ದ.ಕ.ಜಿಲ್ಲಾ ಕಾಂಗ್ರೆಸ್ ಸಭೆ
ಮಂಗಳೂರು, ಮೇ 30: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯವನ್ನು ಸಾಧಿಸಿ ಅಧಿಕಾರದ ಗದ್ದುಗೆಗೆ ಏರಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲಿದೆ. ಆ ಮೂಲಕ ಪಕ್ಷದ ಜನಪ್ರಿಯ ಯೋಜನೆಗಳು ಮುಂದಿನ ಲೋಕಸಭಾ ಚುನಾವಣೆಯ ಯಶಸ್ಸಿಗೆ ಮುನ್ನುಡಿಯಾಗಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜರಗಿದ ದ.ಕ.ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಆಡಳಿತದಲ್ಲಿದ್ದ ಬಿಜೆಪಿಯ ಎಲ್ಲಾ ರೋಡ್ ಶೋಗಳು, ಅಪಪ್ರಚಾರಗಳನ್ನು ಕರ್ನಾಟಕದ ಮತದಾರರು ತಿರಸ್ಕರಿ ಸಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಬೆಂಬಲಿಸಿದ್ದಾರೆ. ಪ್ರಜಾಧ್ವನಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯ ಯಶಸ್ವಿ ಭೇಟಿ, ಭಾರತ್ ಜೋಡೊ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರ ಉತ್ಸಾಹ ಪಾಲ್ಗೊಳ್ಳು ವಿಕೆಯೂ ಪಕ್ಷಕ್ಕೆ ಬಲ ನೀಡಿದೆ. ಜಿಲ್ಲೆಯಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಒಂದು ಹೆಚ್ಚು ಸ್ಥಾನ ಜಯಗಳಿಸಿದ್ದಲ್ಲದೆ 50,000 ಮತಗಳು ಹೆಚ್ಚಳವಾಗಿವೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಬದಲಿಗೆ ಹಿಂದುತ್ವವಿದ್ದು, ಇಲ್ಲಿ ಕಾಂಗ್ರೆಸ್ ವಿರುದ್ಧ ಹಿಂದುತ್ವದ ಸ್ಪರ್ಧೆಯಾಗಿದೆ. ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧ ಇರುವುದಿಲ್ಲವಾದರೂ ಮುಗ್ಧ ಹಿಂದೂಗಳು ನಕಲಿ ಹಿಂದುತ್ವ ದಿಂದ ಮೋಸ ಹೋಗಿದ್ದಾರೆ. ಆ ಕಾರಣದಿಂದ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮುಂದಿನ ದಿನಗಳಲ್ಲಿ ಹಿಂದುತ್ವದ ವಿರುದ್ಧ ಹೋರಾಡಲು ನಿರ್ದಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹರೀಶ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಶಾಸಕಾರದ ಮಂಜುನಾಥ ಭಂಡಾರಿ, ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಮತಾ ಗಟ್ಟಿ, ಪದ್ಮರಾಜ್ ಆರ್, ಮುಖಂಡರಾದ ಭರತ್ ಮುಂಡೋಡಿ, ಕೃಷ್ಣಪ್ಪ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕೆಪಿಸಿಸಿ ಸಂಯೋಜಕರು, ವಕ್ತಾರರು, ಮನಪಾ ಸದಸ್ಯರು, ಮಾಜಿ ಮೇಯರುಗಳು, ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಗಳು, ಕಾರ್ಯಕಾರಣಿ ಸದಸ್ಯರು ಪಾಲ್ಗೊಂಡಿದ್ದರು.
ಯು.ಎಚ್. ಖಾಲಿದ್, ನೀರಾಜ್ಪಾಲ್, ಗಿರೀಶ್ ಶೆಟ್ಟಿ, ಸಿ.ಎಂ. ಮುಸ್ತಫಾ, ಶುಭೋದಯ ಆಳ್ವ, ಹಬೀಬ್ ಕಣ್ಣೂರು ಸಹಕರಿಸಿದ್ದರು.