ಹೊಸ ಸಂಸತ್ತು ಉದ್ಘಾಟನೆಗೆ ಪ್ರತಿಪಕ್ಷಗಳ ಬಹಿಷ್ಕಾರದ ಕರೆಯ ನಡುವೆ 2 ಪಕ್ಷಗಳಿಂದ ಆಹ್ವಾನ ಸ್ವೀಕಾರ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ತಿನ ಉದ್ಘಾಟನೆಗೆ ಸಂಬಂಧಿಸಿ ಹಲವು ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದು, ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಬಿಜು ಜನತಾ ದಳ ಹಾಗೂ ವೈಎಸ್ಆರ್ಸಿಪಿ ಬುಧವಾರ ಪ್ರಕಟಿಸಿವೆ.
ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಸಂಸದರು ಭಾಗವಹಿಸುವುದಾಗಿ ಘೋಷಿಸಿದ ಬಿಜೆಡಿ ವಕ್ತಾರ ಲೆನಿನ್ ಮೊಹಂತಿ ಪ್ರಜಾಪ್ರಭುತ್ವದ ಸಂಕೇತವಾದ ಸಂಸತ್ತು ರಾಜಕೀಯಕ್ಕಿಂತ ಮೇಲಿದ್ದು, ಅದರ ಅಧಿಕಾರ ಹಾಗೂ ಘನತೆಯನ್ನು ಯಾವಾಗಲೂ ಕಾಪಾಡಬೇಕು ಎಂದು ಪಕ್ಷವು ನಂಬುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪ್ರಸ್ತುತ,ಬಿಜೆಡಿ ಪಕ್ಷವು ಲೋಕಸಭೆಯಲ್ಲಿ 12 ಹಾಗೂ ರಾಜ್ಯಸಭೆಯಲ್ಲಿ ಎಂಟು ಸಂಸದರನ್ನು ಹೊಂದಿದೆ.
ಏತನ್ಮಧ್ಯೆ ವೈಎಸ್ಆರ್ಸಿಪಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದೆ. ಜೂನ್ 2014 ರಲ್ಲಿ ರಾಜ್ಯ ವಿಭಜನೆಯ ನಂತರ ಆಂಧ್ರಪ್ರದೇಶಕ್ಕೆ ಅತಿ ದೊಡ್ಡ ಪ್ರಮಾಣದ ನಿಧಿಯನ್ನು ಕೇಂದ್ರವು ಇತ್ತೀಚೆಗೆ ಅನುಮೋದಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕೇಂದ್ರದ ನೀತಿಗಳನ್ನು ಸೂಕ್ಷ್ಮವಾಗಿ ಬೆಂಬಲಿಸಿದ್ದಾರೆ, ಆಯ್ದ ಪ್ರಕರಣಗಳಲ್ಲಿ ಮಾತ್ರ ವಿರೋಧ ಪಕ್ಷವನ್ನು ಬೆಂಬಲಿಸಿದ್ದಾರೆ. .
ನೂತನ ಸಂಸತ್ತಿನ ಉದ್ಘಾಟನೆ ರವಿವಾರ ನಡೆಯಲಿದೆ. ಕಾಂಗ್ರೆಸ್ ಹಾಗೂ ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸೇರಿದಂತೆ ಹತ್ತೊಂಬತ್ತು ವಿರೋಧ ಪಕ್ಷಗಳು ಬುಧವಾರ ಜಂಟಿ ಹೇಳಿಕೆ ನೀಡಿ ಕಾರ್ಯಕ್ರಮಕ್ಕೆ ಬಹಿಷ್ಕಾರವನ್ನು ಘೋಷಿಸಿವೆ ಮತ್ತು ಸಂಸತ್ ಭವನವನ್ನು ರಾಷ್ಟ್ರಪತಿ ಬದಲಿಗೆ ಪ್ರಧಾನಿ ಉದ್ಘಾಟನೆ ಮಾಡುವುದು ಪ್ರಜಾಪ್ರಭುತ್ವದ ಮೇಲೆ "ಗಂಭೀರ ಅವಮಾನ" ಮತ್ತು "ನೇರ ಆಕ್ರಮಣ" ಎಂದು ಕರೆದಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತನ್ನು ಅನಾವರಣಗೊಳಿಸುತ್ತಿಲ್ಲ, ಇದು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.