ಉಕ್ರೇನ್ನ ವೈದ್ಯಕೀಯ ಕೇಂದ್ರಕ್ಕೆ ಅಪ್ಪಳಿಸಿದ ಕ್ಷಿಪಣಿ: ಇಬ್ಬರು ಮೃತ್ಯು
ಕೀವ್, ಮೇ 26: ಶುಕ್ರವಾರ ರಶ್ಯದ ಕ್ಷಿಪಣಿಯು ಮಧ್ಯ ಉಕ್ರೇನ್ ನಗರ ನಿಪ್ರೊದಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಅಪ್ಪಳಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು ಇತರ 23 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಕ್ಷಿಪಣಿ ದಾಳಿಯಿಂದ ವೈದ್ಯಕೀಯ ಕೇಂದ್ರದ ಛಾವಣಿ ಹಾರಿಹೋಗಿದ್ದು ಕಿಟಕಿಗಳಿಗೆ ಹಾನಿಯಾಗಿದೆ.
ಕಟ್ಟಡದ ಒಂದು ಭಾಗ ಕುಸಿದುಬಿದ್ದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕುಸಿದುಬಿದ್ದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಮತ್ತು ವೈದ್ಯಕೀಯ ಕೇಂದ್ರದಲ್ಲಿ ಸಿಕ್ಕಿಬಿದ್ದಿರುವ ಗಾಯಾಳುಗಳನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. `ವೈದ್ಯಕೀಯ ಕೇಂದ್ರದ ಮೇಲಿನ ದಾಳಿಯೊಂದಿಗೆ ಮಾನವೀಯತೆ ಹಾಗೂ ಪ್ರಾಮಾಣಿಕತೆಯನ್ನು ಗುರಿಯಾಗಿಸಿ ಆಕ್ರಮಣ ನಡೆಸುವ ರಶ್ಯ ಭಯೋತ್ಪಾದಕರ ಮನಸ್ಥಿತಿ ಮತ್ತೊಮ್ಮೆ ಜಾಹೀರಾಗಿದೆ' ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಟ್ವೀಟ್ ಮಾಡಿದೆ.
ನಿಪ್ರೊ ನಗರ ಸೇರಿದಂತೆ ಈ ಪ್ರದೇಶದ ಮೇಲೆ ಗುರುವಾರ ರಾತ್ರಿಯಿಡೀ ಭೀಕರ ರಾಕೆಟ್ ಮತ್ತು ಡ್ರೋನ್ ದಾಳಿ ನಡೆದಿದೆ. ಇದರಿಂದ 2 ಮನೆಗಳು ಬೆಂಕಿಗೆ ಆಹುತಿಯಾಗಿದ್ದರೆ ಇನ್ನೆರಡು ಮನೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಪ್ರಾದೇಶಿಕ ಮಿಲಿಟರಿ ವ್ಯವಸ್ಥಾಪಕ ಸೆರ್ಗಿಯ್ ಲಿಸಾಕ್ ಹೇಳಿದ್ದಾರೆ.