ಗ್ಯಾರಂಟಿ ಸರಕಾರ ವಾರಂಟಿ ಉಳಿಸಿಕೊಳ್ಳಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಅಭಿವೃದ್ಧ್ದಿಯ ಹೆಸರಿನಲ್ಲಿ ಮತ ಯಾಚಿಸಿರುವ ಕಾರಣಕ್ಕೆ’ ಕಾಂಗ್ರೆಸ್‌ನ ಗೆಲುವು ರಾಜ್ಯದ ಪಾಲಿಗೆ ಮುಖ್ಯವಾಗಿದೆ. ಕಳೆದ ಒಂದು ದಶಕದ ಆರ್ಥಿಕ ಹಿಂಜರಿತದ ಕೆಟ್ಟ ಪರಿಣಾಮಗಳನ್ನು ನಾಡಿನ ಜನತೆ ಅನುಭವಿಸಿ ಸುಸ್ತಾಗಿದ್ದಾರೆ. ನೋಟು ನಿಷೇಧ, ಜಿಎಸ್‌ಟಿ, ಕೊರೋನ, ಲಾಕ್‌ಡೌನ್ ಮೊದಲಾದವುಗಳು ನಾಡಿನ ಜನರ ಬದುಕನ್ನು ಜರ್ಜರಿತಗೊಳಿಸಿವೆ. ಸಂಕಟಗಳಲ್ಲಿ ಬೇಯುತ್ತಿದ್ದ ಸಮಯದಲ್ಲಿ ಜನರಿಗೆ ಸರಕಾರದಿಂದ ದೊರಕಿರುವುದು ‘ಭಾಷಣಗಳ ಸುರಿಮಳೆ’. ಒಂದು ಹಂತದವರೆಗೆ ಈ ಭಾಷಣಗಳಿಗೆ ಮೈಮರೆತವರು ಕೂಡ ನಿಧಾನಕ್ಕೆ ವಾಸ್ತವದ ಬೆಂಕಿಯ ಶಾಖಕ್ಕೆ ಬೆಚ್ಚಿ ಬಿದ್ದರು. ಗಾಯಗಳ ಮೇಲೆ ಬರೆ ಹಾಕುವಂತೆ ಶೇ. ೪೦ ಕಮಿಷನ್ ಭ್ರಷ್ಟಾಚಾರ ನಾಡನ್ನು ಇನ್ನಷ್ಟು ಛಿದ್ರವಾಗಿಸಿತು. ಆಳುವವರು ತಮ್ಮ ಹುಳುಕುಗಳನ್ನು ಮುಚ್ಚಿ ಹಾಕಲು ಹಿಜಾಬ್, ಹಲಾಲ್, ಲವ್ ಜಿಹಾದ್...ಗಳನ್ನು ಬೀದಿಗೆ ಬಿಟ್ಟು ಜನರನ್ನು ಆತಂಕಕ್ಕೆ ತಳ್ಳಿದರು. ವಿದ್ಯಾರ್ಥಿಗಳ ಬದುಕನ್ನು ಅರಳಿಸಬೇಕಾದ ಶಾಲೆಗಳು ರಾಜಕೀಯದ ಆಡುಂಬೊಲವಾಯಿತು. ಆಗಾಗ ದಿಲ್ಲಿಯಿಂದ ಸುರಿಯುವ ಮೋದಿಯ ಭಾಷಣ, ಬರಡು ಭೂಮಿಗೆ ಸುರಿಯುವ ಬೆಂಕಿಯ ಮಳೆಯಂತಿತ್ತು. ಈ ಎಲ್ಲ ಸಂಕಟಗಳಿಂದ ಜನರನ್ನು ಬಿಡುಗಡೆ ಮಾಡುವ ಏಕೈಕ ಬೆಳಕಿನ ಕಿರಣವಾಗಿತ್ತು ವಿಧಾನಸಭಾ ಚುನಾವಣೆ.
