ಮಧ್ಯಪ್ರದೇಶ: ಮರಕ್ಕೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ತಗುಲಿ 4 ಮಂದಿ ಮೃತ್ಯು
ಹರ್ದಾ: ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಬುಧವಾರ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹೊತ್ತಿ ಉರಿದಿದ್ದು, ಇತ್ತೀಚೆಗೆ ಮದುವೆಯಾದ ಜೋಡಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಜೀವಂತ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ತಿಮರಿ ಪೊಲೀಸ್ ಠಾಣೆ ವ್ಯಾಪ್ತಿಯ ಪೋಖರ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ನಂತರ ಸಂಪೂರ್ಣ ಬೆಂಕಿಹೊತ್ತಿಕೊಂಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಕಾರಿನಲ್ಲಿ ಮೂವರು ಗಂಡಸರು, ಓರ್ವ ಮಹಿಳೆ ಸಹಿತ ನಾಲ್ವರು ಪ್ರಯಾಣಿಸುತ್ತಿದ್ದು, ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು. ಮೃತಪಟ್ಟ ಜೋಡಿ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತದೇಹಗಳನ್ನು ಹೊರ ತೆಗೆದು ಜಿಲ್ಲೆಯ ತಿಮರ್ನಿ ಆರೋಗ್ಯ ಸಮುದಾಯ ಕೇಂದ್ರಕ್ಕೆ ರವಾನಿಸಿದ್ದಾರೆ.
ಮೃತರನ್ನು ವರ್ಕಳ ಚರಖೇಡ ಗ್ರಾಮದ ನಿವಾಸಿಗಳಾದ ಅಖಿಲೇಶ್ ಕುಶ್ವಾಹ, ಗೋಲು ಚೌಧರಿ, ರಾಕೇಶ್ ಕುಶ್ವಾಹ ಹಾಗೂ ಅವರ ಪತ್ನಿ ಶಿವಾನಿ ಎಂದು ಗುರುತಿಸಲಾಗಿದೆ. ಮೃತರ ವಯಸ್ಸು 25 ರಿಂದ 30 ವರ್ಷ.