ಮಹಿಳಾ ಸುರಕ್ಷತೆ ಹೊಸ ಸರಕಾರದಿಂದ ಹಳೆಯವೇ ನಿರೀಕ್ಷೆಗಳು...!
ಇಂದು ಮಹಿಳೆಯರು, ಮಕ್ಕಳು ಹಿಂದೆಂದೂ ಎದುರಿಸದಿದ್ದ ಬಗೆಗಳಲ್ಲಿ ದೌರ್ಜನ್ಯ, ಅಸುರಕ್ಷತೆ, ಹಿಂಸೆಯನ್ನು ಎದುರಿಸುವ ಹಂತಕ್ಕೆ ಬಂದು ನಿಂತಿದ್ದಾರೆ. ಮುಕ್ತ ಮಾರುಕಟ್ಟೆ ನೀತಿಗಳು ಹೆಣ್ಣನ್ನೂ ಮಾರಾಟದ ಸರಕಾಗಿಸುತ್ತಿವೆ. ಮಕ್ಕಳು ಕೂಡ ನಿರ್ಲಕ್ಷಿತರಲ್ಲಿ ನಿರ್ಲಕ್ಷಿತರಾಗಿ, ಶೋಷಣೆಗೊಳಗಾಗುತ್ತಿದ್ದಾರೆ. ಹೆಣ್ಣನ್ನು ಗರ್ಭದಲ್ಲೇ ಕೊಲೆ ಮಾಡುವ ಪ್ರಮಾಣ ಸದ್ದಿಲ್ಲದೇ ಏರಿಕೆಯಾಗಿ, ಭೀತಿಗೊಳಿಸುವ ಪ್ರಮಾಣದಲ್ಲಿ ಹೆಣ್ಣು/ಗಂಡು ನಡುವೆ ಅಸಮತೋಲನ ಸೃಷ್ಟಿಯಾಗಿದೆ. ಅತ್ಯಾಚಾರದ ಪ್ರಮಾಣವಂತೂ ಪ್ರತೀ ಕ್ಷಣವೂ ಏರುತ್ತಿದೆ. ಇದರಲ್ಲಿ ವ್ಯಾಪಕವಾಗುತ್ತಿರುವ ಎಳೆಯ ಕಂದಮ್ಮಗಳ ಮೇಲಿನ ವಿಕೃತಿ, ಬಲಾತ್ಕಾರ, ಸಾಮೂಹಿಕ ಅತ್ಯಾಚಾರಗಳೂ ಸೇರಿಕೊಂಡಿವೆ. ಇಷ್ಟೇ ಅಲ್ಲ- ಎಗ್ಗಿಲ್ಲದೇ ನಡೆಯುತ್ತಿರುವ ಹೆಣ್ಣುಮಕ್ಕಳ ಕಣ್ಮರೆ, ಕಳ್ಳಸಾಗಣೆ, ಮಾರಾಟ, ಆ್ಯಸಿಡ್ ದಾಳಿ, ಮರ್ಯಾದಾ ಹೀನ ಹತ್ಯೆ, ಕಡಿವಾಣವಿಲ್ಲದ ಬಾಲ್ಯವಿವಾಹ, ಅನವಶ್ಯಕ ಗರ್ಭಕೋಶಗಳ ಹನನ, ಕೌಟುಂಬಿಕ ದೌರ್ಜನ್ಯ, ಕೊಲೆ, ಲೈಂಗಿಕ ಜೀತ, ಬಂಡವಾಳಶಾಹಿ ಕಪಿಮುಷ್ಠಿಗೆ ಸಿಕ್ಕ ವೇಶ್ಯಾವಾಟಿಕೆ ಮತ್ತು ಅದರ ಅಸಂಖ್ಯ ವಿಕೃತ ರೂಪಗಳು... ಒಂದೇ ಎರಡೇ? ಇವೆಲ್ಲವನ್ನೂ ಕಾಣುತ್ತಾ ಮನುಷ್ಯತ್ವದ ಮೇಲಿನ ನಂಬಿಕೆಯೇ ಕಳೆದು ಹೋಗಿ ದಿಗ್ಭ್ರಮೆ ಹುಟ್ಟಿಸುತ್ತಿವೆ.