ನಾಡಿನ ಜನರ ಸದ್ಯದ ಅಗತ್ಯವೇನು ಎನ್ನುವುದನ್ನು ಸ್ಪಷ್ಟವಾಗಿ ಕಂಡುಕೊಂಡ ಕಾಂಗ್ರೆಸ್ ‘ಗ್ಯಾರಂಟಿ ಕಾರ್ಡ್’ಗಳ ಮೂಲಕ ಚುನಾವಣಾ ಕಣಕ್ಕಿಳಿಯಿತು. ಬಿಜೆಪಿ ಮಾತ್ರ ಯಾವ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕು ಎನ್ನುವ ಗೊಂದಲದಲ್ಲಿತ್ತು. ಈ ನಾಡಿನ ಮುಸ್ಲಿಮರ ವಿರುದ್ಧ ಇತರ ಸಮುದಾಯವನ್ನು ಎತ್ತಿಕಟ್ಟುವುದೊಂದೇ ಚುನಾವಣೆಯನ್ನು ಗೆಲ್ಲುವ ದಾರಿ ಎಂದು ಆರಂಭದಲ್ಲಿ ಭಾವಿಸಿತು. ಮುಸ್ಲಿಮರಿಗೆ ನೀಡಲಾದ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಲಿಂಗಾಯತ, ಒಕ್ಕಲಿಗರಿಗೆ ನೀಡಿ ಎರಡು ಸಮುದಾಯಗಳ ನಡುವೆ ಕಿಡಿ ಹಚ್ಚುವ ಪ್ರಯತ್ನ ನಡೆಸಿತು. ಬೆಂಕಿ ಹತ್ತಿಕೊಳ್ಳದೇ ಇದ್ದಾಗ, ಎಲ್ಲರನ್ನು ಒಳಗೊಳಿಸುವ ಮೂಲಕ ಚುನಾವಣೆಯನ್ನು ಗೆಲ್ಲುವ ಹೊಸ ದಾರಿಗಾಗಿ ತಿಣುಕಾಡಿತು. ಹಲಾಲ್ ಕಟ್, ಹಿಜಾಬ್ ಮುಗಿದ ವಿಷಯ ಎಂದು ಘೋಷಿಸಿತು. ಆರೆಸ್ಸೆಸ್, ಸಂಘಪರಿವಾರವನ್ನು ಚುನಾವಣೆಯಿಂದ ದೂರವಿಡುವ ಸಂದೇಶವನ್ನು ಈ ಮೂಲಕ ಯಡಿಯೂರಪ್ಪ ಜನರಿಗೆ ನೀಡಿದರು. ಆದರೆ ಶೇ. ೪೦ ಕಮಿಶನ್ ಆರೋಪದಿಂದ ಸಾರ್ವಜನಿಕವಾಗಿ ಮುಖತೋರಿಸಲಾಗದ ಸ್ಥಿತಿ ಇದ್ದುದರಿಂದ, ಚುನಾವಣೆಯಲ್ಲಿ ಮತ್ತೆ ಮೋದಿ, ಅಮಿತ್ ಶಾ ಮುಖಗಳು ಬಿಜೆಪಿಗೆ ಅಗತ್ಯವಾಯಿತು. ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಪಯತ್ನವನ್ನು ಅಮಿತ್ ಶಾ ಕೊನೆಯ ಗಳಿಗೆಯಲ್ಲಿ ನಡೆಸಿ ವಿಫಲರಾದರು. ದೇಶದ ಗೃಹಸಚಿವನೆನ್ನುವ ಘನತೆಯನ್ನು ಮರೆತು ದ್ವೇಷ ಭಾಷಣಗಳ ಮೂಲಕ ಸುದ್ದಿಯಾದರು. ಅದೂ ನಿರೀಕ್ಷಿತ ಪರಿಣಾಮ ಬೀರಲಿಲ್ಲ. ಕೊನೆಗೆ, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಜೊತೆಗೆ ಸ್ಪರ್ಧೆಗೆ ಇಳಿದು, ಬಿಜೆಪಿಯೂ ‘ಉಚಿತ’ಗಳನ್ನು ಘೋಷಿಸಿತು. ಆದರೆ ಪಕ್ಷದ ಘೋಷಣೆಯೊಳಗೇ ವಿರೋಧಾಭಾಸಗಳಿದ್ದವು. ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿತ್ತು. ಆ ಕಾರಣದಿಂದ ಕಾಂಗ್ರೆಸ್‌ನ ‘ಗ್ಯಾರಂಟಿ’ಯ ಮುಂದೆ ಅದು ನೆಲೆ ಬೆಲೆ ಕಳೆದುಕೊಂಡಿತು. ಅಂತಿಮವಾಗಿ ಮೋದಿಯ ರೋಡ್ ಶೋಗಳನ್ನೇ ನೆಚ್ಚಿಕೊಂಡು ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವ ಕನಸು ಕಂಡಿತು. ಈ ಬಾರಿಯ ಚುನಾವಣೆಯ ಫಲಿತಾಂಶಕ್ಕಾಗಿ ನೈತಿಕ ಹೊಣೆ ಹೊತ್ತು ಯಾರಾದರೂ ರಾಜೀನಾಮೆ ನೀಡಬೇಕು ಎಂದಾದರೆ ಮೋದಿಯವರೇ ರಾಜೀನಾಮೆಯನ್ನು ನೀಡಬೇಕು. ಚುನಾವಣಾ ಚುಕ್ಕಾಣಿ ರಾಜ್ಯ ಬಿಜೆಪಿ ನಾಯಕರ ಕೈ ಜಾರಿದಾಗ ಅದನ್ನು ಕೈಗೆತ್ತಿಕೊಂಡು ಮುನ್ನಡೆಸಿರುವುದು ಪ್ರಧಾನಿ ಮೋದಿ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಪ್ರಧಾನಿ ಮೋದಿಯೇ ಬಿಜೆಪಿಗೆ ಚುನಾವಣಾ ವಿಷಯವಾಗಿತ್ತು.
