ಮತ್ತೊಂದು ನೋಟ್‌ಬ್ಯಾನ್ ಪ್ರಹಸನ!
2014ರ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ ಪ್ರಧಾನಿ ಮೋದಿಯವರು 2019ರ ಚುನಾವಣೆಗೂ ಮುನ್ನ ಮತ್ತೆ ಜನರನ್ನು ಮೋಡಿ ಮಾಡಲು ಹೊರಟಿದ್ದರು. 2016 ನವೆಂಬರ್ 8ನೇ ತಾರೀಕಿನಂದು ಭಾರತದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ದಿಢೀರನೆ ರದ್ದು ಮಾಡಲಾಯಿತು. ಸಾವಿರಾರು ಜನ ಸಾಮಾನ್ಯರು, ಕಾರ್ಮಿಕರು, ರೈತರು, ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಸೋತು ಸುಣ್ಣವಾದರು. ಅಂತಹ ಸಂದರ್ಭದಲ್ಲೂ ಯಾವ ರಾಜಕೀಯ ನಾಯಕರು ಯಾರೂ ಬಂದು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತ ಇತಿಹಾಸವಿಲ್ಲ. ಹಾಗಾದರೆ ಇವರು ಯಾರೂ ಭಾರತೀಯ ರೂಪಾಯಿಯ ವ್ಯವಸ್ಥೆಯೊಳಗೆ ವ್ಯವಹಾರ ಮಾಡಿ ಬದುಕುತ್ತಿಲ್ಲವೇ ಅನ್ನುವ ಅನುಮಾನಗಳು ಸೃಷ್ಟಿಯಾದವು. ಇವರು ಸಂಗ್ರಹಿಸಿಟ್ಟ ಹಣವೆಲ್ಲಾ ಹೇಗೆ ಬದಲಾವಣೆಯಾಯಿತು? ಇದರಿಂದ ಎಷ್ಟು ಕಪ್ಪುಹಣ ಸಂಗ್ರಹವಾಯಿತು? ಇದು ಜನಸಾಮಾನ್ಯರಿಗೆ ಇಂದಿಗೂ ತಿಳಿಯದಾಗಿದೆ.
ಆದರೆ ಇವತ್ತಿಗೂ ನಮ್ಮನ್ನು ಕಾಡುತ್ತಿರುವ ಪ್ರಶ್ನೆ, ವಿಶ್ವಗುರುವೆಂದು ತಮ್ಮ ಹಿಂಬಾಲಕರಿಂದ ಕಿರೀಟ ತೊಡಿಸಿಕೊಂಡವರಿಗೆ 2,000 ರೂ. ಮುಖ ಬೆಲೆಯ ನೋಟಿನಿಂದ ಮುಂದೆ ನಷ್ಟ ಅನುಭವಿಸುತ್ತೇವೆ ಎನ್ನುವುದು ಗೊತ್ತಾಗದಾಯಿತೇ?. 2,000 ರೂ. ಮುಖಬೆಲೆಯ ನೋಟನ್ನು ನಿಷೇಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸುವ ಅನಿವಾರ್ಯತೆಯಾದರೂ ಏನಿತ್ತು? ಇದರ ಹಿಂದಿರುವ ಹುನ್ನಾರಗಳು ಏನೆಂದು ಜನಸಾಮಾನ್ಯರಿಗೆ ತಿಳಿಯಬೇಕಾಗಿದೆ.