ಆದರೆ ಇದಾವುದೂ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಶಾಹಿಗೆ ಗಮನಹರಿಸಬೇಕಾದ ವಿಷಯವೇ ಅಲ್ಲ! ಚುನಾವಣೆ ಸಮೀಪಿಸಿದಾಗ ಸಾಲು ಸಾಲು ಮಹಿಳಾ ಪರ ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳೂ ಈ ಕುರಿತು ಗಮನಹರಿಸುವುದು ಕಡಿಮೆಯೇ. ಮೊನ್ನೆಯಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಈ ಪ್ರಣಾಳಿಕೆಗಳಲ್ಲಿ ಎಲ್ಲ ಪಕ್ಷಗಳೂ ಮಹಿಳಾ ಸಬಲೀಕರಣಕ್ಕೆ, ಮಹಿಳೆಯರ ಏಳಿಗೆಗೆ ಅಂತಲೇ ಒಂದಷ್ಟು ಪ್ರತ್ಯೇಕ ಯೋಜನೆಗಳನ್ನು, ಉಚಿತ ಕೊಡುಗೆಗಳನ್ನೂ ಘೋಷಿಸಿವೆ. ಆದರೆ ಆ ಘೋಷಣೆಗಳಾವುವು ಮಹಿಳೆಯರ ಸಮಗ್ರ ರಕ್ಷಣೆ, ಅಭಿವೃದ್ಧಿ, ಸ್ವಾವಲಂಬನೆ, ಸ್ವಾಯತ್ತತೆಯ ಬದುಕಿನ ಭರವಸೆಯನ್ನು ನೀಡುತ್ತಿಲ್ಲ. ಹೆಣ್ಣುಮಕ್ಕಳ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನಾಗಲೀ, ಮಹಿಳಾ ದೌರ್ಜನ್ಯದ ವಿವಿಧ ಆಯಾಮಗಳನ್ನು ಮಟ್ಟ ಹಾಕುವ ಸಲುವಾಗಿ ಯಾವುದೇ ಸಶಕ್ತ ಯೋಜನೆಯನ್ನಾಗಲಿ ಘೋಷಿಸಿಲ್ಲ. ಬದಲಾಗಿ ಇವೆಲ್ಲವೂ ಮಹಿಳೆಯನ್ನು ಕೇವಲ ಫಲಾನುಭವಿಯಾಗಿಸಿ ಬಾಯಿಮುಚ್ಚಿಸುವ ಮತಬ್ಯಾಂಕ್ ಆಗಿಯಷ್ಟೇ ಪರಿಗಣಿಸಿರುವ ಚುನಾವಣಾ ತಂತ್ರವಾಗಿ ಗೋಚರಿಸುತ್ತಿದೆ.
ಸದ್ಯ ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಹಂತದಲ್ಲಾದರೂ ಹಿಂದೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರಕಾರವೇ ಇದ್ದಾಗ ಮುತುವರ್ಜಿಯಿಂದ ಘೋಷಿಸಿ ನಡೆಸಿದ್ದ ಮಹಿಳಾ ಪರವಾದ ಕೆಲವು ಅಧ್ಯಯನಗಳು, ಸಮಿತಿಗಳು ನೀಡಿದ ಶಿಫಾರಸುಗಳು, ನೀಡಿದ ಸರಕಾರಿ ಆದೇಶಗಳು ಅವರ ಕಾಲದಲ್ಲೇ ಅನುಷ್ಠಾನಗೊಳ್ಳದೇ ಶೈತ್ಯಾಗಾರವನ್ನು ತಲುಪಿರುವುದರ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ. ಅವನ್ನು ಈಗಲಾದರೂ ಶತಾಯಗತಾಯ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುವುದು ಅತ್ಯಂತ ಆದ್ಯತೆಯ ವಿಷಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ವಿ.ಎಸ್. ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ ತಡೆ ಅಧ್ಯಯನ ಸಮಿತಿ ನೀಡಿದ್ದ ೧೩೫ ಶಿಫಾರಸುಗಳು ಹಾಗೂ ಇನ್ನೋರ್ವ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ. ಜಯಮಾಲ ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿ ನೀಡಿದ್ದ ೬೦ಕ್ಕೂ ಹೆಚ್ಚು ಪ್ರಮುಖ ಶಿಫಾರಸುಗಳನ್ನು ಜಾರಿಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ. ಇದಲ್ಲದೆ ಅವರದೇ ಆಡಳಿತದ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗದವತಿಯಿಂದ ಜಾರಿಯಾದ- ಪ್ರತೀ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಸ್ಥಳೀಯ ಮಹಿಳಾ ಪರ ಹೋರಾಟಗಾರರನ್ನು ಒಳಗೊಂಡ ಮಹಿಳಾ ಜಾಗೃತ ದಳಗಳನ್ನು ಸಶಕ್ತವಾಗಿ ರೂಪುಗೊಳಿಸುವ ಕೆಲಸವೂ ತುರ್ತಾಗಿ ಆಗಬೇಕಿದೆ.