ಕರಾವಳಿಯನ್ನು ಹೊರತು ಪಡಿಸಿದರೆ, ನಾಡಿನಾದ್ಯಂತ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ತನ್ನದೇ ಆದ ಪರಿಣಾಮಗಳನ್ನು ಬೀರಿವೆ. ಇದೀಗ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನ ಮುಂದಿರುವ ಅತಿ ದೊಡ್ಡ ಸವಾಲು, ತನ್ನ ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿದೆ. ತುಸು ಏಮಾರಿದರೆ, ಕಾಂಗ್ರೆಸ್‌ನ್ನು ಅಧಿಕಾರಕ್ಕೇರಿಸಿದ ‘ಗ್ಯಾರಂಟಿ’ಗಳೇ ಅದರ ಕೊರಳಿಗೆ ಉರುಳಾಗಿ ಪರಿಣಮಿಸಬಹುದು. ಬಿಜೆಪಿ ಸರಕಾರ ನುಂಗಿ ಹಾಕುತ್ತಿರುವ ಶೇ. ೪೦ ಕಮಿಶನ್ ಹಣದಿಂದ ಬಡ ಜನರಿಗೆ ಉಚಿತಗಳನ್ನು ಹಂಚುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಇದು ಕಾರ್ಯಸಾಧ್ಯ ಮಾತಲ್ಲ. ಇಷ್ಟಕ್ಕೂ ಕಾಂಗ್ರೆಸ್‌ನೊಳಗೆ ಭ್ರಷ್ಟಾಚಾರಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಕೋಟ್ಯಂತರ ರೂಪಾಯಿ ಚೆಲ್ಲಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಅವೆಲ್ಲವನ್ನು ಅಧಿಕಾರಾವಧಿಯಲ್ಲಿ ಸರಿದೂಗಿಸಿಕೊಳ್ಳುವ ಪ್ರಯತ್ನ ಸಹಜವಾಗಿಯೇ ನಡೆಯುತ್ತದೆ. ಇದೇ ಸಂದರ್ಭದಲ್ಲಿ, ಈ ಐದು ಬೃಹತ್ ಯೋಜನೆಗಳಿಗೆ ಬೇಕಾಗುವ ಹಣವನ್ನು ಹೊಂದಿಸುವ ಸವಾಲಿಗೆ ಮುಖ್ಯಮಂತ್ರಿಯಾದವರು ಎದೆಕೊಡಬೇಕು. ಮುಖ್ಯಮಂತ್ರಿಯಾದವರಿಗೆ ಆ ಮುಳ್ಳಿನ ಕುರ್ಚಿಯನ್ನು ಸಂಭಾಳಿಸುವುದು ಗೊತ್ತಿರಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಎಕ್ಕುಟ್ಟಿ ಹೋಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ ಕೇಂದ್ರ ಸರಕಾರ ರಾಜ್ಯ ಪಾಲನ್ನು ನೀಡಲು ಸತಾಯಿಸಿದೆ. ಸಾವಿರಾರು ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರ ನಿಧಿ ಬಾಕಿ ಉಳಿಸಿದೆ. ಅಗತ್ಯ ಅನುದಾನಗಳನ್ನೂ ಬಿಡುಗಡೆ ಮಾಡಿಲ್ಲ. ಇದೀಗ ಕಾಂಗ್ರೆಸ್ ಸರಕಾರದ ಜೊತೆಗೆ ಕೇಂದ್ರ ಹೇಗೆ ಸಹಕರಿಸುತ್ತದೆ ಎನ್ನುವುದರ ಆಧಾರದಲ್ಲಿ ಗ್ಯಾರಂಟಿಯ ವಾರಂಟಿಯನ್ನು ನಿರ್ಧರಿಸಬಹುದು. ರಾಜ್ಯದ ಪಾಲಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರ ಅಸಹಕಾರ ವ್ಯಕ್ತಪಡಿಸಿದರೆ, ಗ್ಯಾರಂಟಿಯನ್ನು ಈಡೇರಿಸುವುದು ಸುಲಭವಿಲ್ಲ. ಇದನ್ನೇ ಮುಂದಿಟ್ಟುಕೊಂಡು, ಬಿಜೆಪಿಯ ನಾಯಕರು ಸರಕಾರದ ವಿರುದ್ಧ ಅಪಪ್ರಚಾರವನ್ನು ಆರಂಭಿಸಬಹುದು. ನಾಡಿನ ಜನತೆಯನ್ನು ಕಾಂಗ್ರೆಸ್ ವಂಚಿಸಿದೆ ಎಂದು ಆರೋಪಿಸಬಹುದು. ಸರಕಾರ ರಚನೆಯಾದ ದಿನದಿಂದಲೇ ಕೇಂದ್ರದ ಜೊತೆಗೆ ರಾಜ್ಯ ಸಂಘರ್ಷಕ್ಕಿಳಿಯಬೇಕಾಗುತ್ತದೆ. ಬಿಜೆಪಿಯ ಸಂಸದರು ರಾಜ್ಯ ಸರಕಾರಕ್ಕೆ ತಮ್ಮ ಸಹಕಾರ ನೀಡಬಹುದು ಎಂದು ನಿರೀಕ್ಷಿಸುವಂತಿಲ್ಲ. ಯಾಕೆಂದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ‘ರಾಜ್ಯಕ್ಕೆ ಯಾವುದೇ ಪರಿಹಾರ ಬಿಡುಗಡೆ ಮಾಡುವ ಅಗತ್ಯವಿಲ್ಲ’ ಎಂದು ಪ್ರಧಾನಿ ಮೋದಿಯವರಿಗೆ ಛತ್ರಿ ಹಿಡಿದ ಭೂಪರು ಅವರು.
ಕಾಂಗ್ರೆಸ್ ಎದುರಿಸಬೇಕಾಗಿರುವ ಎರಡನೇ ಅತಿ ದೊಡ್ಡ ಸವಾಲು ಗಲಭೆಗಳಾಗದಂತೆ ಎಚ್ಚರವಹಿಸುವುದು. ‘ಕಾಂಗ್ರೆಸ್ ಬಂದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ’ ಎನ್ನುವ ಬೆದರಿಕೆಯನ್ನು ದೇಶದ ಗೃಹ ಸಚಿವರೇ ಜನರಿಗೆ ಒಡ್ಡಿದ್ದಾರೆ. ಅಂದರೆ ಪೊಲೀಸ್ ಇಲಾಖೆಗಳನ್ನು ಬಳಸಿಕೊಂಡೇ ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನ ನಡೆಯಬಹುದು. ಆದುದರಿಂದ ಕಾಂಗ್ರೆಸ್ ಸರಕಾರದಿಂದ ರಾಜ್ಯ ಯೋಗ್ಯ ಗೃಹ ಸಚಿವನೊಬ್ಬನನ್ನು ನಿರೀಕ್ಷಿಸುತ್ತಿದೆ. ಗಲಭೆಗಳು ನಡೆದದ್ದೇ ಆದರೆ, ಕಾಂಗ್ರೆಸ್‌ನ ‘ಗ್ಯಾರಂಟಿ’ಗಳು ರೆಕ್ಕೆ ಸುಟ್ಟ ಹಕ್ಕಿಯಂತಾಗಬಹುದು. ರಾಜ್ಯದಲ್ಲಿ ಗ್ಯಾರಂಟಿಯ ವಾರಂಟಿ ಉಳಿಯಬೇಕಾದರೆ, ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗಬಾರದು. ಜನತೆ ಕಾಂಗ್ರೆಸನ್ನು ಒಮ್ಮತದಿಂದ, ಭರ್ಜರಿ ಬಹುಮತದೊಂದಿಗೆ ಆರಿಸಿರುವುದರಿಂದ, ತನ್ನ ಹೊಣೆಗಾರಿಕೆಯಿಂದ ಯಾವ ರೀತಿಯಲ್ಲೂ ಕಾಂಗ್ರೆಸ್ ಹೆಗಲು ಜಾರಿಸಿಕೊಳ್ಳುವಂತಿಲ್ಲ. ಮತದಾನದ ಸಂದರ್ಭದಲ್ಲಿ ಜನತೆ ಪ್ರದರ್ಶಿಸಿದ ಮುತ್ಸದ್ದಿತನವನ್ನು, ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಪ್ರದರ್ಶಿಸುವುದು ಈ ಕಾರಣಕ್ಕೆ ಅತ್ಯಗತ್ಯವಾಗಿದೆ.