varthabharthi


ಕ್ರೀಡೆ

ಐಪಿಎಲ್‌ ಎಲಿಮಿನೇಟರ್‌: ಲಕ್ನೋಗೆ 183 ರನ್ ಸವಾಲು ನೀಡಿದ ಮುಂಬೈ

ವಾರ್ತಾ ಭಾರತಿ : 24 May, 2023

Photo: Twitter/IPL

ಚೆನ್ನೈ, ಮೇ 24: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಎಲಿಮಿನೇಟರ್ ಪಂದ್ಯದಲ್ಲಿ ಬುಧವಾರ ಲಕ್ನೋ ಸೂಪರ್ ಜಯಂಟ್ಸ್ (LSG) ತಂಡದ ನವೀನುಲ್ ಹಕ್‍ರ ಆರಂಭಿಕ ಆಘಾತಕ್ಕೆ ನಲುಗಿದರೂ, ಇನಿಂಗ್ಸ್ ಕೊನೆಯಲ್ಲಿ ಚೇತರಿಸಿಕೊಂಡ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‍ ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಸ್ಪರ್ಧಾತ್ಮಕ 182 ರನ್‍ಗಳನ್ನು ಗಳಿಸಿದೆ.

ಇಲ್ಲಿನ ಎಮ್.ಎ. ಚಿದಂಬರಮ್ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿ ನವೀನುಲ್ ಹಕ್ ನಾಲ್ಕು ಓವರ್‍ ಗಳಲ್ಲಿ 38 ರನ್‍ಗಳನ್ನು ನೀಡಿ ನಾಲ್ಕು ವಿಕೆಟ್‍ಗಳನ್ನು ಉರುಳಿಸಿದರು.

ಕ್ಯಾಮರೂನ್ ಗ್ರೀನ್ 23 ಎಸೆತಗಳಲ್ಲಿ 41 ರನ್ ಗಳಿಸಿದರು ಮತ್ತು ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್‍ಗಳನ್ನು ನೀಡಿದರು. ಆದರೆ, ನವೀನುಲ್ ಉರುಳಿಸಿದ ಮಹತ್ವದ ವಿಕೆಟ್‍ಗಳು ಮುಂಬೈ ಇಂಡಿಯನ್ಸ್‍ನ ರನ್ ಗಳಿಕೆಗೆ ತಡೆ ಒಡ್ಡಿದವು.

ಆದರೆ, ಇನಿಂಗ್ಸ್ ಕೊನೆಯ ವೇಳೆಗೆ, ನೇಹಲ್ ವದೇರ ಬಿರುಸಿನ ಆಟವಾಡಿ ರೋಹಿತ್ ಶರ್ಮ ನೇತೃತ್ವದ ತಂಡದ ಇನಿಂಗ್ಸನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಏರಿಸಿದರು. ಅವರು 12 ಎಸೆತಗಳಲ್ಲಿ 23 ರನ್‍ಗಳನ್ನು ಸಿಡಿಸಿದರು.

ಲಕ್ನೋ ಸೂಪರ್ ಜಯಂಟ್ಸ್ ಪರವಾಗಿ, ನವೀನುಲ್ ಹಕ್ ಅಲ್ಲದೆ, ಯಶ್ ಠಾಕೂರ್ ಕೂಡ ಬೌಲಿಂಗ್‍ನಲ್ಲಿ ಮಿಂಚಿದರು. ಅವರು 4 ಓವರ್‍ ಗಳಲ್ಲಿ 34 ರನ್‍ಗಳನ್ನು ನೀಡಿ 3 ವಿಕೆಟ್‍ಗಳನ್ನು ಕಬಳಿಸಿದರು. ಉಳಿದಂತೆ ಮುಹ್ಸಿನ್ ಖಾನ್ ಒಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು.

ತಿಲಕ್ ವರ್ಮ 26 ರನ್‍ಗಳ ದೇಣಿಗೆ ನೀಡಿದರೆ, ಟಿಮ್ ಡೇವಿಡ್ 13 ರನ್ ಗಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)