ಪಾಕಿಸ್ತಾನದೊಂದಿಗೆ ಸಹಜ ಸಂಬಂಧಕ್ಕೆ ಸಿದ್ಧ; ಆದರೆ…: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ಟೋಕಿಯೊ: ಭಾರತವು ಪಾಕಿಸ್ತಾನದೊಂದಿಗೆ ಸಹಜ ಹಾಗೂ ನೆರೆಹೊರೆಯ ಸಂಬಂಧ ಹೊಂದುವುದನ್ನು ಬಯಸುತ್ತದೆ. ಆದರೆ, ಇಸ್ಲಮಾಬಾದ್ ಸಕ್ರಿಯ ಉಗ್ರವಾದ ಮುಕ್ತ ವಾತಾವರಣ ನಿರ್ಮಿಸಬೇಕು ಹಾಗೂ ಅದರ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು Nikkei Asia ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ.
ಭಾರತವು ಪಾಕಿಸ್ತಾನದೊಂದಿಗೆ ಸಹಜ ದ್ವಿಪಕ್ಷೀಯ ಸಂಬಂಧವನ್ನು ಬಯಸುತ್ತಿದ್ದು, ಅದು ಸಕ್ರಿಯ ಉಗ್ರವಾದ ಹಾಗೂ ಒತ್ತೆಯಾಳು ಮುಕ್ತ ವಾತಾವರಣವನ್ನು ಅವಲಂಬಿಸಿದೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ ಪಾಕಿಸ್ತಾನದ ಮೇಲಿದೆ ಎಂದು ಅವರು ಹೇಳಿದ್ದಾರೆ.
ಗಡಿ ಭಾಗದ ಭಯೋತ್ಪಾದನೆಗೆ ಪಾಕಿಸ್ತಾನ ನೆರವು ನೀಡುತ್ತಿರುವ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿರುವ ಭಾರತವು, ಭಯೋತ್ಪಾದನೆ ಹಾಗೂ ಮಾತುಕತೆ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ.
ಇತ್ತೀಚೆಗೆ ಗೋವಾದಲ್ಲಿ ನಡೆದಿದ್ದ ಎಸ್‍ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್ ಭುಟ್ಟೊ ಭಾಗವಹಿಸಿದ್ದರಾದರೂ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ಅವರೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ನಡೆಸಿರುವ Nikkei Asia ಏಷ್ಯಾದ ಅತಿ ದೊಡ್ಡ ಸ್ವತಂತ್ರ ವ್ಯಾವಹಾರಿಕ ಮಾಧ್ಯಮ ಸಮೂಹವಾದ Nikkeiಯ ಅಂಗ ಸಂಸ್ಥೆಯಾಗಿದ್ದು, ಜಪಾನ್‍ನಲ್ಲಿ ನಡೆಯಲಿರುವ ಜಿ7 ಶೃಂಗ ಸಭೆಗೂ ಮುನ್ನ ಜಾಗತಿಕ ಸವಾಲುಗಳು ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಈ ಸಂದರ್ಶನವನ್ನು ನಡೆಸಿದೆ.