ಭಾರತ ಸೇವಾದಳದಿಂದ ಯು.ಆರ್.ಸಭಾಪತಿಗೆ ಶ್ರದ್ಧಾಂಜಲಿ
ಉಡುಪಿ, ಮೇ 27: ವಿದ್ಯಾರ್ಥಿತನದಿಂದಲೇ ನಾಯಕತ್ವವನ್ನು ರೂಢಿಸಿ ಕೊಂಡು ಕ್ರಾಂತಿರಂಗದ ಮೂಲಕ ಉಡುಪಿ ಶಾಸಕರಾಗಿ ಉಡುಪಿಯ ಅಭಿವೃದ್ಧಿ ಯಲ್ಲಿ ತನ್ನದೇ ಛಾಪನ್ನು ಮೂಡಿಸಿ ಭಾರತ ಸೇವಾದಳದಲ್ಲಿ ರಾಜ್ಯ ಸಮಿತಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಉಡುಪಿಯಲ್ಲಿ ರಾಜ್ಯಮಟ್ಟದ ಮಕ್ಕಳ ಭಾವೈಕ್ಯತಾ ಮೇಳವನ್ನು ಸಂಘಟಿಸಿದ ಅಪ್ರತಿಮ ಸಂಘಟಕ ಯು.ಆರ್. ಸಭಾಪತಿಯವರ ಕೊಡುಗೆ ಅನನ್ಯ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಇತ್ತೀಚೆಗೆ ಅಗಲಿದ ಭಾರತ ಸೇವಾದಳದ ಧುರೀಣ ಹಾಗೂ ಮಾಜಿ ಶಾಸಕ ಯು.ಆರ್.ಸಭಾಪತಿಯವರಿಗೆ ಅಜ್ಜರಕಾಡು ಭಾರತ ಸೇವಾದಳದ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನುಡಿನಮನ ಸಲ್ಲಿಸಿದರು.
ಭಾರತ ಸೇವಾದಳದ ಕೇಂದ್ರ ಸಮಿತಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಭಾರತ ಸೇವಾದಳದ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಗೋಪಾಲಕೃಷ್ಣ ಶೆಟ್ಟಿ, ಹಿರಿಯ ಸದಸ್ಯ ಎಂ.ಸಿ. ಆಚಾರ್ ಕಾರ್ಕಳ ನುಡಿನಮನ ಸಲ್ಲಿಸಿದರು. ಅಧ್ಯಕ್ಷತೆಯನ್ನು ಭಾರತ ಸೇವಾದಳ ಉಡುಪಿ ಜಿಲ್ಲಾಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ವಹಿಸಿದ್ದರು.
ಸಭೆಯಲ್ಲಿ ಸೇವಾದಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ನಗರಸಭಾ ಸದಸ್ಯ ಗಿರೀಶ್ ಎಂ.ಅಂಚನ್, ಸೇವಾದಳ ಜಿಲ್ಲಾ ಸಮಿತಿಯ ಸದಸ್ಯರುಗಳಾದ ಬಿ.ಪುಂಡಲೀಕ ಮರಾಠೆ ಶಿರ್ವ, ಸೇವಾದಳ ಬ್ರಹ್ಮಾವರ ತಾಲೂಕು ಅಧ್ಯಕ್ಷ ಹರೀಂದ್ರನಾಥ್ ಶೆಟ್ಟಿ, ಕಾರ್ಯದರ್ಶಿ ದಿನಕರ ಶೆಟ್ಟಿ, ಜಯಲಕ್ಷ್ಮೀ ಬಿ.ಸಿ., ದಿನಕರ ಶೆಟ್ಟಿ ಶಿರೂರು ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕ ಫಕ್ಕೀರಗೌಡ ಹಳೆಮನಿ ವಂದಿಸಿದರು.