ಶಾಲೆ ಮಹಡಿಯಿಂದ ಬಿದ್ದು ಬಾಲಕಿ ಸಾವು: ಅತ್ಯಾಚಾರ, ಕೊಲೆ ಆರೋಪ
ಹೊಸದಿಲ್ಲಿ: ಅಯೋಧ್ಯೆಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ 15 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಶಾಲೆಯ "ಮಹಡಿಯಿಂದ ಬಿದ್ದು" ಮೃತಪಟ್ಟಿದ್ದಾಳೆ. ಆದರೆ ತಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಳಿಕ ಆಕೆಯನ್ನು ಟೆರೇಸ್‌ನಿಂದ ಕೆಳಕ್ಕೆ ಎಸೆಯಲಾಗಿದೆ ಎನ್ನುವುದು ತಂದೆಯ ಆರೋಪ.
ಶಾಲೆಯ ಪ್ರಾಚಾರ್ಯ, ಕ್ರೀಡಾ ಶಿಕ್ಷಕ ಸೇರಿದಂತೆ ಇಬ್ಬರು ಸಿಬ್ಬಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ತರಗತಿ ನಡೆಯುತ್ತಿಲ್ಲವಾದರೂ, ಬೆಳಿಗ್ಗೆ 8.30ಕ್ಕೆ ಶಾಲೆಯ ಪ್ರಾಚಾರ್ಯರು 10ನೇ ತರಗತಿ ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದಾರೆ ಎಂದು ತಂದೆ ದೂರಿದ್ದಾರೆ.
"ಬೆಳಿಗ್ಗೆ 9.50ರ ಸುಮಾರಿಗೆ ಪ್ರಾಚಾರ್ಯರು ಕರೆ ಮಾಡಿ, ಉಯ್ಯಾಲೆಯಿಂದ ಬಿದ್ದ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಹೇಳಿದರು. ನಾನು ಶಾಲೆಗೆ ಹೋದಾಗ ಮಗಳನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದರು. ಆಕೆಯ ದೇಹದಲ್ಲಿ ಗಾಯದ ಗುರುತುಗಳಿದ್ದವು. ಉಯ್ಯಾಲೆಯಿಂದ ಬಿದ್ದರೆ ಅಂಥ ಗಾಯಗಳಾಗುವ ಸಾಧ್ಯತೆ ಇಲ್ಲ" ಎಂದು ತಂದೆ ವಿವರಿಸಿದ್ದಾರೆ.
ಕಟ್ಟಡದಿಂದ ಬಿದ್ದು ಆದ ಗಾಯದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಆದರೆ ಆಘಾತ ಮತ್ತು ಸ್ರಾವ ಸಾವಿಗೆ ಕಾರಣ ಎಂದು ಸ್ಪಷ್ಟಪಡಿಸಲಾಗಿದೆ" ಎಂದು ಅಯೋಧ್ಯೆ ಡಿಐಜಿ ಜಿ.ಮುನಿರಾಜ್ ಹೇಳಿದ್ದಾರೆ. ಬಾಲಕಿ ಕಟ್ಟಡದಿಂದ ಬಿದ್ದುದನ್ನು ಸಿಸಿಟಿವಿ ದೃಶ್ಯಾವಳಿ ಬಹಿರಂಗಪಡಿಸಿದೆ. ಇದು ಪ್ರಾಚಾರ್ಯರ ಹೇಳಿಕೆಗೆ ವಿರುದ್ಧವಾಗಿದೆ.
ಅತ್ಯಾಚಾರ ಸೇರಿದಂತೆ ಭಾರತೀಯ ದಂಡಸಂಹಿತೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.