2019ರ ಚುನಾವಣೆಗೂ ಮುನ್ನ ಅಂದಿನ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್‌ರವರು ಅಧಿಕಾರದಿಂದ ಕೆಳಗಿಳಿಯಲು ಮುಖ್ಯ ಕಾರಣ ಬಿಜೆಪಿ ಸರಕಾರ ಆರ್‌ಬಿಐ ಬೊಕ್ಕಸದಲ್ಲಿದ್ದ ಸಾವಿರಾರು ಕೋಟಿ ರೂ. ಎಮರ್ಜನ್ಸಿ ಫಂಡ್‌ನ್ನು ನಿಯಮಬಾಹಿರವಾಗಿ ಪಡೆದುಕೊಳ್ಳಲು ಮುಂದಾಯಿತು. ಇದನ್ನು ಒಪ್ಪದ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಆ ಜಾಗಕ್ಕೆ ಮತ್ತೊಬ್ಬ ಗುಜರಾತಿಯನ್ನೇ ನೇಮಕ ಮಾಡಿಕೊಳ್ಳಲಾಯಿತು. ಸಾಮಾನ್ಯ ಜನರ ಸಂಕಷ್ಟಕ್ಕಾಗಿ ಇರಿಸಿದ್ದ ಎಮರ್ಜೆನ್ಸಿ ಫಂಡನ್ನು ಖಾಲಿ ಮಾಡಲಾಯಿತು. ಯಾವುದಕ್ಕೆ ಆ ಹಣವನ್ನು ಬಳಸಲಾಗಿದೆಯೆಂದು ಇದುವರೆಗೂ ತಿಳಿಸಿಲ್ಲ.
2016ರ ಆದಿಯಲ್ಲೇ ಪ್ರಾರಂಭವಾದ 2,000 ರೂ. ಮುಖಬೆಲೆಯ ನಕಲಿ ನೋಟಿನ ಹಾವಳಿ 2020ರಷ್ಟರಲ್ಲಿ 2,44,834 ನೋಟುಗಳಿಗೆ ತಲುಪಿತು ಎನ್ನುವುದನ್ನು ಸರಕಾರದ ಅಧಿಕೃತ ಅಂಕಿಅಂಶಗಳೇ ತಿಳಿಸಿಕೊಟ್ಟಿವೆ.
ಹಾಗಾದರೆ ಆ ನೋಟಿಗೆ ಅಳವಡಿಸಿರುವ ತಂತ್ರಜ್ಞಾನದ ಸ್ಥಿತಿ ಏನಾಗಿದೆ? ನೋಟಿನ ಮೇಲೆ ಮೊಬೈಲ್ ಸ್ಕ್ಯಾನ್ ಮಾಡಿದಾಗ ಬರುವ ‘ವಿಶ್ವಗುರು’ವಿನ ಭಾಷಣ ಏನಾಯಿತು? ಅದರಲ್ಲಿರುವ ಸ್ಯಾಟಲೆಟ್ ಚಿಪ್ಪಿನ ಪರಿಸ್ಥಿತಿ ಎಲ್ಲಿಗೆ ಬಂದಿತು?. ‘‘ಭೂಮಿಯ ಆಳದಲ್ಲಿ ಅವಿತಿಟ್ಟರೂ ತನಿಖಾ ಸಂಸ್ಥೆಗಳು ಹುಡುಕಬಹುದು’’ ಎಂದಿದ್ದರು. ಹೀಗೆ ಏನೆಲ್ಲಾ ವಿಚಾರಗಳನ್ನು ನಮ್ಮ ಪುಂಗಿದಾಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿಬಿಟ್ಟಿದ್ದರು. ಹಾಗಾದರೆ ಆ ತನಿಖಾ ಸಂಸ್ಥೆಗಳು ಈಗ ಎಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಯಾಕೆ ಈ ರೀತಿಯಾಗಿ ಸಾಮಾನ್ಯ ಜನರನ್ನು ಯಾಮಾರಿಸಲಾಯಿತು. ಜನತೆ ಇನ್ನಾದರೂ ಯೋಚಿಸಬೇಕಿದೆ.
ಇನ್ನೊಂದು ವಿಚಾರ ಗೊತ್ತಿರಲಿ, 500, 1,000 ರೂ. ಮುಖಬೆಲೆಯ ನೋಟ್‌ಬ್ಯಾನ್ ಮಾಡಿದಾಗ ನಮ್ಮ ನಾಯಕರಿಗೆ ಇದ್ದ ಸ್ಫೂರ್ತಿ ಉತ್ಸಾಹದ ಮಾತುಗಳು ಮತ್ತು ಹುರುಪಿನ ಭಾಷಣ ಮಾಡುವ ಧೈರ್ಯ ಈಗ ಯಾಕೆ ಇಲ್ಲವಾಯಿತು? ಅಂದು ಇವರೇ ನೋಟ್‌ಬ್ಯಾನ್ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ 2,000 ರೂ. ಮುಖಬೆಲೆಯ ನೋಟ್‌ಬ್ಯಾನ್ ಮಾಡುವಾಗ ಆರ್‌ಬಿಐ ಯಾಕೆ ಮಾಧ್ಯಮಗಳ ಮುಂದೆ ಬರಬೇಕಾಗಿತ್ತು?
