ರಾಜ್ಯ ಬಿಜೆಪಿಯೆಂಬ ನಾವಿಕನಿಲ್ಲದ ನೌಕೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ವಿಧಾನಸಭಾ ಚುನಾವಣೆಯ ಹೀನಾಯ ಫಲಿತಾಂಶವನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲದಿಂದ ರಾಜ್ಯ ಬಿಜೆಪಿ ಇನ್ನೂ ಹೊರಬಂದಿಲ್ಲ. ಚುನಾವಣೆಯ ಸೋಲನ್ನು ಯಾರ ಹೆಗಲಿಗೆ ಹಾಕಬೇಕು ಎನ್ನುವ ಚರ್ಚೆಯೇ ಪಕ್ಷದೊಳಗೆ ಪೂರ್ಣಗೊಂಡಂತಿಲ್ಲ. ಕಾಂಗ್ರೆಸ್ ಈಗಾಗಲೇ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಆಯ್ಕೆಯ ಅಗ್ನಿ ಪರೀಕ್ಷೆಯಲ್ಲಿ ಗೆದ್ದು, ನೂತನ ಸರಕಾರ ರಚನೆಯಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರ ಬಗ್ಗೆಯೂ ಯಾವುದೇ ಗೊಂದಲಗಳಿಲ್ಲದೆ ಮುಂದಕ್ಕೆ ಹೆಜ್ಜೆ ಇಡುತ್ತಿದೆ. ಇದೇ ಸಂದರ್ಭದಲ್ಲಿ ಪಕ್ಷದೊಳಗೆ ಚೆಲ್ಲಾಪಿಲ್ಲಿಯಾಗಿರುವ ಆತ್ಮವಿಶ್ವಾಸವನ್ನು ಮರು ಸಂಘಟಿಸಿ, ಯೋಗ್ಯ ವಿರೋಧ ಪಕ್ಷ ನಾಯಕನನ್ನು ಆರಿಸುವುದು ಬಿಜೆಪಿಯ ಕರ್ತವ್ಯ. ನೂತನ ಸರಕಾರದ ನಡೆಗಳನ್ನು ಗಮನಿಸಿ ಅದಕ್ಕೆ ಪ್ರತಿಕ್ರಿಯಿಸಲು ಬಿಜೆಪಿಯು ಹೊಸ ಸಮರ್ಥ ನಾಯಕನನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕಾಗಿದೆ.
ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯರಂತಹ ಮುತ್ಸದ್ದಿನಾಯಕರ ನೇತೃತ್ವದಲ್ಲಿ ಬಿಜೆಪಿಯ ದುರಾಡಳಿತದ ಬಗ್ಗೆ ಯಶಸ್ವಿಯಾಗಿ ಧ್ವನಿಯೆತ್ತಿತ್ತು. ಪರಿಣಾಮವಾಗಿಯೇ ಕಾಂಗ್ರೆಸ್ ಇಂದು ಆಡಳಿತ ಪಕ್ಷ ಸ್ಥಾನದಲ್ಲಿ ಬಂದು ಕೂತಿದೆ. ಒಂದು ಸರಕಾರದ ಯಶಸ್ಸಿನ ಹಿಂದೆ ಯೋಗ್ಯ ವಿರೋಧಪಕ್ಷದ ಪಾತ್ರವೂ ಇದೆ ಎನ್ನುವುದನ್ನು ಬಿಜೆಪಿ ಮರೆಯಬಾರದು. