ಭ್ರಷ್ಟಾಚಾರವನ್ನು ಮುಲಾಜಿಲ್ಲದೇ ಹತ್ತಿಕ್ಕಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯ ಕೊನೆಯಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರು ಮಾಡಲಾದ ಸುಮಾರು 20 ಸಾವಿರ ಕೋಟಿ ರೂ. ವೌಲ್ಯದ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆ ಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಕಾರ್ಯದರ್ಶಿ ಗಳಿಗೆ ಸೂಚಿಸಿದ್ದಾರೆ. ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿ ಹೊಸದಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಹಾಗೂ ಬಾಕಿ ಇರುವ ಬಿಲ್ ಪಾವತಿ ಸ್ಥಗಿತಗೊಳಿಸುವಂತೆ ಮುಖ್ಯ ಮಂತ್ರಿಗಳು ಪ್ರಮಾಣ ವಚನವನ್ನು ಸ್ವೀಕರಿಸಿದ ದಿನವೇ ಆದೇಶ ಹೊರಡಿಸಲಾಗಿತ್ತು. ಅಕ್ರಮ ಮತ್ತು ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ನೂತನ ಸರಕಾರದ ಈ ದಿಟ್ಟ ಕ್ರಮ ಸ್ವಾಗತಾರ್ಹವಾಗಿದೆ.
ಮುಖ್ಯಮಂತ್ರಿಗಳ ಈ ದಿಟ್ಟ ಕ್ರಮದಿಂದ ಬಿಜೆಪಿ ನಾಯಕರಿಗೆ ಅಸಮಾಧಾನ ಉಂಟಾದರೂ ಸಾರ್ವಜನಿಕರ ಹಣದ ಲೂಟಿಯನ್ನು ತಡೆಯುವ ನಿಟ್ಟಿನಲ್ಲಿ ಇಂಥದೊಂದು ಕ್ರಮದ ಅವಶ್ಯಕತೆ ಇತ್ತು. ಹಿಂದಿನ ಬಿಜೆಪಿ ಸರಕಾರದ ಹಗರಣಗಳು ಒಂದೆರಡಲ್ಲ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತಿಳಿಸಿದ್ದರು. ತನಿಖೆ ಮಾಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು.ಆದರೆ ನಾನೂ ತಿನ್ನುವುದಿಲ್ಲ ಇನ್ನೊಬ್ಬರಿಗೂ ತಿನ್ನಲು ಬಿಡುವುದಿಲ್ಲ ಎಂದು ಬಡಾಯಿ ಕೊಚ್ಚಿ ಕೊಳ್ಳುತ್ತಿರುವ ನರೇಂದ್ರ ಮೋದಿಯವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕನಿಷ್ಠ ಉತ್ತರವನ್ನೂ ಬರೆಯಲಿಲ್ಲ. ಅದರ ಬದಲಿಗೆ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಸುಳ್ಳು ಭಾಷಣಗಳನ್ನು ಮಾಡಿಹೋದರು.