ಇವುಗಳ ಜೊತೆಗೆ ರಾಜ್ಯದ ಹೊಸ ಸರಕಾರ ಮಹಿಳಾ ಸುರಕ್ಷತೆ, ಸಬಲತೆ ಹಾಗೂ ಸ್ವಾಯತ್ತೆಗೆ ಪೂರಕವಾಗಿ ಕ್ರಮ ಕೈಗೊಳ್ಳಲು ಹಲವಾರು ನೀತಿ-ನಿರೂಪಣೆಗಳನ್ನು ತುರ್ತಾಗಿ ರೂಪಿಸಲೇಬೇಕಿದೆ. ಅವುಗಳಲ್ಲಿ ಮುಖ್ಯವಾದ ಕೆಲ ಅಂಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.
ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯು ೨೦೧೭ರಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಬಡತನ, ಕಳ್ಳಸಾಗಣೆ, ಮಾರಾಟ... ಇಂತಹ ವಿಷಮ ಪರಿಸ್ಥಿತಿಯ ಕಾರಣದಿಂದ ಕೆಳಹಂತದ ವೇಶ್ಯಾವಾಟಿಕೆಯಲ್ಲಿ ದೂಡಲ್ಪಟ್ಟ ಲಕ್ಷದಷ್ಟು ಲೈಂಗಿಕ ದಮನಿತರಲ್ಲಿ ಶೇ.೭೨ರಷ್ಟು ಮಹಿಳೆಯರು, ವೇಶ್ಯಾವಾಟಿಕೆ ಬಿಟ್ಟು ಹೊರಬರಲು ಪರ್ಯಾಯ ಆರ್ಥಿಕ ಸ್ವಾವಲಂಬನೆಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮೊದಲಿಗೆ ಇವರ ಸಮಗ್ರ ಸಮೀಕ್ಷೆ ನಡೆಸಬೇಕು. ಇದರಲ್ಲಿ ಪ್ರಥಮ ಆದ್ಯತೆಯಾಗಿ ಈ ವೇಶ್ಯಾವಾಟಿಕೆ ಜಾಲದಲ್ಲಿ ಬಿದ್ದಿರುವ ಸಾವಿರಾರು ಅಪ್ರಾಪ್ತರು, ಅಂಗವಿಕಲರು, ಎಚ್ಐವಿ ಸೋಂಕಿತರನ್ನು ತಕ್ಷಣವೇ ಸರಕಾರ ಹೊರತೆಗೆಯಬೇಕು. ಇದಕ್ಕಾಗಿ ಪ್ರಬಲ ಕೋಶವೊಂದನ್ನು ರೂಪಿಸಬೇಕು. ಪ್ರತೀ ಜಿಲ್ಲೆಯಲ್ಲಿ ವಿಕೇಂದ್ರಿತವಾಗಿ ಇವರ ಪುನರ್ವಸತಿ, ರಕ್ಷಣೆ, ಸ್ವಾವಲಂಬನೆಯ ಯೋಜನೆಗಳನ್ನು ರೂಪಿಸಬೇಕು.
