ಮೇ 24ರಂದು ಭಟ್ಕಳದಲ್ಲಿ ಹಜ್ ಯಾತ್ರಿಕರಿಗೆ ತರಬೇತಿ ಮತ್ತು ಲಸಿಕಾ ಶಿಬಿರ
ಭಟ್ಕಳ: ಕರ್ನಾಟಕ ರಾಜ್ಯ ಹಜ್ ಕಮಿಟಿ ವತಿಯಿಂದ ಈ ವರ್ಷ ಉತ್ತರಕನ್ನಡ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವವರಿಗೆ ಮೇ 24 ರಂದು ಭಟ್ಕಳದ ತಂಝೀಮ್ ಸಂಸ್ಥೆಯ ಆಶ್ರಯದಲ್ಲಿ ಹಜ್ ತರಬೇತಿ ಮತ್ತು ಲಸಿಕಾ ಶಿಬಿರ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ನ ಸಹಕಾರದೊಂದಿಗೆ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವ 151 ಹಜ್ ಯಾತ್ರಿಕರಿಗೆ ಭಟ್ಕಳದ ತಂಝೀಮ್ ಸಭಾಂಗಣದಲ್ಲಿ ಬೆ.10 ಗಂಟೆಯಿಂದ ಸಂಜೆ 4.30ರ ವರೆಗೆ ತರಬೇತಿ ಹಾಗೂ ಲಸಿಕೆಯನ್ನು ನೀಡಲಾಗುವುದು. ಈ ಶಿಬಿರದಲ್ಲಿ ಪಾಲ್ಗೊಳ್ಳುವವರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಕೋವಿಡ್-19 ಎರಡು ಡೋಸ್ ಪಡೆದ ಪ್ರಮಾಣಪತ್ರವನ್ನು ತರುವುದು ಕಡ್ಡಾಯವಾಗಿರುತ್ತದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ‍್ರಹ್ಮಾನ್ ರುಕ್ನುದ್ದೀನ್ ನದ್ವಿ, ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳದಿಂದ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಹಜ್ ಯಾತ್ರಗೆ ತೆರಳುತ್ತಿದ್ದು ಈ ಬಾರಿ ಭಟ್ಕಳದಿಂದ 96 ಮಂದಿ ಹಜ್ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲಾ ಕೇಂದ್ರದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿತ್ತು. ಇದರಿಂದಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಭಟ್ಕಳದ ಯಾತ್ರಿಗಳಿಗೆ ತೊಂದರೆಯಾಗಿತ್ತು. ಇದನ್ನು ಮನಗೊಂಡು ಭಟ್ಕಳದಲ್ಲಿಯೆ ತರಬೇತಿ ಹಾಗೂ ಲಸಿಕೆ ನೀಡುವ ಶಿಬಿರವನ್ನು ಆಯೋಜಿಸಲು ಪ್ರಯತ್ನಿಸಲಾಗಿದೆ. ಶಿಬಿರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಹೊರಗಡೆಯ ಶಿಬಿರಾರ್ಥಿಗಳಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದ್ದು ಜಿಲ್ಲೆಯಿಂದ ಹಜ್ ಯತ್ರೆ ಕೈಗೊಳ್ಳುವವರು ಈ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.