ಬೆಳ್ತಂಗಡಿ: ನಿವೃತ್ತ ಎಸಿಪಿ ಎಸ್. ಸುಭಾಶ್ಚಂದ್ರ ನಿಧನ
ಬೆಳ್ತಂಗಡಿ: ನಿವೃತ್ತ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್(ಎಸಿಪಿ), ಬೆಳ್ತಂಗಡಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸೂರ್ಯ ಗುತ್ತು ಸುಭಾಶ್ಚಂದ್ರ ( 70) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮುಂಜಾನೆ 2:45ರ ವೇಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಸುಭಾಶ್ಚಂದ್ರ ಅವರು 1979 ರಲ್ಲಿ ಪೊಲೀಸ್ ಇಲಾಖೆಗೆ ಎಸ್ ಐ ಆಗಿ ಸೇರ್ಪಡೆಗೊಂಡರು. ಬಳಿಕ ಬೆಂಗಳೂರು, ಮಡಿಕೇರಿ, ಕಾರವಾರ, ಉಡುಪಿ, ಮಂಗಳೂರು, ಬೆಳ್ತಂಗಡಿ, ಪುತ್ತೂರು ಮತ್ತಿತರ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅವರು ಸಲ್ಲಿಸಿದ ವಿಶೇಷ ಸೇವೆಗಾಗಿ ಅವರಿಗೆ 2008 ರಲ್ಲಿ ಮುಖ್ಯ ಮಂತ್ರಿಯವರ ಪದಕ ಲಭಿಸಿತ್ತು. ಅವರು ಒಂದು ವರ್ಷದ ಕಾಲ ಕೊಸೊವೊದಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ದಿವಂಗತರು ಪತ್ನಿ, ಓರ್ವ ಪುತ್ರ, ಸಹೋದರ ಎಸ್. ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಅವರ ಹುಟ್ಟೂರಾದ ಸೂರ್ಯ ಗುತ್ತುವಿನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.