ಪ್ರತಿಯೊಂದು ಸರಕಾರಿ ಕೆಲಸದ ನೇಮಕದಲ್ಲೂ ಶೇ. ೫೦ರಷ್ಟನ್ನು ಕಡ್ಡಾಯವಾಗಿ ಮಹಿಳೆಯರಿಗೆ ಮೀಸಲಿಡುವ ಕಾನೂನು ರೂಪಿಸಬೇಕು. ಗ್ರಾಮೀಣ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನೆಗಾಗಿ ವೃತ್ತಿ ಕೌಶಲ್ಯ ತರಬೇತಿ ಮತ್ತು ಅರ್ಧದಷ್ಟಾದರೂ ಸಹಾಯಧನವನ್ನೊಳಗೊಂಡ ವಿಶೇಷ ಸಾಲ ಯೋಜನೆಯನ್ನು ಜಾರಿಗೊಳಿಸಬೇಕು. ಜೊತೆಗೆ ಪ್ರತೀ ಗ್ರಾಮಪಂಚಾಯತ್ಗೆ ಒಂದರಂತಾದರೂ ಸ್ಥಳೀಯ ಕೃಷಿ ಉತ್ಪಾದನೆಯಾಧಾರಿತ ಗೃಹಕೈಗಾರಿಕೆ ಅಥವಾ ಗುಡಿಕೈಗಾರಿಕೆಯ ಕಿರು ಉತ್ಪನ್ನಗಳ ಘಟಕವನ್ನು ಸರಕಾರವೇ ಸ್ಥಾಪಿಸಿ, ಸಹಕಾರಿ ತತ್ವದ ಆಧಾರದಲ್ಲಿ ಅದನ್ನು ರೂಪಿಸಿ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಬೇಕು. ಮಾರುಕಟ್ಟೆ ವ್ಯವಸ್ಥೆಯನ್ನೂ ರೂಪಿಸಬೇಕು. ತನ್ಮೂಲಕ ಹೆಣ್ಣುಮಕ್ಕಳು ಹೊಟ್ಟೆ ಹೊರೆಯಲೆಂದು ಮೈ ಮಾರಿಕೊಳ್ಳುವ ದಂಧೆಗೆ, ಹೀನಾಯ ಕೆಲಸಕ್ಕೆ ಬೀಳುವುದನ್ನು ತಪ್ಪಿಸಬೇಕು.
ಹೆಣ್ಣು ಭ್ರೂಣಹತ್ಯೆ ತಡೆಗಾಗಿ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಲೋಕಾಯುಕ್ತ ಮಾದರಿಯ ಒಂದು ಪ್ರತ್ಯೇಕ, ವಿಕೇಂದ್ರೀಕೃತ ಆಯೋಗ ತುರ್ತಾಗಿ ರಚನೆಯಾಗಬೇಕು. ಅವಶ್ಯಕತೆಯಿರುವಷ್ಟು ಪೂರ್ಣಪ್ರಮಾಣದ ಪ್ರಬಲ ತಂಡವನ್ನು, ಸಿಬ್ಬಂದಿಯನ್ನು ಇದು ಹೊಂದಿರಬೇಕು. ಭ್ರೂಣ ಪತ್ತೆ ಮಾಡುತ್ತಿರುವ ಪ್ರತೀ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಕಡ್ಡಾಯ ಸಿಸಿ ಟಿವಿ ಅಳವಡಿಸಬೇಕು. ಜಿಲ್ಲಾ ಸಮಿತಿಯಿಂದ ಸ್ಕ್ಯಾನಿಂಗ್ ಸೆಂಟರ್ಗಳ ನಿಯಮಿತ ತಪಾಸಣೆ ಆಗಬೇಕು. ಅಪರಾಧ ಎಸಗುತ್ತಿರುವ ಕೇಂದ್ರಗಳನ್ನು ಮುಟ್ಟುಗೋಲು ಹಾಕಬೇಕು.
ಅಪ್ರಾಪ್ತ ವಯಸ್ಸಿನಲ್ಲಿಯೇ ತಾಯಂದಿರಾಗುವ ಹೆಣ್ಣುಮಕ್ಕಳ ಸಂಖ್ಯೆ ಪ್ರತೀ ವರ್ಷವೂ ಏರಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ- ಅನಿಯಂತ್ರಿತ ಬಾಲ್ಯವಿವಾಹ. ಅದರ ವಿರುದ್ಧ ಜಾಗೃತಿ ಮೂಡಿಸಲು ಹಿಂದೆ ನಡೆದ ಸಾಕ್ಷರತಾ ಆಂದೋಲನದ ಮಾದರಿಯಲ್ಲೇ ಅರಿವಿನ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ರೂಪಿಸಬೇಕು. ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನೂ ಒಳಗೊಂಡು ಜಿಲ್ಲಾಪಂಚಾಯತ್ನ ನೇತೃತ್ವದಲ್ಲಿ ಇವನ್ನು ನಿರಂತರವಾಗಿ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ಕೋಶವನ್ನೂ ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಹಾಗೂ ಬಾಲ್ಯವಿವಾಹಕ್ಕೆ ಕಡಿವಾಣ ಹಾಕುವ ಕ್ರಮವಾಗಿ ವಿವಾಹ ನೋಂದಣಿ ಕಡ್ಡಾಯಗೊಳಿಸಿ, ಸಾಮೂಹಿಕ ವಿವಾಹಗಳಲ್ಲಿ ಜನ್ಮ ದಿನಾಂಕ ದೃಢೀಕರಣ ಪತ್ರದ ಪರಿಶೀಲನೆಗೆ ಮೊದಲ ಆದ್ಯತೆ ನೀಡಬೇಕು. ಬಾಲಕಾರ್ಮಿಕ ಪದ್ಧತಿಗೆ ಮಕ್ಕಳನ್ನು ಒಳಪಡಿಸುತ್ತಿರುವವರಿಗೆ ಜಾಮೀನುರಹಿತ ಕಡ್ಡಾಯ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು.
ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಹೆಚ್ಚಿರುವ ಗುಜ್ಜರ್ ಮದುವೆ ಹೆಸರಿನ ವಧು ರಫ್ತು ಉದ್ಯಮವನ್ನು ನಿರ್ಬಂಧಿಸಲು ಮತ್ತು ನಾಡಿನಾದ್ಯಂತದ ಹೆಣ್ಣುಮಕ್ಕಳ ನಾಪತ್ತೆ, ಕಳ್ಳಸಾಗಣೆ ಹಾಗೂ ಮಾರಾಟ ಜಾಲಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಲ್ಲಿರುವ 'ಮಾನವ ಸಾಗಣೆ ನಿರ್ಬಂಧ ಕೋಶ'ಗಳನ್ನು ಅವಶ್ಯಕ ಸಿಬ್ಬಂದಿಯ ನೇಮಕದೊಂದಿಗೆ ಸಶಕ್ತಗೊಳಿಸಬೇಕು. ಹೆಣ್ಣುಮಕ್ಕಳ ಕಣ್ಮರೆಯ ಪ್ರಕರಣ ದಾಖಲಾದೊಡನೆಯೇ ಅವರನ್ನು ಹುಡುಕಿ ಸಂರಕ್ಷಿಸುವ, ಅಪರಾಧಿಗಳ ವಿರುದ್ಧ ಕಠಿಣ ಸೆಕ್ಷನ್ಗಳಡಿ ಪ್ರಕರಣ ದಾಖಲಿಸುವ ಕೆಲಸವಾಗಬೇಕು.
ಮಹಿಳಾ ಪರವಾದ ಯಾವ ಸರಕಾರಿ ಆದೇಶಗಳು ವಿಕೇಂದ್ರಿತವಾಗಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇವು ಕಡ್ಡಾಯವಾಗಿ ಕಾರ್ಯಗತಗೊಳ್ಳಲು ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಬೇಕು. ಪ್ರತೀ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಯ ಮುಖ್ಯಸ್ಥರು ಹಾಗೂ ಮಹಿಳಾ ಪರ ಹೋರಾಟಗಾರರನ್ನು ಒಳಗೊಂಡು ಜಿಲ್ಲಾ ಮಟ್ಟದ ಸಮಿತಿ, ಇದೇ ಮಾದರಿಯಲ್ಲಿ ತಾಲೂಕು ಮಟ್ಟದ ಸಮಿತಿ ರೂಪಿಸಿ, ಪ್ರತೀ ತಿಂಗಳೂ ಹೆಣ್ಣುಮಕ್ಕಳ ಸಂಬಂಧಿತ ಸಮಸ್ಯೆಗಳ ನಿಯಂತ್ರಣಕ್ಕೆ ಕಾರ್ಯತತ್ಪರವಾಗಲು ಸಭೆ ನಡೆಸಬೇಕೆಂಬ ಸರಕಾರಿ ಆದೇಶವಿದ್ದು ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಹಾಗೆಯೇ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ 'ಮಹಿಳಾ ಮತ್ತು ಮಕ್ಕಳ ಕಾವಲು ಪಡೆಗಳು' ರೂಪಿತಗೊಂಡು ಅವರ ಸುರಕ್ಷತೆಗಾಗಿ ವಿಕೇಂದ್ರಿತ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಇದೂ ಸದ್ಯ ಅನುಷ್ಠಾನವಾಗುತ್ತಿಲ್ಲ. ಹಾಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹಿಳಾ ಹೋರಾಟಗಾರರನ್ನು, ಅಧಿಕಾರಿಗಳನ್ನು ಒಳಗೊಂಡು ಪ್ರತೀ ತಿಂಗಳೂ ಮಹಿಳಾ ಸುರಕ್ಷತೆಯನ್ನು ಆದ್ಯತೆಯಾಗುಳ್ಳ 'ಮಹಿಳಾ ಜಾಗೃತ ದಳ'ವನ್ನು ಜಿಲ್ಲಾ ಮಟ್ಟದಲ್ಲಿ ರೂಪಿಸಬೇಕು. ಇದೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳೆಲ್ಲವೂ ಕಡ್ಡಾಯವಾಗಿ ಮರು ಚಾಲನೆಗೊಂಡು ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕಿದೆ.
