ಕೊಲ್ಲೂರು: ಕಣ್ಣಿಗೆ ಮೆಣಸಿನ ಹುಡಿ ಎರಚಿ ಬೈಕ್ ಸವಾರನ ಸುಲಿಗೆ
ಕೊಲ್ಲೂರು, ಮೇ 28: ದ್ವಿಚಕ್ರ ವಾಹನ ಸವಾರರೊಬ್ಬರ ಕಣ್ಣಿಗೆ ಮೆಣಸಿನ ಹುಡಿ ಎರಚಿ ಪರ್ಸ್ನಲ್ಲಿದ್ದ ಹಣ ಸುಲಿಗೆ ಮಾಡಿರುವ ಘಟನೆ ಮೇ 27ರಂದು ಮಧ್ಯಾಹ್ನ 2:45ರ ಸುಮಾರಿಗೆ ಕೆರಾಡಿ ಗ್ರಾಮದ ಚಪ್ಪರಮಕ್ಕಿ ಎಂಬಲ್ಲಿ ನಡೆದಿದೆ.
ಹೊಸೂರು ಗ್ರಾಮದ ಬರದಕಲ್ಲ ನಿವಾಸಿ ಹರೀಶ(30) ಎಂಬವರು ಉಡುಪಿಯಿಂದ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಬೈಕನ್ನು ರಸ್ತೆ ಬದಿ ನಿಲ್ಲಿಸಿದ್ದರು. ಈ ವೇಳೆ ಚಪ್ಪರಮಕ್ಕಿ ಕಡೆಯಿಂದ ಬೆಳ್ಳಾಲ ಕಡೆಗೆ ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಸುಮಾರು 30 ರಿಂದ 35 ವರ್ಷ ಪ್ರಾಯದ ಹೆಲ್ಮೆಟ್ ಧರಿಸಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು, ಹರೀಶ್ ಅವರ ಬಳಿ ಬಂದರೆನ್ನಲಾಗಿದೆ.
ಬೈಕಿನಿಂದ ಇಳಿದ ಹಿಂಬದಿ ಸವಾರ ಏಕಾಎಕಿ ತನ್ನ ಕೈಯಲಿದ್ದ ಮೆಣಿಸಿನ ಪುಡಿಯನ್ನು ಹರೀಶ್ ಮುಖಕ್ಕೆ ಎರಚಿ ಎಳೆದಾಡಿ ಅಂಗಿಯನ್ನು ಹರಿದು ಪ್ಯಾಂಟ್ ನ ಹಿಂಬದಿಯ ಕಿಸೆಯಲ್ಲಿದ್ದ ಪರ್ಸ್ ಅನ್ನು ಬಲವಂತವಾಗಿ ಕಸಿದು ಅದರಲ್ಲಿದ್ದ 5000ರೂ. ಹಣ ತೆಗೆದುಕೊಂಡು ಪರಾರಿಯಾಗಿರುವುದಾಗಿ ದೂರು ನೀಡಲಾಗಿದೆ.
ಅಪರಿಚಿತ ವ್ಯಕ್ತಿಗಳ ಹಲ್ಲೆಯಿಂದ ಹರೀಶ್ ಅವರ ತಲೆ ಮತ್ತು ಹೊಟ್ಟೆಗೆ ತರಚಿದ ಗಾಯಗಳಾಗಿವೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.