ಉಡುಪಿ: ಪ್ರತಿ 10 ಸಾವಿರ ಮಂದಿಯಲ್ಲಿ 65 ಮಂದಿ ನೋಟಾ ಆಯ್ಕೆ
ರಾಜ್ಯದಲ್ಲಿ ನೋಟಾದ ಪ್ರಮಾಣ ಶೇ.0.69
ಉಡುಪಿ, ಮೇ 15: ಶನಿವಾರ ಮುಕ್ತಾಯಗೊಂಡ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿ 10,000 ಮಂದಿಯಲ್ಲಿ 65 ಮಂದಿ ನೋಟಾವನ್ನು ಆಯ್ಕೆ ಮಾಡಿದ್ದಾರೆ ಎಂದು ಭಾರತದ ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳುತ್ತವೆ. ರಾಜ್ಯದಲ್ಲಿ ನೋಟಾದ ಪ್ರಮಾಣ ಶೇ.0.69 ಆಗಿದೆ ಎಂದು ಆಯೋಗ ಹೇಳಿದೆ.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 8.18 ಲಕ್ಷ ಮತದಾರರು ಮೇ 10ರಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಗಳ ಎಣಿಕೆಯ ವೇಳೆ ಜಿಲ್ಲೆಯಲ್ಲಿ ಒಟ್ಟು 5391 ಮಂದಿ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಒಪ್ಪದೇ ನೋಟಾ ಆಯ್ಕೆಗೆ ತಮ್ಮ ಮತವನ್ನು ನೀಡಿರುವುದು ಕಂಡುಬಂದಿತ್ತು. 2018ನೇ ವಿಧಾನಸಭಾ ಚುನಾವಣೆಯಲ್ಲಿ 6728 ಮಂದಿ ನೋಟಾವನ್ನು ಆಯ್ಕೆ ಮಾಡಿಕೊಂಡಿದ್ದರು.
ಜಿಲ್ಲೆಯಲ್ಲಿ ಅತ್ಯಧಿಕ ನೋಟಾ ಮತ ಬಿದ್ದಿರುವುದು ಉಡುಪಿ ಕ್ಷೇತ್ರದಲ್ಲಿ. ಇಲ್ಲಿ ಒಟ್ಟು 1.64 ಲಕ್ಷ ಮಂದಿ ತಮ್ಮ ಮತವನ್ನು ಚಲಾಯಿಸಿದ್ದರು. ಇಲ್ಲಿ ಬಿದ್ದಿರುವ ನೋಟಾ ಮತಗಳ ಸಂಖ್ಯೆ 1316 (1298 ಇವಿಎಂ+18 ಅಂಚೆ ಮತಗಳಲ್ಲಿ). ಇದು ಒಟ್ಟು ಮತದಾನದ ಶೇ.0.79 ಆಗಿದೆ. 2018ರಲ್ಲಿ ಉಡುಪಿ ಕ್ಷೇತ್ರದಲ್ಲಿ 1089 ನೋಟಾ ಮತಗಳ ಚಲಾವಣೆಯಾಗಿದ್ದು, ಇದು ಒಟ್ಟು ಚಲಾವಣೆಗೊಂಡ ಮತಗಳ ಶೇ.0.67 ಆಗಿದೆ. ಹೀಗಾಗಿ ಈ ಬಾರಿ ನೋಟಾ ಮತಗಳ ಸಂಖ್ಯೆ ಹಾಗೂ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಜಿಲ್ಲೆಯಲ್ಲಿ ನೋಟಾ ಮತಗಳಲ್ಲಿ ಎರಡನೇ ಸ್ಥಾನ ಸಿಕ್ಕಿರುವುದು ಬೈಂದೂರು ಕ್ಷೇತ್ರಕ್ಕೆ. ಇಲ್ಲಿ ಈ ಬಾರಿ ಬಿದ್ದಿರುವುದು 1208 ಮತಗಳು. ಇದು ಒಟ್ಟು ಚಲಾವಣೆಗೊಂಡ 1.83 ಲಕ್ಷ ಮತಗಳ ಶೇ.0.65 ಆಗಿದೆ. 2018ರಲ್ಲಿ ಬೈಂದೂರು ಕ್ಷೇತ್ರದಲ್ಲಿ ಚಲಾವಣೆಗೊಂಡ ನೋಟಾ ಮತಗಳ ಸಂಖ್ಯೆ 1647. ಇದು ಒಟ್ಟಾರೆ ಮತದ ಶೇ.0.93 ಆಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೋಟಾದಲ್ಲಿ ಇಳಿಕೆ ಕಂಡುಬಂದಿದೆ.
