ದಕ್ಷಿಣ ಕನ್ನಡ
ಮಂಗಳೂರು: ಜೆಸಿಬಿ ಸಹಿತ ಅಕ್ರಮ ಮರಳು ವಶ

ಸಾಂದರ್ಭಿಕ ಚಿತ್ರ
ಮಂಗಳೂರು, ಮೇ 25: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಫೈಸಲ್ ನಗರದ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಜೆಸಿಬಿ ಸಹಿತ ಮರಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ಮುಂಜಾವ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 10 ಲೋಡ್ ಮರಳು ಮತ್ತು ಒಂದು ಜೆಸಿಬಿಯನ್ನು ವಶಕ್ಕೆ ಪಡೆದಿಕೊಂಡಿದ್ದಾರೆ. ಈ ಸೊತ್ತುಗಳ ಮೌಲ್ಯ 3.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯ ಎಸ್ಸೈ ಜ್ಯೋತಿ ಎನ್.ಎ. ಅವರು ರಾತ್ರಿ ರೌಂಡ್ಸ್ನಲ್ಲಿದ್ದ ವೇಳೆ ಬಜಾಲ್ ಫೈಸಲ್ ನಗರದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದರಂತೆ 3.20ಕ್ಕೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಸ್ಥಳದಲ್ಲಿ 2 ಯುನಿಟ್ನ 5 ಲೋಡ್ ಮರಳು ದಾಸ್ತಾನು ಇರಿಸಿದ್ದು ಮತ್ತು ಜೆಸಿಬಿ ಕಂಡು ಬಂದಿದೆ. ಆರೋಪಿ ಚಾಲಕ ಜೆಸಿಬಿಯನ್ನು ಬಿಟ್ಟು ಪರಾರಿಯಾಗಿದ್ದು, ನದಿ ಕಿನಾರೆಯಿಂದ ಸುಮಾರು 500 ಮೀ. ದೂರದ ಖಾಲಿ ಜಾಗದಲ್ಲಿ ಮತ್ತೆ 5 ಲೋಡ್ ಮರಳು ದಾಸ್ತಾನು ಇರಿಸಿರುವುದು ಪತ್ತೆಯಾಗಿದೆ.
ನದಿಯಿಂದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಅಧಿಕೃತ ಪರವಾನಗಿ ಪಡೆಯದೆ ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮವಾಗಿ ಯಾವುದೋ ವಾಹನದಲ್ಲಿ ತುಂಬಿಸಿಕೊಂಡು ಹೋಗಲು ಯತ್ನಿಸಿರುವುದು ಕಂಡು ಬಂದಿದೆ ಎಂದು ಎಸ್ಸೈ ದೂರಿನಲ್ಲಿ ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