varthabharthi


ಸಿನಿಮಾ

ಸಿನಿಮಾವನ್ನು ಸಂದೇಶ ನೀಡಲು ಬಳಸಬೇಕೆ ಹೊರತು ದುರ್ಬಳಕೆ ಮಾಡಬಾರದು: 'ದಿ ಕೇರಳ ಸ್ಟೋರಿ' ಬಗ್ಗೆ ನಟ ಟೊವಿನೊ ಥಾಮಸ್

ವಾರ್ತಾ ಭಾರತಿ : 10 May, 2023

Photo: twitter/ttovino

ಮುಂಬೈ: 2018ರಲ್ಲಿ ಸಂಭವಿಸಿದ ಕೇರಳ ಪ್ರವಾಹ ಕುರಿತು ನಿರ್ಮಾಣವಾಗಿರುವ '2018' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಟೊವಿನೊ ಥಾಮಸ್, ಈ ಸಿನಿಮಾವನ್ನು ಕೇರಳದ ಸತ್ಯ ಕತೆ ಎಂದು ಜನರು ಹೇಳುತ್ತಿರುವ ಬಗ್ಗೆ ನಿಮಗೇನನ್ನಿಸುತ್ತದೆ ಹಾಗೂ 'ದಿ ಕೇರಳ ಸ್ಟೋರಿ' ರಾಜ್ಯವನ್ನು ಬೇರೆಯದೇ ಬಣ್ಣದಲ್ಲಿ ತೋರಿಸಿರುವುದಕ್ಕೆ ನಿಮಗೆ ನೋವಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿರುವ ಟೋವಿನ್ ಥಾಮಸ್‌, ಕೇವಲ ಮೂವರು ವ್ಯಕ್ತಿಗಳನ್ನು ಮಾತ್ರ ಉಲ್ಲೇಖಿಸಿ ಇಡೀ ಕೇರಳದ ಕತೆ ಎಂದು ಸಾರ್ವತ್ರೀಕರಣಗೊಳಿಸಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

indian express.comಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಟೋವಿನ್ ಥಾಮಸ್, "ನಾನು ಈವರೆಗೆ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ವೀಕ್ಷಿಸಿಲ್ಲ. ಆ ಚಿತ್ರವನ್ನು ವೀಕ್ಷಿಸಿರುವ ಯಾರೊಂದಿಗೂ ನಾನು ಮಾತನಾಡಿಲ್ಲ. ನಾನು ಟ್ರೇಲರ್ ಮಾತ್ರ ವೀಕ್ಷಿಸಿದ್ದೇನೆ. ಮತ್ತದರ ನಿರ್ಮಾಪಕರು ತಾವೇತಾವಾಗಿ 32,000 ಸಂಖ್ಯೆಯಿಂದ 3 ಎಂದು ಮಾರ್ಪಾಡು ಮಾಡಿದ್ದಾರೆ. ಹಾಗೆಂದರೇನು? ನನಗೆ ತಿಳಿದಂತೆ ಕೇರಳದಲ್ಲಿ 35 ದಶಲಕ್ಷ ಜನರು ವಾಸಿಸುತ್ತಿದ್ದಾರೆ ಮತ್ತು ಕೇವಲ ಮೂರು ಘಟನೆಗಳನ್ನು ಉಲ್ಲೇಖಿಸಿ ಯಾರೂ ಅವನ್ನು ಸಾರ್ವತ್ರೀಕರಣಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕೇರಳದಲ್ಲಿ ಇಂತಹ ಘಟನೆಗಳು ನಡೆದಿವೆ ಎಂಬ ವಾಸ್ತವವನ್ನು ನಾನು ಅಲ್ಲಗಳೆಯುವುದಿಲ್ಲ. ಆ ಬಗ್ಗೆ ನನಗೆ ವೈಯಕ್ತಿಕವಾಗಿ ಏನೂ ತಿಳಿದಿರದಿದ್ದರೂ ಸುದ್ದಿಗಳನ್ನು ಓದಿ ತಿಳಿದುಕೊಂಡಿದ್ದೇನೆ. ನಾವಿಂದು ಏನೆಲ್ಲ ನೋಡುತ್ತಿದ್ದೇವೆ ಅವೆಲ್ಲ ವಾಸ್ತವವಲ್ಲ, ಕೇವಲ ಅಭಿಪ್ರಾಯಗಳು. ಐದು ವಿಭಿನ್ನ ಸುದ್ದಿ ವಾಹಿನಿಗಳಲ್ಲಿ ಒಂದೇ ಸುದ್ದಿಯನ್ನು ಐದು ವಿಭಿನ್ನ ಆಯಾಮಗಳಲ್ಲಿ ನಾವು ನೋಡುತ್ತೇವೆ. ಹೀಗಾಗಿ ಯಾವುದು ಸರಿ, ಯಾವುದು ತಪ್ಪು ಎಂದು ನನಗೆ ತಿಳಿದಿಲ್ಲ. ಆದರೆ, ನಾನು ಇಂತಹ ಅಭಿಪ್ರಾಯಗಳನ್ನು ಕೇಳಿದ್ದೇನೆ. ಹೀಗಾಗಿ ಇಂತಹ ಘಟನೆಗಳು ನಡೆದಿವೆ ಎಂಬ ವಾಸ್ತವವನ್ನು ನಾನು ನಿರಾಕರಿಸುವುದಿಲ್ಲ. ಆದರೆ, 35  ದಶಲಕ್ಷ ಮಂದಿಯ ಪೈಕಿ ಮೂವರ ಉದಾಹರಣೆಯನ್ನು ಸಾರ್ವತ್ರೀಕರಣಗೊಳಿಸಲು ಸಾಧ್ಯವಿಲ್ಲ ಮತ್ತು ತಪ್ಪು ಮಾಹಿತಿ ನೀಡುವುದು ನಿಜಕ್ಕೂ ಕೆಟ್ಟದ್ದು" ಎಂದು ಹೇಳಿದ್ದಾರೆ.

ಜನರು ಕಾಲ್ಪನಿಕ ಕತೆಯನ್ನು ಸಿನಿಮಾದಲ್ಲಿ ತೋರಿಸಬಹುದಾಗಿದೆ. ಆದರೆ, ಸಿನಿಮಾಗೆ 'ದಿ ಕೇರಳ ಸ್ಟೋರಿ' ಎಂದು ಹೆಸರಿಟ್ಟಿರುವುದು ತಪ್ಪು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಿನಿಮಾ ಅತ್ಯಂತ ಬಲಶಾಲಿ ಮಾಧ್ಯಮವಾಗಿದ್ದು, ಅದನ್ನು ಸಂದೇಶ ನೀಡಲು ಬಳಸಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಟೋವಿನ್ ಥಾಮಸ್‌ ಕಿವಿಮಾತು ಹೇಳಿದ್ದಾರೆ.

ಸಿನಿಮಾ ಮೂಲಕ ನಾವು ಪ್ರೇಕ್ಷಕರಿಗೆ ಬಲವಾದ ಸಂದೇಶ ನೀಡಬಹುದಾಗಿದೆ. ನಾವದನ್ನು ಜವಾಬ್ದಾರಿಯನ್ನಾಗಿ ಸ್ವೀಕರಿಸಬೇಕಿದೆ. ಸಿನಿಮಾವು ಕಲೆಯ ಅತ್ಯಂತ ಪರಿಶುದ್ಧ ಮಾದರಿ. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)