ಜನ ಕಲ್ಯಾಣ ಯೋಜನೆಗಳು ಯಾಕೆ ಅಪವ್ಯಾಖ್ಯಾನಕ್ಕೊಳಪಡುತ್ತವೆ?
ಓಲೈಕೆಯ ಭರವಸೆಗಳು ಎನ್ನುವುದನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಅದರ ಬೆಂಬಲಿತ ಮಾಧ್ಯಮಗಳು ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ನರೇಗಾ, ಆಹಾರ ಭದ್ರತೆ ಕಾಯ್ದೆಯಂತಹ ಜನಪರ ಕಲ್ಯಾಣ ಯೋಜನೆಗಳನ್ನು ಓಲೈಕೆ ಎಂದು ಟೀಕಿಸುತ್ತಿದೆ. ಆ ಮೂಲಕ ‘ಓಲೈಕೆ ಭರವಸೆಗಳು’ ಮತ್ತು ‘ಜನ ಕಲ್ಯಾಣ ಯೋಜನೆ’ಗಳ ನಡುವಿನ ಸ್ಪಷ್ಟವಾದ ಗೆರೆಯನ್ನು ಅಳಿಸಿ ಹಾಕುತ್ತಿದೆ. ಜನಪ್ರಿಯ ಎಂದು ಕರೆಯಲ್ಪಡುವ ಯೋಜನೆಗಳು ಅನೇಕ ಸಂದರ್ಭಗಳಲ್ಲಿ ಚುನಾವಣಾ ರಾಜಕೀಯದಿಂದ ಪ್ರೇರಿತವಾಗಿದ್ದರೂ ಅಂಚಿನಲ್ಲಿರುವ ಬಡಜನರನ್ನು ಮುಖ್ಯವಾಹಿನಿಗೆ ತರಲು ಅಗತ್ಯವಾದ ಆರಂಭದ ನಡೆ ಎನ್ನುವುದು ಸತ್ಯ. ಸಾಮಾಜಿಕ ಶ್ರೇಣೀಕರಣದ ಕಾರಣಕ್ಕೆ ಅಗಾಧವಾಗಿರುವ ಇಲ್ಲಿನ ಜಾತಿ, ವರ್ಗ ಅಸಮಾನತೆಗೆ ಈ ಜನಕಲ್ಯಾಣ ಯೋಜನೆಗಳು ಪರಿಹಾರವಲ್ಲ. ಆದರೆ ಸರಕಾರಗಳ ‘ಜವಾಬ್ದಾರಿಯುತ ಪ್ರತಿಕ್ರಿಯೆ’ಯಾಗಿದೆ. ಇದರ ಜಾರಿಯಲ್ಲಿ ನ್ಯೂನತೆಗಳಿವೆ, ಭ್ರಷ್ಟಾಚಾರವಿದೆ. ಅದರಾಚೆಗೂ ಬಡವರ ಬದುಕನ್ನು ಕನಿಷ್ಠ ಮಟ್ಟದಲ್ಲಾದರೂ ಸಹನೀಯಗೊಳಿಸುತ್ತವೆ ಎನ್ನುವುದು ಸಹ ಸತ್ಯ. ರೈತರಿಗೆ ಸಬ್ಸಿಡಿ ರೂಪದಲ್ಲಿ ಗೊಬ್ಬರ ಒದಗಿಸುವುದು, ಮಕ್ಕಳಿಗೆ ಉಚಿತ ಸಮವಸ್ತ್ರ ಕೊಡುವುದು, ಹೆಣ್ಣು ಮಕ್ಕಳಿಗೆ ಸೈಕಲ್ ಕೊಡುವುದನ್ನು ಓಲೈಕೆ ಭರವಸೆಗಳು ಎನ್ನಲು ಸಾಧ್ಯವಿಲ್ಲ. ಆದರೆ ರಾಜಕೀಯ ಪಕ್ಷಗಳು ಈ ರಿಯಾಯಿತಿಗಳನ್ನು ವೋಟ್ ಬ್ಯಾಂಕ್‌ಗಾಗಿ ರಾಜಕೀಕರಣಗೊಳಿಸುವುದರಿಂದ ಓಲೈಕೆ ಎಂದು ಆರೋಪಿಸಲಾಗುತ್ತದೆ. ಇಲ್ಲಿ ತಪ್ಪಿತಸ್ಥರು ಯಾರು?