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸೋಲಿನ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಘೋಷಿಸಿದ್ದರು. ಆದರೆ ಈವರೆಗೆ ಆ ಹೊಣೆಯನ್ನು ಅವರು ಯಾವ ರೀತಿಯಲ್ಲಿ ಹೊತ್ತುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಚುನಾವಣೆಗೆ ಪೂರ್ವದಲ್ಲಿ ನೀಡುತ್ತಿದ್ದ ಬೇಜವಾಬ್ದಾರಿ ಹೇಳಿಕೆಗಳನ್ನು ಅವರು ಮುಂದುವರಿಸಿದ್ದಾರೆ. ಇಲ್ಲದೇ ಇದ್ದರೆ ‘ಕರೆಂಟ್ ಬಿಲ್ ಕಟ್ಟಬೇಡಿ, ಬಸ್‌ನಲ್ಲಿ ಟಿಕೆಟ್ ತೆಗೆಯಬೇಡಿ’ ಎಂಬಿತ್ಯಾದಿ ಬೇಜವಾಬ್ದಾರಿ ಕರೆಗಳನ್ನು ನೀಡುತ್ತಾ, ಪಕ್ಷದ ಹೋದ ಮಾನವನ್ನು ಸಾರ್ವಜನಿಕವಾಗಿ ಇನ್ನಷ್ಟು ಹರಾಜಿಗಿಡುತ್ತಿರಲಿಲ್ಲ. ಸರಿಯಾದ ನಾಯಕರನ್ನು ಪಕ್ಷ ಆರಿಸದೇ ಇರುವ ಕಾರಣದಿಂದ, ಎಲ್ಲರೂ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಮೊತ್ತ ಮೊದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲು ತಕ್ಷಣ ರಾಜೀನಾಮೆ ನೀಡಬೇಕಾಗಿದೆ. ಯಾಕೆಂದರೆ, ಅವರು ನೆಪ ಮಾತ್ರಕ್ಕಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಚುನಾವಣಾ ಫಲಿತಾಂಶದ ಬಳಿಕ ಕರಾವಳಿಯೂ ಸೇರಿದಂತೆ ರಾಜ್ಯ ಬಿಜೆಪಿಯೊಳಗೆ ಅವರು ತೀವ್ರ ನಗೆಪಾಟಲಿಗೀಡಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ವಿರುದ್ಧ ಸಂಘಪರಿವಾರ ಮತ್ತು ಬಿಜೆಪಿಯ ಕಾರ್ಯಕರ್ತರು ತೀವ್ರ ದಾಳಿಗಳನ್ನು ನಡೆಸುತ್ತಿದ್ದಾರೆ. ಆದರೆ ಚುನಾವಣೆಯ ಸೋಲಿಗೆ ಯಾವ ಕಾರಣಕ್ಕೂ ನಳಿನ್ ಕುಮಾರ್ ಕಟೀಲರನ್ನು ಹೊಣೆ ಮಾಡುವಂತಿಲ್ಲ. ದುರ್ಬಲ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಯ ನಿಯಂತ್ರಣವನ್ನು ಕೈಗೆತ್ತಿಕೊಂಡಿರುವುದು ಕೇಶವ ಕೃಪಾ. ನಳಿನ್ ಕುಮಾರ್ ಕಟೀಲು ಅವರನ್ನು ಮುಂದಿಟ್ಟುಕೊಂಡು, ಬಿಜೆಪಿಯ ಚುನಾವಣೆಯ ರೂಪುರೇಷೆಗಳನ್ನು ಮಾಡಿರುವುದು ಆರೆಸ್ಸೆಸ್. ಯಾರಿಗೆ ಟಿಕೆಟ್ ನೀಡಬೇಕು, ನೀಡಬಾರದು ಎನ್ನುವುದನ್ನು ಅಂತಿಮಗೊಳಿಸಿರುವುದು ಆರೆಸ್ಸೆಸ್‌ನ ಮುಖಂಡರು. ಇದರಲ್ಲಿ ರಾಜ್ಯಾಧ್ಯಕ್ಷರ ಯಾವ ಪಾತ್ರವೂ ಇಲ್ಲ ಎನ್ನುವುದು ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೂ ತಿಳಿದಿರುವ ಸತ್ಯ.