ಎಲ್ಲಾ ಶಾಲಾ, ಕಾಲೇಜು, ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ 'ಪಾಷ್' (ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ) ಸಮಿತಿಗಳು ಕಡ್ಡಾಯವಾಗಿ ರೂಪಿಸಬೇಕು. ಅವುಗಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಬಲಗೊಳಿಸಬೇಕು. ಇವು ಸದ್ಯ ಎಲ್ಲಿಯೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಾರಾಟ ಜಾಲಕ್ಕೆ ಸಿಕ್ಕಿ ವಾಪಸಾದ ಹೆಣ್ಣುಮಕ್ಕಳು, ಅತ್ಯಾಚಾರಕ್ಕೊಳಗಾಗಿ ಪ್ರಕರಣ ದಾಖಲಾದ ಸಂತ್ರಸ್ತ ಹೆಣ್ಣುಮಕ್ಕಳು ಹಾಗೂ ನಿರ್ಗತಿಕ, ಪರಿತ್ಯಕ್ತ ಮಹಿಳೆಯರು... ಪುನರ್ಜೀವನ ರೂಪಿಸಿಕೊಳ್ಳಲು ತುರ್ತು ಪರಿಹಾರ ನಿಧಿಯನ್ನು ಸ್ಥಾಪಿಸಬೇಕು. ರಾಜ್ಯಾದ್ಯಂತ ಈ ವಿಷಯದಲ್ಲಿ ಗುರುತರ ಲೋಪಗಳಾಗುತ್ತಿದ್ದು ಸಂತ್ರಸ್ತೆಯರಿಗೆ ಪುನರ್ವಸತಿ ಕೇಂದ್ರ- ಅಲ್ಲಿ ವಿದ್ಯಾಭ್ಯಾಸ, ವೃತ್ತಿ ತರಬೇತಿ, ಉದ್ಯೋಗದ ಸುಸಜ್ಜಿತ ವ್ಯವಸ್ಥೆ ರೂಪುಗೊಳ್ಳಬೇಕು. ಇದಕ್ಕಾಗಿ ಸಶಕ್ತ ಯೋಜನೆಗಳನ್ನು ರೂಪಿಸಬೇಕು. ದಶಕದಿಂದ, ರಾಜ್ಯದ ವಿವಿಧ ಗೊಲ್ಲರಹಟ್ಟಿ, ಲಂಬಾಣಿ ತಾಂಡಾ, ಆದಿವಾಸಿ, ಗಿರಿಜನರ ತಾಂಡಾಗಳ ಸಾವಿರಾರು ಹೆಣ್ಣುಮಕ್ಕಳ ಗರ್ಭಕೋಶವನ್ನು ವೈದ್ಯರು ಧನದಾಹದಿಂದಾಗಿ, ಶಸ್ತ್ರಚಿಕಿತ್ಸೆಯ ಮೂಲಕ ಅನವಶ್ಯಕವಾಗಿ ಕತ್ತರಿಸಿ ತೆಗೆದಿದ್ದಾರೆ. ಹೀಗಾಗಿ ಅವರೀಗ ಅನೇಕ ಬಗೆಯ ಶಾಶ್ವತ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಕುರಿತು ಸರಕಾರಕ್ಕೆ ಸಲ್ಲಿಕೆಯಾಗಿರುವ ಅಧ್ಯಯನ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣದಲ್ಲಿ ಕಾನೂನಾತ್ಮಕ ತನಿಖೆಗೆ ಆದೇಶಿಸಬೇಕು. ಈ ದುಷ್ಟತೆಯ ನಿರ್ಬಂಧಕ್ಕೆ ಕಠಿಣ ಕ್ರಮ ವಹಿಸಬೇಕು. ಇಂತಹ ಸಂತ್ರಸ್ತ ಹೆಣ್ಣುಮಕ್ಕಳಿಗೆ ಪರಿಹಾರ ಧನ ಮತ್ತು ಮಾಸಿಕ ನಿಗದಿತ ಪಿಂಚಣಿಯನ್ನು ನೀಡಬೇಕು.