ಇದರಲ್ಲೇ ಅರ್ಥವಾಗುತ್ತಿದೆ, ಕಳೆದ 8-10 ವರ್ಷಗಳ ಕೇಂದ್ರ ಸರಕಾರದ ಆಡಳಿತ ಅವಧಿಯಲ್ಲಿ ಆರ್ಥಿಕ ತಜ್ಞರಿಲ್ಲದ ಆರ್ಥಿಕ ಅನೀತಿ ಜಾರಿಯಾಗಿದೆ. ಅದನ್ನು ಪರೋಕ್ಷವಾಗಿ ಸರಕಾರವೇ ಒಪ್ಪಿಕೊಂಡಂತಾಗಿದೆ. ಇದರಿಂದ ದೇಶದ ಜನರಿಗೆ ಮುಖ ತೋರಿಸುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ಆರ್‌ಬಿಐಯಿಂದ ಹೇಳಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಮುಂದೊಂದು ದಿನ 2,000 ರೂ. ನೋಟ್ ಬ್ಯಾನ್ ಮಾಡಬಾರದಿತ್ತು ಎಂದು ಅಭಿಪ್ರಾಯ ಜನರಿಂದ ಬಂದದ್ದೇ ಆದರೆ, ಅದು ಆರ್‌ಬಿಐ ನಿರ್ಧಾರ, ಸರಕಾರದ್ದಲ್ಲ ಎಂದು ಕಳಚಿಕೊಳ್ಳುವ ಹುನ್ನಾರ ಇದು.
2016ರಲ್ಲಿ ಬಿಡುಗಡೆಯಾದ 2,000 ರೂ. ಮುಖಬೆಲೆಯ ನೋಟ್ 2019ರವರೆಗೂ ಚಲಾವಣೆಯಾಯಿತು. ನಂತರ ಜನಸಾಮಾನ್ಯರ ಬಳಿ ವಹಿವಾಟಿಗೆ ಅಪರೂಪವಾಗಿತ್ತು. 2023 ಜನವರಿಯಿಂದ ಮತ್ತೆ ಬ್ಯಾಂಕ್‌ಗಳ ಮೂಲಕ ಜನಸಾಮಾನ್ಯರ ಕೈ ಸೇರಿತು. ಈಗ ದೇಶದ ಒಂದು ಬಜೆಟ್‌ಗೂ ಹೆಚ್ಚು ಹಣ ಜನಸಾಮಾನ್ಯರ ಕೈಯಲ್ಲಿದೆ. ಅದನ್ನು ವಸೂಲಿ ಮಾಡುವ ನೆಪವೊಡ್ಡಿ ಸಾಮಾನ್ಯ ಜನರ ಖಾತೆಯಲ್ಲಿ ವಹಿವಾಟು ಜರುಗಿಸುವುದು, ಕ್ಯಾಶ್ ಹ್ಯಾಂಡಲಿಂಗ್ ಚಾರ್ಜಸ್ ವಸೂಲಿ ಮಾಡುವುದು, ಅತೀ ಹೆಚ್ಚು ವಹಿವಾಟಿಗೆ ತೆರಿಗೆ ವಸೂಲಿ ಮಾಡಿ ಚುನಾವಣೆಯನ್ನು ಎದುರಿಸುವ ಮತ್ತೊಂದು ತಂತ್ರಗಾರಿಕೆಯಾಗಿಯಷ್ಟೇ ಈ 2,000 ರೂ. ಮುಖಬೆಲೆಯ ನೋಟ್‌ಬ್ಯಾನ್ ಪ್ರಕರಣ ಕಾಣುತ್ತಿದೆ.