ಹಾಗಾದರೆ ಸೋಲಿನ ಹೊಣೆಯನ್ನು ಹೊರಬೇಕಾದವರು ಯಾರು? ಚುನಾವಣೆಯ ನೇತೃತ್ವವನ್ನು ಕೇಂದ್ರ ವರಿಷ್ಠರು ಯಡಿಯೂರಪ್ಪ ತಲೆಗೆ ಕಟ್ಟಿದ್ದರು. ತನ್ನನ್ನು ಆರೆಸ್ಸೆಸ್ ಬಳಸಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಿದ್ದ ಕಾರಣ, ಪೂರ್ಣ ಪ್ರಮಾಣದಲ್ಲಿ ಯಡಿಯೂರಪ್ಪ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಅದಾಗಲೇ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದ ಯಡಿಯೂರಪ್ಪ ಹೆಗಲಿಗಂತೂ ಸೋಲಿನ ಹೊಣೆಯನ್ನು ಹೊರಿಸುವಂತಿಲ್ಲ. ಚುನಾವಣೆಯಲ್ಲಿ ದೊಡ್ಡ ಮಟ್ಟದ ಹಸ್ತಕ್ಷೇಪಗಳನ್ನು ಮಾಡಿದ ಆರೆಸ್ಸೆಸ್‌ನ ಒಳಗಿನ ಬ್ರಾಹ್ಮಣ್ಯ ಲಾಬಿಯೇ ಬಿಜೆಪಿಯ ಸೋಲಿಗೆ ಮುಖ್ಯ ಕಾರಣ ಎನ್ನುವುದನ್ನು ರಾಜಕೀಯ ಪಂಡಿತರು ಈಗಾಗಲೇ ವಿಶ್ಲೇಷಿಸಿದ್ದಾರೆ. ಶೆಟ್ಟರ್, ಸವದಿ ಮೊದಲಾದ ಹಿರಿಯರನ್ನು ಬದಿಗೆ ತಳ್ಳಿ, ಜೋಶಿ, ಸಂತೋಷ್‌ರಂತಹ ನಾಯಕರನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿರುವುದು ಬಿಜೆಪಿಯ ಸೋಲಿಗೆ ಕಾರಣವಾಯಿತು ಎನ್ನುವುದನ್ನು ಹಲವು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ, ಸೋಲಿನ ಹೊಣೆಯನ್ನು ಹೊರಬೇಕಾಗಿರುವುದು ಆರೆಸ್ಸೆಸ್ ಮುಖಂಡರು. ಮುಖ್ಯವಾಗಿ ಪ್ರಹ್ಲಾದ್ ಜೋಶಿ, ಸಂತೋಷ್ ಬಿಜೆಪಿಯ ಸೋಲಿಗೆ ಕಾರ್ಯಕರ್ತರ ಜೊತೆಗೆ ಕ್ಷಮೆಯಾಚಿಸಬೇಕು. ಬಿಜೆಪಿ ಆಡಳಿತ ಕಾಲದಲ್ಲಿ ಶೇ. 40 ಕಮಿಷನ್ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಭ್ರಷ್ಟ ಸರಕಾರವನ್ನು ಪ್ರೋತ್ಸಾಹಿಸಿದ ಕೇಂದ್ರ ವರಿಷ್ಠರು ಕೂಡ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಬೇಕು.
ಬಿಜೆಪಿಯನ್ನು ಗೆಲ್ಲಿಸುವ ದೃಷ್ಟಿಯಿಂದಲೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪದೇ ಪದೇ ರಾಜ್ಯದಲ್ಲಿ ಪ್ರವಾಸ ಗೈದಿದ್ದರು. ರೋಡ್ ಶೋಗಳನ್ನು ನಡೆಸಿದ್ದರು. ಅಮಿತ್ ಶಾ ಅವರಂತೂ ದ್ವೇಷ ಭಾಷಣಗಳ ಮೂಲಕ ಚುನಾವಣೆಯಲ್ಲಿ ಸುದ್ದಿಯಾದರು. ಮೋದಿ ಪ್ರವಾಸ, ಅವರ ನೇತೃತ್ವದ ರೋಡ್‌ಶೋ, ಸಮಾವೇಶಗಳು ಚುನಾವಣೆಯ ಫಲಿತಾಂಶವನ್ನು ಬದಲಿಸುತ್ತದೆ ಎಂದು ಬಿಜೆಪಿ ನಾಯಕರು, ಆರೆಸ್ಸೆಸ್ ವರಿಷ್ಠರು ನಂಬಿದ್ದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಬಿಜೆಪಿಯ ಸೋಲಿನ ಪ್ರಮುಖ ಹೊಣೆಗಾರರು. ಸೋಲನ್ನು ನಳಿನ್‌ಕುಮಾರ್ ಕಟೀಲು ತಲೆಗೆ ಕಟ್ಟಿ ಕೇಶವಕೃಪಾದಲ್ಲಿ ಅವಿತುಕೊಳ್ಳುವ ಬದಲು, ಸೋಲಿನ ನಿಜವಾದ ಕಾರಣಗಳ ಕುರಿತಂತೆ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಬೇಕು.