1991ರ ನಂತರದ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಗಳು ಇಲ್ಲಿನ ಅಸಮಾನತೆಯನ್ನು ಶಾಶ್ವತಗೊಳಿಸಿದೆಯೇ ಹೊರತು ಕಡಿಮೆ ಮಾಡಿಲ್ಲ. ಇಂತಹ ದುಸ್ಥಿತಿಗೆ ಕಾರಣವಾಗಿರುವ ಪ್ರಭುತ್ವವು ಒಳಗೊಳ್ಳುವಿಕೆಯಿಂದ ವಂಚಿತರಾಗಿರುವ ತಳ ಸಮುದಾಯಗಳಿಗಾಗಿ ಯಾವುದೇ ಸಂದರ್ಭದಲ್ಲಿಯೂ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳ ನೀಲನಕ್ಷೆಯನ್ನು ರೂಪಿಸುವುದಿಲ್ಲ. ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಿಲ್ಲ. ಮುಖ್ಯವಾಗಿ ಈ ಕುರಿತು ಸರಕಾರಕ್ಕೆ ಯಾವುದೇ ಕ್ರಿಯಾಶೀಲ ದೃಷ್ಟಿಕೋನಗಳಿರುವುದಿಲ್ಲ. ಪರಿಕಲ್ಪನೆಗಳಿರುವುದಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿರುತ್ತದೆ. ನೆಹರೂವಿಯನ್ ಸಮಾಜವಾದದ ನಂತರ, ಇಂದಿರಾಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿಯ ನಂತರ ಕಳೆದ ನಲವತ್ತು ವರ್ಷಗಳಿಂದಲೂ ದೀರ್ಘಕಾಲೀನ ಯೋಜನೆಗಳು ಕ್ರಮೇಣ ಕುಂಠಿತಗೊಂಡಿರುವುದು ನಮ್ಮ ಕಣ್ಣ ಮುಂದಿದೆ. ಯೋಜನಾ ಆಯೋಗವು ಆಸ್ತಿತ್ವದಲ್ಲಿರುವವರೆಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ, ಪ್ರಕಟಣೆಗಳಾದರೂ ಜಾರಿಯಲ್ಲಿತ್ತು. ಆದರೆ ಅದನ್ನು ರದ್ದುಗೊಳಿಸಿದ ನಂತರ ಈಗ ದೀರ್ಘಕಾಲೀನ ಯೋಜನೆಗಳು ಎನ್ನುವುದು ಕೇವಲ ಹೆದ್ದಾರಿ ನಿರ್ಮಾಣಕ್ಕೆ ಮಾತ್ರ ಸೀಮಿತಗೊಂಡಿದೆ.
ಅದರಾಚೆಗೆ ಎಲ್ಲವೂ ಶೂನ್ಯ. ಸರಕಾರವು ‘ಒಳಗೊಳ್ಳುವಿಕೆಯ ಆರ್ಥಿಕ ನೀತಿ’ ರೂಪಿಸಲು ವಿಫಲವಾದ ಕಾರಣಕ್ಕೆ ಜಾತಿ, ಧರ್ಮ, ಲಿಂಗ, ವರ್ಗ ತಾರತಮ್ಯಕ್ಕೆ ಒಳಗಾದ ವಂಚಿತ ಸಮುದಾಯಗಳು ದೇಶದ ಆರ್ಥಿಕತೆಯ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ಜನಪರ ಕಲ್ಯಾಣ ಯೋಜನೆಗಳು ಬಡತನ ನಿರ್ಮೂಲನೆಯ ಆರಂಭದ ಮೆಟ್ಟಿಲುಗಳಾಗಿ ಒದಗಿಬರುತ್ತವೆ. ಇದನ್ನು ತಳಹದಿಯಾಗಿಸಿಕೊಂಡು ದೀರ್ಘಕಾಲೀನ, ಒಳಗೊಳ್ಳುವಿಕೆಯ ಅಭಿವೃದ್ಧಿ ಯೋಜನೆಯನ್ನು ಕಟ್ಟುವುದು ಪ್ರಭುತ್ವದ ಹೊಣೆಗಾರಿಯಾಗುತ್ತದೆ. ಆದರೆ ಈ ವಿಚಾರದಲ್ಲಿ ಎಲ್ಲಾ ಸರಕಾರಗಳು ವಿಫಲವಾಗುತ್ತಿವೆ.
