ನೂತನ ಮುಖ್ಯಮಂತ್ರಿಯ ಮುಂದಿರುವ ಸವಾಲುಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ವರಿಷ್ಠರು ಘೋಷಿಸಿದ್ದಾರೆ. ಇದನ್ನು ಹೊರತು ಪಡಿಸಿದ ಇನ್ನೊಂದು ಆಯ್ಕೆ ವರಿಷ್ಠರ ಮುಂದೆ ಇದ್ದಿರಲೂ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ . ಶಿವಕುಮಾರ್ ಅವರ ನಡುವೆ ಮುಖ್ಯ ಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿಯಿತ್ತಾದರೂ, ಹಿರಿತನ, ಮುತ್ಸದ್ದಿತನದ ಮಾನದಂಡವನ್ನಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು. ‘‘ಇದು ನನ್ನ ಕೊನೆಯ ಚುನಾವಣೆ’’ ಎನ್ನುವ ಮೂಲಕ ಅದಾಗಲೇ ಸಿದ್ದರಾಮಯ್ಯ ಅವರು ಭಾವನಾತ್ಮಕವಾಗಿ ವರಿಷ್ಠರನ್ನು ಕಟ್ಟಿ ಹಾಕಿದ್ದರು. ಅವರಿಗೆ ಹಂಚಬಹುದಾದ ಮುಖ್ಯಮಂತ್ರಿಗೂ ಹಿರಿದಾದ ಇನ್ನೊಂದು ಸ್ಥಾನ ಅವರ ಬಳಿಯಿರಲಿಲ್ಲ. ಒಮ್ಮೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಹಿಂಭಡ್ತಿ ಕೊಡುವಂತೆಯೂ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯ ಫಲಿತಾಂಶವೇ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಮುನ್ನೆಲೆಗೆ ತಂದಿದೆ. ಕಾಂಗ್ರೆಸನ್ನು ಗೆಲ್ಲಿಸುವಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ನಿರ್ಲಕ್ಷಿಸುವಂತಹದಲ್ಲವಾಗಿದ್ದರೂ, ಸಿದ್ದರಾಮಯ್ಯ ವರ್ಚಸ್ಸು, ಅನುಭವವನ್ನು ಅದು ಸರಿಗಟ್ಟುತ್ತಿರಲಿಲ್ಲ.
ಮುತ್ಸದ್ದೀ ನಾಯಕನಿಲ್ಲದಿದ್ದರೆ ಕೆಲವೇ ತಿಂಗಳಲ್ಲಿ ಸರಕಾರ ಎಡವಿ ಬೀಳುವ ಸಾಧ್ಯತೆಗಳಿದ್ದವು. ಚುನಾವಣೆಯ ಸಂದರ್ಭದಲ್ಲಿ ಅದು ನೀಡಿದ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕಿಳಿಸುವ ಮಹತ್ತರ ಹೊಣೆಗಾರಿಕೆ ಸರಕಾರದ ಮುಂದಿದೆ. ಆ ಹೊಣೆಗಾರಿಕೆಯನ್ನು ಸದ್ಯದ ಸ್ಥಿತಿಯಲ್ಲಿ ಹೆಗಲೇರಿಸಿಕೊಳ್ಳಬಲ್ಲ ಅರ್ಹತೆಯನ್ನು ಹೊಂದಿರುವುದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮಾತ್ರ. ಕಾಂಗ್ರೆಸ್ ಮೇಲೆ ಡಿಕೆಶಿಯ ಋಣಭಾರವಿದೆಯಾದರೂ, ಅದನ್ನು ತೀರಿಸುವುದಕ್ಕೆ ಕಾಂಗ್ರೆಸ್ ಬಳಿ ಹತ್ತು ಹಲವು ಬೇರೆ ದಾರಿಗಳಿವೆ. ತಾನೆಷ್ಟೇ ಒತ್ತಡಗಳನ್ನು ಹಾಕಿದರೂ ಈ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದೇ ಡಿ.ಕೆ. ಶಿವಕುಮಾರ್ ಕೂಡ ತನ್ನ ಪಟ್ಟುಗಳನ್ನು ಹಾಕಿದಂತಿತ್ತು. ಮೊದಲ ಬಾರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರು ಏರಿದ್ದಾರಾದರೂ, ಅದರ ಮಿತಿಯೇನು ಎನ್ನುವುದು ಅವರು ಚೆನ್ನಾಗಿಯೇ ಬಲ್ಲರು. ‘ಇಂದಿನ ಉಪಮುಖ್ಯಮಂತ್ರಿ ಮುಂದಿನ ಮುಖ್ಯಮಂತ್ರಿ’ ಎನ್ನುವ ನಿಟ್ಟಿನಲ್ಲಿ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಾನ ಅದು. ಉಳಿದಂತೆ ಅಧಿಕೃತವಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮಹತ್ವವಿಲ್ಲ.
ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಿರುವುದೇ ಭಿನ್ನಮತ ಶಮನಕ್ಕಾಗಿ. ಹಿಂದೆ ಬಿಜೆಪಿ ಸರಕಾರದಲ್ಲಿ ಒಂದು, ಎರಡು, ಮೂರು ಎಂದು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಿ ಆ ಸ್ಥಾನದ ಇದ್ದ ಬಿದ್ದ ಘನತೆಯನ್ನೂ ಕಳೆದು ಹಾಕಲಾಗಿತ್ತು. ಹೀಗಿರುವಾಗ ಹತ್ತರಲ್ಲಿ ಹನ್ನೊಂದು ಎಂಬಂತೆ ಆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವವರು ಖಂಡಿತ ಡಿ.ಕೆ. ಶಿವಕುಮಾರ್ ಅಲ್ಲ. ಏಕೈಕ ಉಪಮುಖ್ಯಮಂತ್ರಿ ಸ್ಥಾನವನ್ನು ವರಿಷ್ಠರು ಘೋಷಿಸಿರುವುದು ಕೂಡ ಇದೇ ಕಾರಣಕ್ಕೆ. ಪರಮೇಶ್ವರ್, ಜಾರಕಿಹೊಳಿ, ಯು. ಟಿ. ಖಾದರ್‌ರಂತಹ ಶೋಷಿತ ಸಮುದಾಯದ ನಾಯಕರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸಿ ಮುಂದಿನ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಳಾಗಿ ಅವರನ್ನು ಸಿದ್ಧಗೊಳಿಸುವ ಹೊಣೆಗಾರಿಕೆಯೂ ಕಾಂಗ್ರೆಸ್‌ಗಿತ್ತು. ಆದರೆ ಡಿ.ಕೆ. ಶಿವಕುಮಾರ್ ಅವರ ಮಹತ್ವವನ್ನು ಎತ್ತಿ ಹಿಡಿಯುವುದಕ್ಕಾಗಿ ಏಕೈಕ ಉಪಮುಖ್ಯಮಂತ್ರಿ ಸ್ಥಾನವನ್ನು ಘೋಷಿಸಲಾಗಿದೆ ಎನ್ನುವುದು ಪಕ್ಷದೊಳಗಿನ ಮಾತು. ಅಷ್ಟೇ ಅಲ್ಲ, ಹಲವು ಮಹತ್ವದ ಖಾತೆಗಳ ಹಂಚುವಿಕೆಯ ಹೊಣೆಗಾರಿಕೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಗಿದೆ. ಉಪಮುಖ್ಯಮಂತ್ರಿಯಾಗಿದ್ದೂ ಸರಕಾರದ ನೀತಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಇನ್ನೂ ಅವರು ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಯ ಆಯ್ಕೆಯೊಂದಿಗೆ ಸರಕಾರ ರಚನೆಯ ಸವಾಲು ಮುಗಿಯುವುದಿಲ್ಲ. ಗೃಹ ಖಾತೆ, ವಿತ್ತ ಖಾತೆಯಂತಹ ಮಹತ್ವದ ಸ್ಥಾನಗಳು ಯಾರ ಪಾಲಾಗುತ್ತವೆ ಎನ್ನುವುದನ್ನು ಅವಲಂಬಿಸಿಕೊಂಡು ಸರಕಾರದ ಭವಿಷ್ಯ ನಿರ್ಧಾರವಾಗುತ್ತದೆ. ಒಂದೆಡೆ ಪಕ್ಷದ ಹಿತಾಸಕ್ತಿ-ಇನ್ನೊಂದೆಡೆ ನಾಡಿನ ಹಿತಾಸಕ್ತಿ ಇವುಗಳ ಜಗ್ಗಾಟದಲ್ಲಿ ಯಾವುದು ಗೆಲ್ಲುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಶಿಕ್ಷಣದ ಗಂಧಗಾಳಿಯೂ ಇಲ್ಲದ ನಾಗೇಶ್ ಎಂಬವರನ್ನು ಶಿಕ್ಷಣ ಸಚಿವರನ್ನಾಗಿಸಿದ ತಪ್ಪಿಗೆ ನಾಡಿನ ಶಿಕ್ಷಣ ಕ್ಷೇತ್ರ ತೆತ್ತ ಬೆಲೆಯನ್ನು ನಾವು ಕಂಡಿದ್ದೇವೆ. ಸಚಿವ ಸ್ಥಾನ ಹಂಚುವ ಸಂದರ್ಭದಲ್ಲಿ ಶೋಷಿತ ಸಮುದಾಯವನ್ನು ಪರಿಗಣಿಸಬೇಕು. ಹಾಗೆಯೇ ಅವರಲ್ಲಿರುವ ಅರ್ಹರನ್ನು ಗುರುತಿಸುವ ಕೆಲಸವೂ ಆಗಬೇಕು. ಈ ಖಾತೆಗಳನ್ನು ಯಾರಿಗೆ, ಹೇಗೆ ಹಂಚಬೇಕು ಎನ್ನುವ ಸ್ವಾತಂತ್ರ ಎಲ್ಲಿಯವರೆಗೆ ನೂತನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗಿರುವುದಿಲ್ಲವೋ ಅಲ್ಲಿಯವರೆಗೆ, ಸರಕಾರದ ಲೋಪದೋಷಗಳಿಗೆ ಅವರೊಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವಂತಿಲ್ಲ. ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಡುವಿನ ಬಿರುಕಿಗೆ ತೇಪೆ ಹಚ್ಚುವಲ್ಲಿ ಸದ್ಯಕ್ಕೆ ವರಿಷ್ಠರು ಯಶಸ್ವಿಯಾಗಿದ್ದಾರಾದರೂ ಅದು ಮತ್ತೆ ಬಿರುಕು ಬಿಡಲು ಹೆಚ್ಚು ಸಮಯವೇನೂ ಬೇಕಾಗಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಡಿಕೆಶಿ-ಸಿದ್ದರಾಮಯ್ಯ ಗುಂಪುಗಳ ನಡುವಿನ ತಿಕ್ಕಾಟ ಮುಂದುವರಿಯುವ ಸಾಧ್ಯತೆಗಳಿವೆ.
