ನೆಟ್ಟಾರು ಕುರಿತ ಬಿಜೆಪಿ ಕಾಳಜಿಯ ನಿಜರೂಪ ಬಯಲು: ರಮೇಶ್ ಕಾಂಚನ್
ಉಡುಪಿ, ಮೇ 28: ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಅಂದಿನ ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ನೌಕರಿ ನೀಡಿತ್ತು. ಸರಕಾರ ಬದಲಾದ ಹಿನ್ನಲೆಯಲ್ಲಿ ನೆಟ್ಟಾರು ಪತ್ನಿ ಕೆಲಸ ಕಳೆದುಕೊಂಡಿದ್ದಾರೆ ಎಂದು ವಾದಿಸುವ ಬಿಜೆಪಿಗರು ಯಾಕೆ ಅವರ ನೌಕರಿಯನ್ನು ಖಾಯಂ ಮಾಡಿರಲಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಅದೇಷ್ಟೋ ಹಿಂದೂ ಯುವಕರ ಕೊಲೆ ನಡೆದಾಗ ಅವರ ಬಗ್ಗೆ ತಲೆ ಕೆಡಿಸದೆ ಕನಿಷ್ಠ ಪರಿಹಾರ ಕೂಡ ನೀಡದೆ ಇರುವ ಬಿಜೆಪಿಗರು ಪ್ರವೀಣ್ ನೆಟ್ಟಾರ್ ಪತ್ನಿಗೆ ತಾತ್ಕಲಿಕ ನೆಲೆಯಲ್ಲಿ ಉದ್ಯೋಗ ನೀಡಿ ಕೈ ತೊಳೆದುಕೊಂಡಿದ್ದಾರೆ. ಇದರಿಂದ ಪ್ರವೀಣ್ ನೆಟ್ಟಾರ್ ಬಗ್ಗೆ ಇರುವ ಬಿಜೆಪಿಯ ಕಾಳಜಿಯ ನಿಜರೂಪ ಬಯಲಾಗಿದೆ ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಬಗ್ಗೆ ಸಹಿಸಲಾಗದೆ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಕೂಡ ಹಿಂದೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು ಇಂದಿಗೂ ಕೇವಲ ಘೋಷಣೆಯಾಗಿಯೇ ಉಳಿದಿದೆ. ಅದ್ಯಾವುದೂ ಕೂಡ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವುದನ್ನು ರಾಜ್ಯ ಹಾಗೂ ಜಿಲ್ಲೆಯ ಜನರು ಮರೆತಿಲ್ಲ. ಈಗಷ್ಠೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದು ಅದಕ್ಕೂ ಮೊದಲೇ ಬಿಜೆಪಿಗರು ಗ್ಯಾರಂಟಿ ಕಾರ್ಡಿನ ವಿರುದ್ದ ಹೋರಾಟಕ್ಕೆ ಹೊರಟಿಸಿರುವುದು ವಿಪರ್ಯಾಸ ಎನ್ನಬಹುದು ಎಂದು ಅವರು ತಿಳಿಸಿದ್ದಾರೆ.
ನೀವು ಒಮ್ಮೆ ಹಿಂದೆ ತಿರುಗಿ ನೋಡಿ. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ ಭರವಸೆಯನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ತಮ್ಮ ಅವಧಿಯ ಘೋಷಣೆಗಳನ್ನು ಬಾಕಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಗ್ಯಾರಂಟಿಯ ಬಗ್ಗೆ ಮಾತನಾಡಲು ತಮಗೆ ಯಾವುದೇ ನೈತಿಕತೆಯೂ ಇಲ್ಲ. ಜನರಲ್ಲಿ ಗೊಂದಲ ಸೃಷ್ಟಿಸುವುದ್ದನ್ನು ತಕ್ಷಣವೇ ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ಕೂಡ ಹೋರಾಟದ ಕಿಚ್ಚು ಇ,ದ್ದು ಮುಂದೆ ಬಿಜೆಪಿಯು ಘೋಷಣೆ ಮಾಡಿದ ಭರವಸೆಗಳನ್ನು ಈಡೇರಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದೀತು ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.