ಸರಕಾರವು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕೋಸ್ಕರ ಮಧ್ಯಂತರ ಕಾರ್ಯಕ್ರಮವಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಇದು ನವ ಉದಾರೀಕರಣದಲ್ಲಿ ‘ಮುಕ್ತ ಮಾರುಕಟ್ಟೆಯ ವಿರೋಧಿ’ ಎನಿಸಿಕೊಳ್ಳುತ್ತದೆ. ಅಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಅಗತ್ಯವಾದ ‘ಪುನರ್ ಹಂಚಿಕೆ’ಯನ್ನು ಪೂರೈಸುವ ಈ ಜನ ಕಲ್ಯಾಣ ಯೋಜನೆಗಳಿಗಿಂತ ಭಿನ್ನವಾಗಿರುವ ಉಚಿತ ವಿದ್ಯುತ್, ಉಚಿತ ಪಾಸ್, ಸಾಲ ಮನ್ನಾ ಮುಂತಾದವುಗಳು ಜನಪ್ರಿಯ, ಫ್ರೀಬಿ ಎಂದು ಜೀವ ವಿರೋಧಿಗಳಿಂದ ಟೀಕೆಗೆ ಒಳಗಾಗುತ್ತದೆ. ಕ್ರಮೇಣ ಎರಡೂ ಸಾಮಾನ್ಯೀಕರಣಗೊಂಡು ಮಧ್ಯಮವರ್ಗ ಮತ್ತು ಮಾಧ್ಯಮಗಳಿಂದ ‘ಆರ್ಥಿಕ ಹೊರೆ’ ಎನ್ನುವ ಟೀಕೆಗೆ ಒಳಗಾಗುತ್ತವೆ.
ಇದಕ್ಕೂ ಮುನ್ನ ಬಹುಪಕ್ಷೀಯ ಪ್ರಜಾಪ್ರಭುತ್ವದ ಚುನಾವಣೆಯ ಸಂದರ್ಭದಲ್ಲಿ ‘ಪ್ರಣಾಳಿಕೆ’ ಬಿಡುಗಡೆ ಎನ್ನುವ ಪ್ರಹಸನ ಜರುಗುತ್ತದೆ. ಪಕ್ಷಗಳು ಅಧಿಕಾರಕ್ಕೆ ಬಂದರೆ ತಾವು ಜಾರಿಗೊಳಿಸಬಹುದಾದ ಕಾರ್ಯಕ್ರಮಗಳನ್ನು ತಿಳಿಸಲು ‘ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡುತ್ತವೆ. ಅಧಿಕಾರಕ್ಕೆ ಬಂದರೆ ಈ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾರ್ಯಕ್ರಮಗಳ ಆಶ್ವಾಸನೆ ಕೊಡುತ್ತಾರೆ. ಆದರೆ ಇಲ್ಲಿ ‘ಪ್ರಣಾಳಿಕೆ’ಗೂ ಜನ ಕಲ್ಯಾಣ ಯೋಜನೆಗಳಿಗಾಗಿ ಅಗತ್ಯವಾಗಿರುವ ನೀತಿ ನಿರೂಪಣೆ ರೂಪಿಸುವುದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಸ್ವತಃ ರಾಜಕೀಯ ಪಕ್ಷಗಳಿಗೆ ತಮ್ಮ ಪ್ರಣಾಳಿಕೆ ಕುರಿತು ಗಂಭೀರತೆ ಇರುವುದಿಲ್ಲ ಎನ್ನುವ ಕಾರಣದಿಂದ ಪ್ರತೀ ಚುನಾವಣೆಯ ಸಂದರ್ಭದಲ್ಲಿ ಇದು ಕೇವಲ ರದ್ದಿ ಉತ್ಪಾದನೆಯ ಹಂತಕ್ಕೆ ತಲುಪಿತ್ತು.
ಎಲ್ಲಿಯವರೆಗೆ ‘ಚುನಾವಣೆ’ಗಾಗಿ ಪ್ರಣಾಳಿಕೆ, ಅಧಿಕಾರ ದಕ್ಕಿದ ನಂತರ ಎಲ್ಲಾ ‘ಕಬಳಿಕೆ’ ಎನ್ನುವುದು ಪ್ರತೀ ರಾಜಕೀಯ ಪಕ್ಷಗಳ ಕಾರ್ಯಸೂಚಿಯಾಗಿರುತ್ತದೆಯೋ ಅಲ್ಲಿಯವರೆಗೆ ಓಲೈಕೆ ಭರವಸೆಗಳು ವೋಟು ಬ್ಯಾಂಕ್ ರಾಜಕಾರಣಕ್ಕೆ ಬಳಕೆಯಾಗುತ್ತವೆ. ಶಿಸ್ತುಬದ್ಧವಾಗಿ ಜಾರಿಗೊಳ್ಳಬೇಕಿರುವ ಜನಪರ ಕಲ್ಯಾಣ ಯೋಜನೆಗಳು ಅಪವ್ಯಾಖ್ಯಾನಕ್ಕೊಳಪಡುತ್ತವೆ. ಸ್ಥಗಿತಗೊಳ್ಳುತ್ತವೆ. ಟೀಕೆಗೊಳಗಾಗುತ್ತವೆ. ಕಡೆಗೆ ದೀರ್ಘಕಾಲೀನ ಯೋಜನೆಗಳೂ ಇಲ್ಲ, ಜನಪರ ಕಲ್ಯಾಣ ಯೋಜನೆಗಳೂ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.