ಗರಿಷ್ಠ ಐಪಿಎಲ್ ಶತಕ: ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ಕೊಹ್ಲಿ
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ 62 ಎಸೆತಗಳಲ್ಲಿ ಶತಕ ಸಿಡಿಸಿದ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಗುರುವಾರ ಅತಿಥೇಯ ಎಸ್‌ಆರ್‌ಎಚ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವಲ್ಲಿ ಕೊಹ್ಲಿ ಗಣನೀಯ ಕೊಡುಗೆ ನೀಡಿದ್ದರು.
ಇದು ಕೊಹ್ಲಿಯವರ ಆರನೇ ಐಪಿಎಲ್ ಶತಕವಾಗಿದೆ. ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಹ್ಲಿ, ತಮ್ಮ ತಂಡ 8 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಲು ಕಾರಣರಾದರು. ಐಪಿಎಲ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಾಗಿರುವುದು ಇದೇ ಮೊದಲು. ಇದಕ್ಕೂ ಮುನ್ನ ಹೆನ್ರಿಚ್ ಕ್ಲಾಸೆನ್ ಶತಕದ ನೆರವಿನಿಂದ ಎಸ್‌ಆರ್‌ಎಚ್, ಎದುರಾಳಿಗಳಿಗೆ 187 ರನ್‌ಗಳ ಗುರಿ ನೀಡಿತ್ತು.
ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಹ್ಲಿ, ಭುವನೇಶ್ವರ್ ಕುಮಾರ್ ಅವರ ಮೊದಲ ಎಸೆತದಲ್ಲೇ ಕವರ್ ಮತ್ತು ಪಾಯಿಂಟ್ ನಡುವೆ ಆಕರ್ಷಕ ಬೌಂಡರಿ ಸಿಡಿಸಿದರು. ಈ ಆಕರ್ಷಕ ಹೊಡೆತ ಟ್ರೇಲರ್‌ನಂತೆ ಕಂಡುಬಂದರೆ, ಇನಿಂಗ್ಸ್ ಇದ್ದಕ್ಕೂ ಆಕರ್ಷಕ ಹೊಡೆತಗಳ ಬ್ಲಾಕ್‌ಬ್ಲಸ್ಟರ್ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿತು.
ಗೆಲುವು ಅನಿವಾರ್ಯ ಎಂಬ ಸ್ಥಿತಿಯಲ್ಲಿದ್ದ ಆರ್‌ಸಿಬಿ, ಕೊಹ್ಲಿಯವರ ಶತಕ ಹಾಗೂ ನಾಯಕ ಡುಪ್ಲೆಸಿಸ್ ಅವರ 71 ರನ್‌ಗಳ ನೆರವಿನಿಂದ ನಾಲ್ಕು ಎಸೆತಗಳು ಇರುವಂತೆಯೇ ಜಯ ದಾಖಲಿಸಿ, ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. 13 ಪಂದ್ಯಗಳಿಂದ 14 ಅಂಕಗಳನ್ನು ಗೆದ್ದಿರುವ ಆರ್‌ಸಿಬಿ +0.180 ನಿವ್ವಳ ರನ್‌ರೇಟ್ ಹೊಂದಿದೆ.
ಕೊಹ್ಲಿಯವರ ಆಕರ್ಷಕ ಹೊಡೆತಗಳನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಇದು ಕೊಹ್ಲಿಯವರ ದಿನವಾಗಿತ್ತು. ಮೊದಲ ಎಸೆತದಲ್ಲೇ ಆಕರ್ಷಕ ಕವರ್ ಡ್ರೈವ್ ಮೂಲಕ ಬೌಂಡರಿ ಗಳಿಸಿದ ಕೊಹ್ಲಿ ಹಾಗೂ ಡುಪ್ಲೆಸಿಸ್ ಪಂದ್ಯದುದ್ದಕ್ಕೂ ನಿಯಂತ್ರಣ ಹೊಂದಿದ್ದರು. ಯಶಸ್ವಿ ಪಾಲುದಾರಿಕೆಗಾಗಿ ದೊಡ್ಡ ಹೊಡೆತಗಳನ್ನು ಹೊಡೆದದ್ದು ಮಾತ್ರವಲ್ಲದೇ ವಿಕೆಟ್ ಮಧ್ಯೆ ಚುರುಕಿನ ಓಡಾಟದ ಮೂಲಕವೂ ರನ್‌ಗಳಿಸಿದರು" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.