ಶೇ.40 ಕಮಿಶನ್ ಕೊಡದೆ ಬಿಲ್ ಮಂಜೂರಾಗುವುದಿಲ್ಲ ಎಂದು ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಮಾತ್ರವಲ್ಲ ಬಿಜೆಪಿ ಕಾರ್ಯಕರ್ತರೊಬ್ಬರು ಹಿಂದಿನ ಸಚಿವ ಕೆ.ಎಸ್.ಈಶ್ವರಪ್ಪ ಬಿಲ್ ಪಾಸು ಮಾಡಲು ಲಂಚ ಕೇಳುತ್ತಿದ್ದಾರೆಂದು, ಅವರಿಗೆ ಕೊಡಲು ಹಣ ತನ್ನ ಬಳಿ ಇಲ್ಲವೆಂದು ಚೀಟಿ ಬರೆದು ಆತ್ಮಹತ್ಯೆ ಮಾಡಿಕೊಂಡರು. ಆ ನಂತರ ಈಶ್ವರಪ್ಪ ಒಲ್ಲದ ಮನಸ್ಸಿನಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ತನಿಖೆಯ ನಾಟಕ ನಡೆದು ದೋಷ ಮುಕ್ತರಾಗಿ ಹೊರಗೆ ಬಂದರು. ಆ ನಂತರ ವಿಧಾನಸಭೆಗೆ ಸ್ಪರ್ಧಿಸಲು ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಯಿತು. ಇಂಥ ಹಲವಾರು ಆರೋಪಗಳು ಬಿಜೆಪಿ ಸಚಿವರ ಮೇಲೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗಳಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಇಲ್ಲದೇ ಮಂಜೂರಾತಿ ನೀಡಿದ್ದರೆಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಗಂಭೀರ ಸ್ವರೂಪದ ಆರೋಪವನ್ನು ಮಾಡಿದ್ದರು. ಬಿಜೆಪಿಯ ಇನ್ನೊಬ್ಬ ಶಾಸಕ ಬಸನಗೌಡ ಪಾಟೀಲ ಯತ್ನಾಳರೂ ಯಡಿಯೂರಪ್ಪ ನವರ ವಿರುದ್ಧ ಗಂಭೀರ ಸ್ವರೂಪದ ಆರೋಪವನ್ನು ಮಾಡಿದ್ದರು. ಯಡಿಯೂರಪ್ಪನವರ ಮೇಲೆ ಮಾಡಿರುವ ಆರೋಪದಲ್ಲಿ ಬಿಜೆಪಿಯ ಆಂತರಿಕ ವೈಷಮ್ಯದ ಛಾಯೆ ಇದ್ದರೂ ಹಗರಣ ನಡೆದಿದ್ದಂತೂ ನಿಜವಾಗಿದೆ. ಯಡಿಯೂರಪ್ಪ ಮಾತ್ರವಲ್ಲ ಬಿಜೆಪಿಯ ಇತರ ಸಚಿವರ ಹಗರಣಗಳನ್ನು ಬಯಲಿಗೆಳೆದು ತನಿಖೆ ನಡೆಸಬೇಕಾಗಿದೆ.
ಬರೀ ಮಂತ್ರಿಗಳ ಹಗರಣ ಮಾತ್ರವಲ್ಲ ಬಿಜೆಪಿಯ ಸೈದ್ಧಾಂತಿಕ ಗುರುವಿನ ಸ್ಥಾನದಲ್ಲಿ ಇರುವ ಆರೆಸ್ಸೆಸ್ ಮತ್ತು ಅದರ ಅಂಗ ಸಂಘಟನೆಗಳಾದ ರಾಷ್ಟ್ರೋತ್ಥಾನ ಪರಿಷತ್, ವಿಶ್ವ ಹಿಂದೂ ಪರಿಷತ್, ಮುಂತಾದ ಸಂಘಟನೆಗಳು ಸರಕಾರದ ಗೋಮಾಳ ಜಮೀನನ್ನು ಭಾರೀ ಪ್ರಮಾಣದಲ್ಲಿ ಕಬಳಿಸಿವೆ. ಹಿಂದಿನ ಬಿಜೆಪಿ ಸರಕಾರ ನೂರಾರು ಏಕರೆ ಭೂಮಿಯನ್ನು ಕೋಮುವಾದಿ ಸಂಘಟನೆಗಳಿಗೆ ಮಂಜೂರು ಮಾಡಿದೆ. ಸಂಘ ಪರಿವಾರಕ್ಕೆ ನೀಡಿರುವ ಈ ಸರಕಾರಿ ಭೂಮಿಯಲ್ಲಿ ಶಾಲೆ, ಕಾಲೇಜುಗಳನ್ನು ಮಾಡಿ ಮಕ್ಕಳಿಗೆ ಕೋಮುವಾದದ ವಿಷ ತುಂಬುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯತ್ತಿದೆ. ಕಾರಣ ಕೋಮುವಾದಿ ಸಂಘಟನೆಗಳಿಗೆ ಹಿಂದಿನ ಬಿಜೆಪಿ ಮಂಜೂರು ಮಾಡಿದ ಸರಕಾರದ ಭೂಮಿಯ ಮಂಜೂರಾತಿಯನ್ನು ರದ್ದುಪಡಿಸಿ ಆ ಭೂಮಿಯನ್ನು ಸರಕಾರ ವಾಪಸು ಪಡೆಯಬೇಕು.
