ರೋಟರಿ ಮಣಿಪಾಲದಿಂದ ‘ಯೂತ್ ಐಕಾನ್’ ಪ್ರಶಸ್ತಿ ಪ್ರದಾನ
ಮಣಿಪಾಲ : ಮಣಿಪಾಲ ರೋಟರಿಯಿಂದ ಸುಸ್ಥಿರ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಯುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಮಾಜ ಮೆಚ್ಚುವ ಕೆಲಸ. ಯುವ ಜನತೆ ಯಲ್ಲಿ ಸಾಮಾಜಿಕ ಕಳಕಳಿಯನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ಮಣಿಪಾಲ ವಿವಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಆಯೋಜಿಸಲಾಗಿದ್ದ ರೋಟರಿ ಮಣಿಪಾಲದ ಯೂತ್ ಐಕಾನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಣಿಪಾಲ ರೋಟರಿಯ ಆಯ್ಕೆ ಸಮಿತಿ ರೋಟರಿ ಜಿಲ್ಲಾ ಯೋಜನೆ ಯಡಿ ಗುರುತಿಸಿದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಯುವ ಸಾಧಕರಾದ ಶಿಲ್ಪಾ ಹೆಗಡೆ- ಮಕ್ಕಳಲ್ಲಿ ಕಲಿಕಾ ನ್ಯೂನತೆ ಪರಿಹಾರ, ಮಯೂರ್ ಶೆಟ್ಟಿ- ಅಂಗಾಂಗ ದಾನ, ಸಾಧನಾ ಜಿ ಅಶ್ರಿತ್- ಮಹಿಳಾ ಸಬಲೀಕರಣ, ಸುಭಾಶ್ ಚಂದ್ರ ಉಡುಪ - ಜಲ ಯಾತ್ರೆ, ಸುಧೇಶ್ ಕಿಣಿ -ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯ ನಿರ್ವಹಣೆ ಇವರಿಗೆ ನಗದು ಪುರಸ್ಕಾರ ಜೊತೆಗೆ ಯೂತ್ ಐಕಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಗರ್ವನರ್ ಡಾ.ಜಯಗೌರಿ, ಉಪ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ಸೇನಾನಿ ರಾಜೇಶ್ ಪಾಲನ್ ಮತ್ತಿತರ ರೋಟರಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಮಣಿಪಾಲ ಅಧ್ಯಕ್ಷೆ ರೇಣು ಜಯರಾಮ್ ಅತಿಥಿಗಳನ್ನು ಸ್ವಾಗತಿಸಿದರೆ, ಜೈ ವಿಠಲ್ ಅತಿಥಿಗಳನ್ನು ಪರಿಚಯಿಸಿದರು. ಅಮಿತ್ ಮತ್ತು ಶ್ರೀಶ ಯೂತ್ ಐಕಾನ್ ಪ್ರಶಸ್ತಿಯ ಆಯ್ಕೆಗಳ ವಿವರಗಳನ್ನಿತ್ತರು. ಡಾ. ಗಿರಿಜಾ, ವಿರೂಪಾಕ್ಷ ದೇವರುಮನೆ, ಡಾ.ಲಾವಣ್ಯ, ಕರ್ನಲ್ ಮಾಧವ ಶಾನುಭಾಗ್ ಮತ್ತು ಶ್ರೀಕಾಂತ ಪ್ರಭು ವಿಜೇತರನ್ನು ಪರಿಚಯಿಸಿದರು. ಕಾರ್ಯದರ್ಶಿ ಶಶಿಕಲಾ ರಾಜವರ್ಮ ವಂದಿಸಿದರು.