ಅಸಹಾಯಕ ಶೋಷಿತ ಸಂತ್ರಸ್ತ ಹೆಣ್ಣುಮಕ್ಕಳ ರಕ್ಷಣೆ, ಪೋಷಣೆ, ಪುನರುಜ್ಜೀವನಕ್ಕಾಗಿ ಗಂಡು/ಹೆಣ್ಣುಮಕ್ಕಳಿಗೆ ಪ್ರತ್ಯೇಕ ಬಾಲಮಂದಿರಗಳು, ವೀಕ್ಷಣಾ ಮಂದಿರಗಳು, ಮಹಿಳಾ ವಸತಿ ನಿಲಯಗಳು, ಸ್ವೀಕಾರ ಕೇಂದ್ರ, ಉಜ್ವಲಾ ಕೇಂದ್ರ ಸ್ವಾಧಾರ ಕೇಂದ್ರಗಳು ಮತ್ತು ನಿರ್ಗತಿಕರ ರಕ್ಷಣಾ ಗೃಹಗಳು ಪ್ರತೀ ಜಿಲ್ಲೆಯಲ್ಲೂ ಕಡ್ಡಾಯವಾಗಿ ಪ್ರಾರಂಭವಾಗಬೇಕು. ಈಗ ಅವು ಎಲ್ಲಾ ಜಿಲ್ಲೆಗಳಲ್ಲೂ ಇಲ್ಲ ಮತ್ತು ಇರುವವೂ ಕೂಡ ಸಮರ್ಪಕ ವ್ಯವಸ್ಥೆಗಳಿಲ್ಲದೆ ಹೀನಾಯ ಸ್ಥಿತಿಯಲ್ಲಿವೆ.
ಕಾನೂನನ್ನು ಸಮರ್ಪಕವಾಗಿ ಮತ್ತು ತುರ್ತಾಗಿ ಅನುಷ್ಠಾನಗೊಳಿಸಲು ಪ್ರತೀ ಜಿಲ್ಲೆ-ತಾಲೂಕುಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ಒಳಗೊಂಡ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳು, ಅಗತ್ಯ ಸೌಕರ್ಯ ಮತ್ತು ಸಿಬ್ಬಂದಿಯೊಂದಿಗೆ ರೂಪುಗೊಳ್ಳಬೇಕು. ತ್ವರಿತಗತಿಯ ನ್ಯಾಯಾಲಯಗಳು ಅವಶ್ಯಕತೆಗನುಗುಣವಾಗಿ ಜಿಲ್ಲಾ ಮಟ್ಟದಲ್ಲಾದರೂ ತಕ್ಷಣವೇ ಸ್ಥಾಪನೆಯಾಗಬೇಕು.
ಪ್ರತೀ ತಾಲೂಕು/ಗ್ರಾಮ ಮಟ್ಟಕ್ಕೂ ತಲುಪುವಂತೆ ವಿಕೇಂದ್ರಿಕೃತ ಮಹಿಳಾ ಸಹಾಯವಾಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ 'ಸ್ಪಂದನಾ' ಘಟಕ ಕಡ್ಡಾಯವಾಗಿ ರೂಪುಗೊಳ್ಳಬೇಕು. ಇವುಗಳ ವ್ಯಾಪಕ ಪ್ರಚಾರ ಹಳ್ಳಿಗಳಲ್ಲಿ ನಡೆಯಬೇಕು.
ಇಂದಿಗೂ ರಾಜ್ಯದಲ್ಲಿ ಸಾವಿರಾರು ಹೆಣ್ಣುಮಕ್ಕಳು ಶಾಲೆಯಿಂದ ಹೊರಗಿದ್ದು ಇವರನ್ನು ತಕ್ಷಣವೇ ಶಾಲೆಯೊಳಗೆ ತರುವ ನಿಟ್ಟಿನಲ್ಲಿ ಸಶಕ್ತ ಯೋಜನೆಯನ್ನು ರೂಪಿಸಬೇಕು. 8-14 ವರ್ಷದವರೆಗಿನ ಮೂಲಭೂತ ಶಿಕ್ಷಣವನ್ನೂ ಮತ್ತು 15-18ರವರೆಗೆ ಅವರಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಪ್ರತ್ಯೇಕ ವೃತ್ತಿಶಿಕ್ಷಣವನ್ನು ಕಡ್ಡಾಯವಾಗಿ ನೀಡಲು ವಿಕೇಂದ್ರೀಕೃತ ಯೋಜನೆ ರೂಪಿಸಬೇಕು. ಪ್ರತಿಯೊಬ್ಬ ಬಾಲಕಿಯೂ ಕನಿಷ್ಠ ಪದವಿ ಹಂತದವರೆಗೆ ಶಿಕ್ಷಣ ವ್ಯವಸ್ಥೆಯೊಳಗೆ ಇರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರಿಂದ ಬಾಲ್ಯ ವಿವಾಹ ಮತ್ತು ಅವಧಿಪೂರ್ವ ಪ್ರಸವವನ್ನು ತಡೆಗಟ್ಟಬಹುದು.