ನೋಟಾ ಮತಗಳಲ್ಲಿ ಮೂರನೇ ಸ್ಥಾನ ಕುಂದಾಪುರ ಕ್ಷೇತ್ರಕ್ಕೆ. ಇಲ್ಲಿ ಈ ಬಾರಿ ಚಲಾವಣೆಗೊಂಡ ನೋಟಾ ಮತಗಳು 1141. ಕಳೆದ ಬಾರಿ ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನೋಟಾ ಮತಗಳು ಚಲಾವಣೆ ಗೊಂಡಿದ್ದವು. ಒಟ್ಟು 1.65 ಲಕ್ಷ ಮತಗಳು ಚಲಾವಣೆಗೊಂಡ ಈ ಕ್ಷೇತ್ರದ ನೋಟಾ ಮತಗಳ ಪ್ರಮಾಣ ಶೇ.0.68 ಆಗಿದೆ. 2018ರಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಚಲಾವಣೆಗೊಂಡ ನೋಟಾ ಮತಗಳ ಸಂಖ್ಯೆ 1813. ಇದು ಒಟ್ಟಾರೆ ಬಿದ್ದ ಮತಗಳ ಶೇ.1.14 ಆಗಿತ್ತು. ಜಿಲ್ಲೆಯ ಮಟ್ಟಿಗೆ ಇದೊಂದು ದಾಖಲೆ.
ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಬಿದ್ದ ನೋಟಾ ಮತಗಳ ಸಂಖ್ಯೆ 921. ಕ್ಷೇತ್ರದಲ್ಲಿ ಒಟ್ಟು 1.54 ಲಕ್ಷ ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ ನೋಟಾದ ಪ್ರಮಾಣ ಶೇ.0.59 ಆಗಿದೆ. 2018ರಲ್ಲಿ ಕಾರ್ಕಳ ಕ್ಷೇತ್ರ ದಲ್ಲಿ ಒಟ್ಟು 1340 ನೋಟಾ ಮತಗಳು ಚಲಾವಣೆಗೊಂಡಿದ್ದು, ಇದು ಒಟ್ಟು ಮತಗಳ ಶೇ. 0.92 ಆಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೋಟಾ ಮತಗಳ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಇನ್ನು ಕಾಪು ಕ್ಷೇತ್ರದಲ್ಲಿ ಬಿದ್ದ ನೋಟಾ ಮತಗಳ ಸಂಖ್ಯೆ 805. ಒಟ್ಟು 1.50 ಲಕ್ಷ ಮಂದಿ ತಮ್ಮ ಮತಗಳನ್ನು ಚಲಾಯಿಸಿರುವ ಈ ಕ್ಷೇತ್ರದಲ್ಲಿ ನೋಟಾ ಮತಗಳ ಪ್ರಮಾಣ ಶೇ.0.53 ಆಗಿದೆ. 2018ರಲ್ಲಿ ಕಾಪು ಕ್ಷೇತ್ರದಲ್ಲಿ ಒಟ್ಟು 839 ನೋಟಾ ಮತಗಳು ಮತಪೆಟ್ಟಿಗೆಯೊಳಗೆ ಕಂಡು ಬಂದಿದ್ದು, ಇದು ಒಟ್ಟು ಬಿದ್ದ ಮತಗಳ ಶೇ.0.58 ಆಗಿದೆ. ಹೀಗಾಗಿ ಕಾಪು ಕ್ಷೇತ್ರದಲ್ಲಿ ಬಿದ್ದ ನೋಟಾ ಮತಗಳ ಸಂಖ್ಯೆಯಲ್ಲಿ ಕಳೆದ ಬಾರಿಗೆ ಹೋಲಿಸಿದಾಗ ಗಣನೀಯ ವ್ಯತ್ಯಾಸ ಕಂಡುಬಂದಿಲ್ಲ.