ಯಾವುದೇ ಹೊಸ ಸರಕಾರ ಬಂದಾಗ ಹಿಂದಿನ ಸರಕಾರದ ಹಗರಣಗಳನ್ನು ಬಯಲಿಗೆಳೆದು ತಪ್ಪಿತಸ್ಥರನ್ನು ಪತ್ತೆ ಹಚ್ಚುವುದಾಗಿ ಹೇಳುತ್ತವಾದರೂ ಅನೇಕ ಬಾರಿ ಇದು ಆರಂಭ ಶೂರತ್ವ ಎಂದು ಸಾಬೀತಾಗಿದೆ. ಹಿಂದಿನ ಗಣಿ ಹಗರಣಗಳು ಸೇರಿದಂತೆ ಯಾವುದೇ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆದರೂ ತನಿಖೆ ತಾರ್ಕಿಕ ಅಂತ್ಯಕ್ಕೆ ಹೋದ ಉದಾಹರಣೆಗಳು ಕಡಿಮೆ. ಈ ಸಲ ಹಾಗಾಗಬಾರದು.
ಹಿಂದಿನ ಸರಕಾರದ ಹಗರಣಗಳನ್ನು ಬಯಲಿಗೆಳೆದು ಶಿಕ್ಷಿಸಲು ಯಾರ ತಕರಾರೂ ಇಲ್ಲ. ಆದರೆ ಸೇಡಿನ ಭಾವನೆಯಿಂದ ಹೀಗೆ ಮಾಡಿದರು ಎಂಬ ಆರೋಪ ಬರಬಾರದು. ತನಿಖೆ ನಿಷ್ಪಕ್ಷಪಾತ ವಾಗಿರಬೇಕು. ಅನೇಕ ಬಾರಿ ತನಿಖೆ ಕೇವಲ ಜನರಿಗೆ ತೋರಿಸಲು ಕಣ್ಣೊರೆಸುವ ನಾಟಕವಾಗಿರುತ್ತದೆ. ಸಾಮಾನ್ಯವಾಗಿ ರಾಜಕಾರಣಿಗಳು ಬಹಿರಂಗ ವಾಗಿ ಪರಸ್ಪರ ಕೆಸರೆರಚಾಟ ನಡೆಸಿದರೂ ಒಬ್ಬರ ಜುಟ್ಟು ಇನ್ನೊಬ್ಬರ ಕೈಯಲ್ಲಿ ಇರುತ್ತದೆ. ಹೀಗಾಗಿ ಯಾವುದೇ ತನಿಖೆ ಕೇವಲ ನಾಟಕವಾಗಿ ತಾರ್ಕಿಕ ಅಂತ್ಯವನ್ನು ಕಾಣುವುದೇ ಇಲ್ಲ. ಈ ಬಾರಿ ಹಾಗಾಗಬಾರದು.
ಭ್ರಷ್ಟಾಚಾರದ ಹಗರಣಗಳ ತನಿಖೆಯಲ್ಲಿ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿರಿಸಿಕೊಂಡು ನಡೆಸುವ ಸಿಬಿಐ ಮತ್ತು ಆದಾಯ ತೆರಿಗೆ ದಾಳಿಗಳು ಕೂಡ ಆರೋಪಿ ಬಿಜೆಪಿ ಸೇರಿದ ನಂತರ ಕೊನೆಗೊಂಡು ದೋಷ ಮುಕ್ತನಾಗಿ ಬಂದ ಉದಾಹರಣೆಗಳು ಸಾಕಷ್ಟಿವೆ. ಇಂಥ ರಾಜಕೀಯ ಉದ್ದೇಶದ ತನಿಖೆ ಹಾಗೂ ದಾಳಿಯಿಂದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಒಮ್ಮೆ ಇಂಥ ಸಂಸ್ಥೆಗಳ ಮೇಲೆ ಜನತೆ ನಂಬಿಕೆಯನ್ನು ಕಳೆದುಕೊಂಡರೆ ಅದನ್ನು ಮರಳಿ ಗಳಿಸುವುದು ಸುಲಭವಲ್ಲ. ಯಾವುದೇ ತನಿಖೆ ಪಾರದರ್ಶಕವಾಗಿರಬೇಕು.