ಆಲ್ವಾರ್ ಗುಂಪುಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಎಚ್‌ಪಿ ಮುಖಂಡ ಖುಲಾಸೆ: ನ್ಯಾಯ ಸಿಕ್ಕಿಲ್ಲ ಎಂದ ಕುಟುಂಬಸ್ಥರು
ಜೈಪುರ: 2018 ರಲ್ಲಿ ರಾಜಸ್ಥಾನದ ಆಲ್ವಾರ್ ಎಂಬಲ್ಲಿ ಗುಂಪೊಂದು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಇನ್ನೂ ನ್ಯಾಯ ದೊರೆತಿಲ್ಲ ಎಂದು ಸಂತ್ರಸ್ತ ವ್ಯಕ್ತಿಯ ಕುಟುಂಬ ಆರೋಪಿಸಿದೆ.
ಪ್ರಕರಣದಲ್ಲಿ ವಿಎಚ್‌ಪಿ ನಾಯಕ ಮುಖ್ಯ ಆರೋಪಿಯಾಗಿದ್ದರೂ, ಆತನನ್ನು ಖುಲಾಸೆಗೊಳಿಸಲಾಗಿದೆ. ಇತರೆ ನಾಲ್ವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ನೀಡಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತ ರಕ್ಬರ್ ಖಾನ್ ಪತ್ನಿ ಆಗ್ರಹಿಸಿದ್ದಾರೆ.
ಹಸು ಕಳ್ಳಸಾಗಣೆ ಆರೋಪದ ಮೇಲೆ ಖಾನ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಧರ್ಮೇಂದ್ರ ಯಾದವ್, ವಿಜಯ್ ಕುಮಾರ್, ಪರಮಜೀತ್ ಸಿಂಗ್ ಮತ್ತು ನರೇಶ್ ಕುಮಾರ್ ಎಂಬ ಆರೋಪಿಗಳಿಗೆ ಅಲ್ವಾರ್ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಎಚ್‌ಪಿ ನಾಯಕ ನವಲ್ ಕಿಶೋರ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ.
"ನಮಗೆ ನ್ಯಾಯ ಸಿಕ್ಕಿಲ್ಲ. ಅವರು ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ. ಮುಖ್ಯ ಆರೋಪಿಯನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ ಆದರೆ ಉಳಿದವರಿಗೆ ಶಿಕ್ಷೆ ಕಡಿಮೆಯಾಗಿದೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕಿತ್ತು" ಎಂದು ಖಾನ್ ಅವರ ಪತ್ನಿ ಅಸ್ಮಿನಾ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 304 (1) ಮತ್ತು 341 ಸಂಬಂಧಿಸಿದಂತೆ ನ್ಯಾಯಾಲಯವು ನಾಲ್ವರನ್ನು ಅಪರಾಧಿಗಳೆಂದು ಘೋಷಿಸಿದೆ, ಆದರೆ ಕೊಲೆ (302) ಮತ್ತು ಗಲಭೆ (147) ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶವನ್ನು ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ರಕ್ಬರ್ ಖಾನ್ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಹತ್ಯೆ ಪ್ರಕರಣದ ಎರಡು ವರ್ಷಗಳ ನಂತರ ರಕ್ಬರ್ ಖಾನ್ ತಂದೆ ಸುಲೇಮಾನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಕ್ಬರ್ ಖಾನ್ ಅವರ ಏಳು ಮಕ್ಕಳು ಈಗ ಅಕ್ಷರಶಃ ಅನಾಥರಾಗಿದ್ದಾರೆ.