ಯಾರದ್ದೋ ಮಾತು ಕೇಳಿದರೆ ಸಿದ್ದರಾಮಯ್ಯ ಮತ್ತೆ ಮನೆಗೆ ಹೋಗ್ತಾರೆ: ಸಿ ಟಿ ರವಿ
ಚಿಕ್ಕಮಗಳೂರು: ಅನುಭವದ ಆಧಾರದ ಮೇಲೆ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ತಾರೆ ಅಂದು ಕೊಂಡಿದ್ದೇನೆ. ಯಾರದ್ದೋ ಮಾತು ಕೇಳಿದ್ರೆ ಮತ್ತೆ ಮನೆಗೆ ಹೋಗ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ ಅಂದಿದ್ರು. ಉಚಿತ, ನಿಶ್ಚಿತ, ಖಂಡಿತ, ಖಚಿತ ಹೀಗೆ ಹೇಳಿದ್ರು. ಮೊದಲು ಯಾವುದೇ ಷರತ್ತು ಇರಲಿಲ್ಲ. ಈಗ ಎಲ್ಲಾ ಷರತ್ತು ಬಂದಿದೆ. ಇವರು ಲೋಕಸಭೆ ಚುನಾವಣೆ ವರೆಗೂ ಕೊಡಬಹುದು. ಏನು ಮಾಡ್ತಾರೆ ಅಂತ ನೋಡೋಣ ಎಂದು ಹೇಳಿದರು.
ನಾವೂ ಕೂಡ 36% ಮತಗಳನ್ನ ಪಡೆದಿದ್ದೇವೆ. ಕಡಿಮೆ ಸೀಟುಗಳು ಬಂದಿರಬಹುದು. ಮುಂದೆ ಏನಾಗುತ್ತೆ ನೋಡೋಣ. ಮಹದೇವಪ್ಪ, ಸಿದ್ದರಾಮಯ್ಯ, ಪಾಟೀಲ್ ಎಲ್ಲರೂ ಬಿಪಿಎಲ್ ಕಾರ್ಡ್ ಇರೋರಾ? ಅವರು ಮೊದಲೇ ಹೇಳಬೇಕಿತ್ತು ಇಂತವರಿಗೆ ಫ್ರೀ ಅಂತ. ಕಾಂಗ್ರೆಸ್ ಏನು ನಿನ್ನೆ ಮೊನ್ನೆ ಬಂದ ಪಕ್ಷವಾ.? ಸಿದ್ದರಾಮಯ್ಯ, ಮಹದೇವಪ್ಪ ಯಾರೂ ಟ್ಯಾಕ್ಸ್ ಕಟ್ಟೋದಿಲ್ವಾ ಎಂದು ಪ್ರಶ್ನಿಸಿದರು.
ಎನ್‌ಇಪಿ ಕಿತ್ತಾಕ್ತೀವಿ ಅಂತ ಹೇಳ್ತಾರೆ. ನೈತಿಕ ಮೌಲ್ಯ ಶಿಕ್ಷಣ ಇವರಿಗೆ ಬೇಕಿಲ್ಲ. ಆಧುನಿಕ ಶಿಕ್ಷಣ ಇವರಿಗೆ ಬೇಕಿಲ್ಲ. ಒಂದು ಪೂರ್ವಾಗ್ರಹ ಮನಸ್ಥಿತಿಗೆ ಬಲಿಯಾಗಿದ್ದಾರೆ. ಮಾತೃಭಾಷೆ,ಆಧುನಿಕ ಶಿಕ್ಷಣ ವಿರೋಧಿಸ್ತಿದ್ದಾರೆ. ಹೆಡ್ಗೆವಾರ್ ಅವರು RSS ಸಂಸ್ಥಾಪಕರು. ಅವರ ಬಗ್ಗೆ ಪಠ್ಯ ಇದೆ. ಅವರನ್ನ ವಿರೋಧಿಸಿ, ಪಠ್ಯದಿಂದ ಹೇಗೆ ತೆಗೀತಾರೆ ನೋಡೋಣ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ಹೇಳಿದರು.
ನಾನು ಯಾವುದೇ ಹುದ್ದೆಯ ರೇಸ್‌ನಲ್ಲಿ ಇಲ್ಲ. ಪಕ್ಷ ಕೊಟ್ಟಿರೋ ಜವಾಬ್ದಾರಿಯಲ್ಲಿ ಕೆಲಸ ಮಾಡ್ತೀನಿ. ಕಳೆದ ಬಾರಿಗಿಂತ 9 ಸಾವಿರ ಮತ ಪಡೆದು ಸೋತಿದ್ದೇನೆ. ಅತಿ ಹೆಚ್ಚು ಕೆಲಸ ಮಾಡಿದ್ದು ಈ ಬಾರಿ. ಆದ್ರೂ ಸೋತಿದ್ದೇನೆ. ನಾನು ಯಾವುದೇ ಅಧಿಕಾರಕ್ಕೆ ಬೇಡಿಕೆ ಇಟ್ಟಿಲ್ಲ. ಎಲ್ಲರನ್ನೂ ಜೋಡಿಸಿಕೊಂಡು ಕೆಲಸ ಮಾಡಬೇಕಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ ಎಂದರು.
ಕೊರೋನಾದಿಂದ ದೇಶಗಳ ಜಿಡಿಪಿ ಕುಸಿದಿದೆ. ನಮ್ಮದು 4.5 ಜಿಡಿಪಿ ಇದೆ. ಪ್ರಧಾನಿ ಮೋದಿ ಮಾತು ಜಗತ್ತು ಕೇಳುತ್ತಿದೆ. 2047ಕ್ಕೆ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಮಾಡಬೇಕು ಅಂತಿದೆ. ಆದ್ರೆ ಕೆಲ ಜಿಹಾದಿ ಮನಸ್ಥಿತಿ ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದೆ. ಪಕ್ಷ ಈಗ ಸೋತಿದೆ. ಆದ್ರೆ ಲೋಕಸಭೆ ಚುನಾವಣೆ ಹೊತ್ತಿಗೆ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಲಿದ್ದೇವೆ ಎಂದರು.
ವಿಪಕ್ಷ ನಾಯಕ ಸ್ಥಾನ ಬಗ್ಗೆ ಪಕ್ಷದ ಶಾಸಕಾಂಗ ಸಭೆ ಕರೆದು ಚರ್ಚೆ ಮಾಡಲಾಗುತ್ತೆ. ಪ್ರತಿಯೊಬ್ಬರನ್ನೂ ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಬಿಜೆಪಿಗೆ ಸೋಲು ಹೊಸದೇನಲ್ಲ. ಶೀಘ್ರವೇ ವಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.