ಅಲ್ಲಿಯವರೆಗೆ ಎಲ್ಲರನ್ನು ಒಳಗೊಳ್ಳುವಂತೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಮಹತ್ತರ ಹೊಣೆಗಾರಿಕೆ ಸಿದ್ದರಾಮಯ್ಯರಿಗಿದೆ. ಒಳಗಿನ ಮತ್ತು ಹೊರಗಿನ ಎರಡೂ ಸವಾಲುಗಳನ್ನು ಎದುರಿಸುತ್ತಾ ಅವರು ಮುಂದುವರಿಯಬೇಕಾಗಿದೆ. ಮೊದಲಿಗೆ, ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ಗ್ಯಾರಂಟಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದೇ ಸಂದರ್ಭದಲ್ಲಿ ಮೀಸಲಾತಿಯ ಕುರಿತಂತೆ ಬಿಜೆಪಿ ಮಾಡಿಟ್ಟಿರುವ ಗೋಜಲುಗಳನ್ನು ಬಿಡಿಸಿ, ಅದಕ್ಕೊಂದು ಪರಿಹಾರವನ್ನು ನೀಡಬೇಕಾಗಿದೆ. ಈ ಸಂದರ್ಭದಲ್ಲಿ ಸಣ್ಣ ಏರು ಪೇರಾದರೂ ಅದನ್ನು ಬಿಜೆಪಿ ಬಳಸಿಕೊಂಡು ಗದ್ದಲ ಎಬ್ಬಿಸಬಹುದು. ಸೋಲಿನಿಂದ ತತ್ತರಿಸಿ ಕೂತಿರುವ ಬಿಜೆಪಿ ಶೀಘ್ರದಲ್ಲೇ ಚೇತರಿಸಿಕೊಂಡು ತನ್ನ ಬೀದಿರಂಪಗಳನ್ನು ಶುರು ಹಚ್ಚಬಹುದು. ಯೋಗ್ಯ ಗೃಹ ಸಚಿವರ ಆಯ್ಕೆ ಕೂಡ ಸರಕಾರದ ಯಶಸ್ಸಿನಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ಹಲವು ಬಾರಿ ವಿತ್ತ ಸಚಿವರಾಗಿ ಬಜೆಟ್ ಮಂಡಿಸಿರುವ, ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸಿ ಅನುಭವಿಯಾಗಿರುವ, ಜನರ ಸಂಕಟಗಳನ್ನು ಹತ್ತಿರದಿಂದ ಬಲ್ಲ ಸಿದ್ದರಾಮಯ್ಯ ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತನ್ನ ಮುಂದಿರುವ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಸಿದ್ದರಾಮಯ್ಯರ ಬಳಿ ಇದೆ. ಜನರು ಅವರ ಮೇಲೆ ಅಗಾಧ ಭರವಸೆಯನ್ನಿಟ್ಟಿದ್ದಾರೆ. ಆ ಭರವಸೆಯನ್ನೇ ಕೈ ಬೆಳಕಾಗಿಸಿಕೊಂಡು ಅವರು ಮುನ್ನಡೆಯಬೇಕು. ಪಕ್ಷದೊಳಗಿರುವ ಇತರ ನಾಯಕರು, ವರಿಷ್ಠರು ನೀಡುವ ಸಹಕಾರದ ತಳಹದಿಯ ಮೇಲೆ ಸಿದ್ದರಾಮಯ್ಯ ಸರಕಾರದ ಯಶಸ್ಸು ನಿಂತಿದೆ. ಸಿದ್ದರಾಮಯ್ಯ ತನ್ನ ಆಡಳಿತದಲ್ಲಿ ವಿಫಲವಾದರೆ, ಕಾಂಗ್ರೆಸ್ ಕೂಡ ರಾಜ್ಯದಲ್ಲಿ ವಿಫಲವಾಗುತ್ತದೆ ಎನ್ನುವ ಎಚ್ಚರಿಕೆ ಅವರ ಸಹೋದ್ಯೋಗಿಗಳಲ್ಲಿಯೂ ಇರಬೇಕು.