ವಿಧವಾ ವೇತನ ನೀಡಲು ಈಗ ಇರುವ ವಯೋಮಿತಿಯನ್ನು ಸಡಿಲಿಸಿ 18 ವರ್ಷಕ್ಕೆ ನಿಗದಿಪಡಿಸಬೇಕು. ವಿಧವೆ, ಅವಿವಾಹಿತ, ಪರಿತ್ಯಕ್ತ ಒಂಟಿ ಮಹಿಳೆಯರಿಗೆ ಉದ್ಯೋಗದಲ್ಲಿ ಆದ್ಯತೆ ಮತ್ತು ಸಾಲ ಸೌಲಭ್ಯ ನೀಡಬೇಕು. ತನ್ಮೂಲಕ ಈ ಹೆಣ್ಣುಮಕ್ಕಳು ದೌರ್ಜನ್ಯಕ್ಕೆ ಒಳಗಾಗುವುದನ್ನು, ಬೀದಿಗೆ ಬೀಳುವುದನ್ನು ತಪ್ಪಿಸಬೇಕು.
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಾಶ್ವತ ತಡೆ ಹಾಕುವ ಪ್ರಯತ್ನದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು ಹಂತಹಂತವಾಗಿ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಇದಕ್ಕಾಗಿ ಮಕ್ಕಳ ತಜ್ಞರು, ಮನೋವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಲೈಂಗಿಕ ತಜ್ಞರು, ಶಿಕ್ಷಣ ತಜ್ಞರು, ಮಕ್ಕಳೊಂದಿಗೆ ತಳಹಂತದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹಕ್ಕುಗಳ ಕಾರ್ಯಕರ್ತರು... ಹೀಗೆ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಅವರ ಸಲಹೆಯಾಧಾರಿತ ಪಠ್ಯ ರೂಪುಗೊಳ್ಳಬೇಕು. ಇದನ್ನು ಕಲಿಸಲು ಶಿಕ್ಷಕರಿಗೆ ಪ್ರತ್ಯೇಕ ತರಬೇತಿಯ ಅವಶ್ಯಕತೆಯಿದ್ದು ಇದನ್ನೂ ತಜ್ಞ ಸಮಿತಿಯೇ ರೂಪಿಸಬೇಕು.
ಮಹಿಳಾ ಮತ್ತು ಮಕ್ಕಳ ಸಂಬಂಧಿತ ಕಾರ್ಯ ನಿರ್ವಹಿಸುವ ಪ್ರತಿಯೊಂದು ಇಲಾಖೆಯಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಡಕಾಗದಂತೆ ಅವಶ್ಯಕ, ತಜ್ಞ ಹಾಗೂ ಪರಿಣಿತ ಸಿಬ್ಬಂದಿ ಕಡ್ಡಾಯವಾಗಿ ನೇಮಕವಾಗಬೇಕು. ಇದರ ಗುರುತರ ಲೋಪ ಈಗ ಎಲ್ಲ ಇಲಾಖೆಗಳಲ್ಲಿ ಎದ್ದು ತೋರುತ್ತಿದೆ. ಗ್ರಾಮೀಣ ಭಾಗದಲ್ಲಿ ಪ್ರತೀ ಮನೆಯಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುಚ್ಛಕ್ತಿ ಸರಬರಾಜನ್ನು ಖಾತ್ರಿ ಪಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಇವುಗಳಿಲ್ಲದೆ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಹಲವು ವಿಧದ ಅಪರಿಮಿತ ತೊಂದರೆಗೆ ಪ್ರತೀ ದಿನವೂ ಈಡಾಗುತ್ತಿದ್ದಾರೆ.