿಕೆ ಇಂಧನಗಳನ್ನು ಸುಡುವ ಮೂಲಕ ಎರಡೇ ಶತಮಾನಗಳಲ್ಲಿ ಭೂಮಿಯ ತಾಪಮಾನದ ಗಂಭೀರ ಸ್ಥಿತಿಗೆ ಕಾರಣರಾಗಿದ್ದೇವೆ.
ಪಾಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ನ ಜಾರ್ಜ್ ಫ್ಯೂಲ್ನರ್ ಹೇಳುವಂತೆ, ನಿಧಾನಗತಿಯ ತಾಪಮಾನ ಜೀವಿಗಳಿಗೆ ಪ್ರಕೃತಿಯೊಡನೆ ಹೊಂದಿಕೊಳ್ಳುವ ಅವಕಾಶ ನೀಡುತ್ತದೆ. ತೀವ್ರ ಶಾಖಕ್ಕೆ ಹೊಂದಿಕೊಳ್ಳಲಾರದ ಪ್ರಾಣಿ ಪ್ರಭೇದಗಳು ಭೂಗೋಳದ ಮತ್ತೊಂದು ದಿಕ್ಕಿಗೆ ಹೋಗಲು ಅವಕಾಶವಿರುತ್ತದೆ ಅಥವಾ ವಿಕಸನ ಪ್ರಕ್ರಿಯೆಗಳ ಮೂಲಕವೂ ಹೊಂದಿಕೊಳ್ಳಲು ಸಾಧ್ಯವಿರುತ್ತದೆ.
ಆದರೆ, ಅಂಥ ಅವಕಾಶವೇ ಸಿಗಲಾರದ ಮಟ್ಟಿನ ವೇಗದಲ್ಲಿ ತಾಪಮಾನ ಏರಿಕೆಯಾದರೆ ಏನು ಗತಿ? ಪ್ರಾಣಿಗಳು ಮತ್ತು ಮನುಷ್ಯರಿಗೆ ಕೆಲವು ಶಾರೀರಿಕ ಮಿತಿಗಳಿರುವುದರಿಂದ ಕೆಲವು ಪ್ರಾಣಿ ಪ್ರಭೇದಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಬದುಕಲಾರವು. ಮನುಷ್ಯರೂ ಹಾಗೆಯೇ. ಪ್ರತೀ ವರ್ಷ ವಿಶ್ವದಾದ್ಯಂತ ನೂರಾರು ಸಾವಿರ ಜನರು ತೀವ್ರ ತಾಪಮಾನ ಕಾರಣದಿಂದಲೇ ಸಾಯುತ್ತಾರೆ.
ಅಂದಿನ ಸುಡುತ್ತಿದ್ದ ನೆಲದಲ್ಲಿ ಬದುಕಿದ್ದ ಡೈನೋಸಾರ್ಗಳೂ ವಾತಾವರಣದಲ್ಲಿನ ಕ್ಷಿಪ್ರ ಬದಲಾವಣೆಗೆ ಹೊಂದಿಕೊಳ್ಳಲಿಕ್ಕಾಗದೇ ಇದ್ದಾಗ ಕಂಡದ್ದು ಇಂಥದೇ ಅಳಿವಿನ ಹಂತವನ್ನು.
ಭೂಮಿಯಲ್ಲಿ ಇಲ್ಲಿಯವರೆಗೆ ಸಂಭವಿಸಿದ ಐದು ಮಹಾ ಸಾಮೂಹಿಕ ಅಳಿವುಗಳಿಗೆ ಕಾರಣವಾದದ್ದು ಒಂದೇ ತೀವ್ರ ತಾಪಮಾನ ಇಲ್ಲವೆ ತೀವ್ರ ಶೀತ. ಜೊತೆಗೆ ಸಮುದ್ರ ಅಥವಾ ಭೂಮಿಯಲ್ಲಿನ ರಾಸಾಯನಿಕ ಚಕ್ರಗಳಲ್ಲಿ ಆದ ಬದಲಾವಣೆಗಳು ಎಂಬುದನ್ನು ಇತಿಹಾಸ ಋಜುವಾತುಪಡಿಸಿದೆ.
ಉದಾಹರಣೆಗೆ, 67 ದಶಲಕ್ಷ ವರ್ಷಗಳ ಹಿಂದೆ ಕ್ಷುದ್ರಗ್ರಹದ ಪ್ರಭಾವದಿಂದ ಅಗಾಧ ಧೂಳಿನ ಮೋಡ ಸೃಷ್ಟಿಯಾಯಿತು ಮತ್ತು ಪ್ರಪಂಚದಾದ್ಯಂತ ಭೀಕರ ಜ್ವಾಲಾಮುಖಿ ಸ್ಫೋಟಗಳನ್ನು ಉಂಟುಮಾಡಿತು. ಆಕಾಶವನ್ನು ಕಪ್ಪಾಗಿಸಿತು ಮತ್ತು ಹವಾಮಾನವನ್ನು ತೀವ್ರ ತಂಪಾಗಿಸಿತು. ಈ ತೀವ್ರ ಶೀತ ಸ್ಥಿತಿ ಎಷ್ಟು ಬೇಗ ಸಂಭವಿಸಿತೆಂದರೆ ಜೀವಿಗಳು ಈ ಸ್ಥಿತ್ಯಂತರಕ್ಕೆ ಹೊಂದಿಕೊಳ್ಳುವುದಕ್ಕೇ ಕಾಲಾವಕಾಶವಿರಲಿಲ್ಲ. ಇದಾದ ಬಳಿಕವೇ ಡೈನೋಸಾರ್ ಯುಗದ ಅಂತ್ಯವಾದದ್ದು.
ಸಾಮೂಹಿಕ ವಿನಾಶದಲ್ಲಿ, ಎಲ್ಲಾ ಪ್ರಭೇದಗಳ ಕನಿಷ್ಠ ಮುಕ್ಕಾಲು ಜೀವಕುಲ ಸುಮಾರು 30 ಲಕ್ಷ ವರ್ಷಗಳಲ್ಲಿ ಕಣ್ಮರೆಯಾಯಿತು. ಕೆಲವು ವಿಜ್ಞಾನಿಗಳು ನಾವು ಆರನೇ ಸಾಮೂಹಿಕ ಅಳಿವಿನ ಮಧ್ಯದಲ್ಲಿದ್ದೇವೆ ಎಂದು ಹೇಳುತ್ತಾರೆ. ಮುಂದಿನ ಕೆಲ ದಶಕಗಳಲ್ಲಿ ಸುಮಾರು 80 ಲಕ್ಷ ಪ್ರಭೇದಗಳಲ್ಲಿ ಕನಿಷ್ಠ 10 ಲಕ್ಷ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ನಿಜವಾದ ಅಳಿವಿನ ಪ್ರಮಾಣ ಇನ್ನೂ ಹೆಚ್ಚೇ ಇರಬಹುದು ಎಂದು ಅನೇಕ ವಿಜ್ಞಾನಿಗಳು ಭಾವಿಸುತ್ತಾರೆ.
(ಆಧಾರ: DW)