ಜನರಿಗೆ ಬೇಕಾಗಿದ್ದುದು ಶಾಂತಿ, ನೆಮ್ಮದಿಯ ಬದುಕು. ಆದರೆ ಬಿಜೆಪಿಯ ಆಡಳಿತ ಕಾಲದಲ್ಲಿ ಶಾಂತಿ, ನೆಮ್ಮದಿಯನ್ನು ಕೆಡಿಸುವುದೇ ಆಡಳಿತವೆಂದು ಅಧಿಕಾರದಲ್ಲಿದ್ದ ನಾಯಕರು ಭಾವಿಸಿದರು. ಕೊರೋನ, ಲಾಕ್‌ಡೌನ್‌ನಿಂದ ನೆಲಕಚ್ಚಿದ್ದ ಶಿಕ್ಷಣ ಕ್ಷೇತ್ರವನ್ನು ಮೇಲೆತ್ತುವ ಪ್ರಯತ್ನ ನಡೆಸುವ ಬದಲು ಅಲ್ಲಿ ‘ಹಿಜಾಬ್’ ಹೆಸರಿನಲ್ಲಿ ಸರಕಾರವೇ ವಿದ್ಯಾರ್ಥಿಗಳ ಬದುಕಿಗೆ ಕೊಳ್ಳಿ ಇಟ್ಟಿತು. ಪಠ್ಯ ಪುಸ್ತಕಗಳನ್ನು ತಿರುಚುವ ಕೆಲಸಕ್ಕಿಳಿದು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿತು. ಪಠ್ಯ ಪುಸ್ತಕಗಳ ಸ್ವರೂಪವನ್ನೇ ಕೆಡಿಸಿ ಹಾಕಿತು. ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುತ್ತಿದ್ದ ವ್ಯಾಪಾರಿಗಳಿಗೆ ‘ಹಲಾಲ್’ ‘ಜಟ್ಕಾ’ ಹೆಸರಿನಲ್ಲಿ ಕಿರುಕುಳ ನೀಡಿತು. ಲವ್‌ಜಿಹಾದ್‌ನ ಹೆಸರಲ್ಲಿ ಜನರ ನಡುವೆ ದ್ವೇಷಗಳನ್ನು ಬಿತ್ತಿತು. ಮರೆಯಲ್ಲಿ ಶೇ. 40 ಕಮಿಷನ್‌ನ ಭ್ರಷ್ಟ ಆಡಳಿತ ವಿಜೃಂಭಿಸಿತು. ಇವೆಲ್ಲದರ ಅಂತಿಮ ಫಲ, ಈ ಬಾರಿಯ ಚುನಾವಣಾ ಫಲಿತಾಂಶ. ಇದೀಗ ನೂತನ ಸರಕಾರ ಅಧಿಕಾರಕ್ಕೆ ಬಂದಿದೆ.
ಬಿಜೆಪಿ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುತ್ತಾ, ಸರಕಾರದ ಜನಪರ ಕಾರ್ಯಕ್ರಮಗಳಿಗೆ ಅಡ್ಡಗಾಲು ಹಾಕುವ ಬದಲು, ತಾಳ್ಮೆಯಿಂದ ಸರಕಾರದ ಕಾರ್ಯ ಚಟುವಟಿಕೆಗಳನ್ನು ಗಮನಿಸಬೇಕು. ಸಾಧ್ಯವಾದರೆ ಸರಕಾರದ ಅಭಿವೃದ್ಧಿ ಪರ ಕಾರ್ಯಗಳಿಗೆ ಕೈಜೋಡಿಸಬೇಕು. ಇದೇ ಸಂದರ್ಭದಲ್ಲಿ ಸರಕಾರ ವಿಫಲವಾದರೆ ಅದಕ್ಕೆ ಮಾರ್ಗದರ್ಶನ ಮಾಡಬೇಕು. ಜೊತೆಗೆ ಸರಿ, ತಪ್ಪುಗಳನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಇದಕ್ಕಾಗಿ ಅದು ಮೊತ್ತ ಮೊದಲಾಗಿ ಅದು ಒಬ್ಬ ಮುತ್ಸದ್ದಿ ನಾಯಕನನ್ನು ಗುರುತಿಸುವುದು ಅತ್ಯಗತ್ಯ