ಉಪ್ಪಿನಂಗಡಿ: ಅವಧಿ ಕಳೆದರೂ ಮುಗಿಯದ ಮತದಾನ
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮತಗಟ್ಟೆ ಸಂಖ್ಯೆ 217ರ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಯಂತ್ರ ಕೈಕೊಟ್ಟಿದ್ದು, ಮತದಾನ ಮುಕ್ತಾಯದ ಸಮಯವಾದ 6ರ ಬಳಿಕವೂ ಮತದಾನಕ್ಕಾಗಿ ಮತಗಟ್ಟೆ ಎದುರು ಜನರ ಸರತಿ ಸಾಲು ಕಂಡು ಬರುತ್ತಿದೆ.
ಇಲ್ಲಿ ಮತದಾನ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು. ಬಳಿಕ ಮತದಾನ ಪ್ರಕ್ರಿಯೆ ಆರಂಭವಾಯಿತಾದರೂ, ಸರತಿ ಸಾಲು ಕಡಿಮೆಯಾಗಿಲ್ಲ. ಮತದಾನ ಮುಕ್ತಾಯದ ಸಮಯವಾದ ಆರು ಗಂಟೆಯ ನಂತರವೂ ಜನರ ಸರತಿ ಸಾಲು ಇಲ್ಲಿದ್ದು, ಅವರಿಗೆಲ್ಲಾ ಮತದಾನದ ಚೀಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ಅಲ್ಲಿದ್ದ ಎಲ್ಲರ ಮತದಾನ ಮುಗಿಯುವವರೆಗೆ ಮುಂದುವರಿಸಲಾಗಿದೆ. ಹಲವು ಹೊತ್ತಿನಿಂದ ಮಹಿಳೆಯರು, ಹಿರಿಯರು ಸರತಿ ಸಾಲಿನಲ್ಲಿದ್ದುಕೊಂಡು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಇಲ್ಲಿ ಕಂಡು ಬಂದಿದ್ದು, ಸಂಜೆಯ ಬಳಿಕ ಮೊದಲಿಗೆ ಮಹಿಳೆಯರಿಗೆ, ಹಿರಿಯರಿಗೆ ಮತದಾನಕ್ಕೆ ಅವಕಾಶ ನೀಡಲಾಯಿತು. ರಾತ್ರಿ ಏಳರ ಸುಮಾರಿಗೆ ಮಹಿಳೆಯರ ಮತದಾನ ಮುಗಿದಿದ್ದು, ಬಳಿಕ ಪುರುಷರ ಸಾಲನ್ನು ಮತದಾನಕ್ಕೆ ಬಿಡಲಾಯಿತು.