ಮುನ್ನೆಲೆಗೆ ರಾಜದಂಡ: ಹಿಮ್ಮುಖ ಚಲನೆಯ ಸಂಕೇತ
ಹೊಸ ಸಂಸತ್‌ಭವನ ಉದ್ಘಾಟನೆಗೊಂಡಿದೆ; ಜೊತೆಗೆ ಸಾಕಷ್ಟು ವಿರೋಧಾಭಾಸಗಳನ್ನೂ ಹುಟ್ಟುಹಾಕಿದೆ. ಮುಖ್ಯವಾಗಿ, ಮ್ಯೂಸಿಯಂನಲ್ಲಿದ್ದ ರಾಜದಂಡವನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿದ್ದು ಹಲವಾರು ಅನುಮಾನಗಳಿಗೆ, ಗೊಂದಲಗಳಿಗೆ, ಮುಂದೆ ಎದುರಾಗಬಹುದಾದ ಸವಾಲುಗಳಿಗೆ ಕಾರಣವಾಗಿದೆ. ಹಿಂದೆ ರಾಜಪ್ರಭುತ್ವದಲ್ಲಿ ಅಧಿಕಾರ ಹಸ್ತಾಂತರ ಎಂಬುದು, ಸಾಮಾನ್ಯವಾಗಿ ಒಬ್ಬ ರಾಜನಿಂದ ಆತನ ಬಹುತೇಕ ಆತನ ಮಗನಿಗೆ, ಕೆಲವೊಮ್ಮೆ ಅಥವಾ ಬೇರೆ ವಾರಸುದಾರನಿಗೆ ಸಹಜವಾಗಿ ನಡೆಯುತ್ತಿತ್ತು. ಆಗ ಮಾತ್ರ ಈ ಪಟ್ಟಾಭೀಷೇಕ ಮತ್ತು ಇತರ ಧಾರ್ಮಿಕ ಆಚರಣೆಗಳು ನಡೆದು, ರಾಜದಂಡವನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಗುತ್ತಿತ್ತು. ಯುದ್ಧದಲ್ಲಿ ಜಯಿಸಿ ರಾಜ್ಯ ಸಂಪಾದನೆಯಾದರೆ, ಗೆದ್ದ ರಾಜರ ಸಂಪ್ರದಾಯಕ್ಕನುಗುಣವಾಗಿ ಪಟ್ಟಾಭಿಷೇಕ ನಡೆಯುತ್ತಿತ್ತೇ ಹೊರತು, ಸೋತ ರಾಜ ರಾಜದಂಡ ನೀಡಿ ಅಧಿಕಾರ ಹಸ್ತಾಂತರಿಸುವ ಪ್ರಮೇಯವೇ ಇರಲಿಲ್ಲ.
ಪ್ರಸಕ್ತ ಭಾರತದಲ್ಲಿ ರಾಜಪ್ರಭುತ್ವವಿಲ್ಲ. ಕಳೆದ 75 ವರ್ಷಗಳಿಂದಲೂ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ಸಂಸದರ ಆಯ್ಕೆಯ ಮೇರೆಗೆ ಒಬ್ಬರು ಪ್ರಧಾನಿಯಾಗಿ ನೇಮಕವಾಗುತ್ತಾರೆ. ಇಲ್ಲಿ ಅಧಿಕಾರವನ್ನು ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವುದು ಪ್ರಜೆಗಳೇ ಹೊರತು, ಸ್ವತಃ ಪ್ರಧಾನಿಯಲ್ಲ. ಆದ್ದರಿಂದ ಇಲ್ಲಿ ರಾಜದಂಡದ ಅವಶ್ಯಕತೆಯೇ ಇಲ್ಲ. ಆಗಸ್ಟ್ 15, 1947 ಸ್ವಾತಂತ್ರ್ಯದ ದಿನ, ಬ್ರಿಟಿಷ್ ಆಡಳಿತದಿಂದ ಭಾರತದ ನಿಯೋಜಿತ ಪ್ರಧಾನಿಗೆ ಅಧಿಕಾರ ಹಸ್ತಾಂತರ ಎಂಬ ಪ್ರಕ್ರಿಯೆಯಲ್ಲಿ, ಹೇಗೋ ಈ ರಾಜದಂಡ ಜವಾಹರಲಾಲ್ ನೆಹರೂ ಅವರ ಕೈ ಸೇರುತ್ತದೆ. ಅದನ್ನು ಬ್ರಿಟಿಷ್ ಆಡಳಿತದ ಮುಖ್ಯಸ್ಥ ಮೌಂಟ್ ಬ್ಯಾಟನ್ ನೆಹರೂ ಅವರಿಗೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ನೀಡಿದರು ಎಂಬುದರಲ್ಲಿಯೇ ಗೊಂದಲಗಳಿವೆ. ಅದನ್ನು ಒಂದು ಧಾರ್ಮಿಕ ಪಂಗಡದ ಗುರುಗಳು ನೆಹರೂ ಅವರಿಗೆ ನೀಡಿದ್ದು ಎನ್ನಲಾಗುತ್ತಿದೆ. ಅದೇನೇ ಇದ್ದರೂ, ತಮ್ಮ ಕೈಸೇರಿದ್ದ ರಾಜದಂಡವನ್ನು ಇತಿಹಾಸ ಸೇರಿದ ರಾಜಪ್ರಭುತ್ವದ ಸಂಕೇತವಾಗಿ, ಮ್ಯೂಸಿಯಂನಲ್ಲಿ ಇರಿಸಿದ್ದು ಅಂದಿನ ಆಡಳಿತದ ಪ್ರಬುದ್ಧತೆಯ ನಡವಳಿಕೆ ಎನ್ನಬಹುದು. ಆದರೆ, ಈಗ ಅದು ಮತ್ತೆ ಸಂಸತ್ ಪ್ರವೇಶಿಸಿದೆ.
ಇಲ್ಲಿ ಮುಖ್ಯ ಪ್ರಶ್ನೆಯೆಂದರೆ, ರಾಜದಂಡ ಸಂಸತ್‌ನಲ್ಲಿ ಕೇವಲ ಪ್ರದರ್ಶನಕ್ಕಾಗಿ ಪ್ರತಿಷ್ಠಾಪಿತವಾಗಿದೆಯೇ ಎಂಬುದು. ಇಷ್ಟೇ ಆಗಿದ್ದರೆ ಯಾವ ಸಮಸ್ಯೆಯೂ ಇಲ್ಲ. ಆದರೆ, ಅದನ್ನು ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಭಾಗವಾಗಿ ಸಂಸತ್‌ನಲ್ಲಿ ಇಟ್ಟುಕೊಂಡರೆ ಮಾತ್ರ ಇಲ್ಲದ ಸಮಸ್ಯೆಗಳು ಉದ್ಭವವಾಗುತ್ತವೆ. ಅಧಿಕಾರಕ್ಕೇರುವ ಪ್ರಧಾನಿಯ ಇಚ್ಛೆಗೆ ಅನುಗುಣವಾಗಿ ಧಾರ್ಮಿಕ ಪಂಗಡ, ಸಂಪ್ರದಾಯಗಳು ಆಚರಣೆಗೆ ಬರುವ ಅಪಾಯವಿದೆ. ರಾಜಪ್ರಭುತ್ವ, ರಾಜಗುರು ಇಂತಹ ನಡವಳಿಕೆಗಳು ಭಾರತದ ಹಿಮ್ಮುಖ ಚಲನೆಗೆ ಅನಗತ್ಯ ರಹದಾರಿ ಕಲ್ಪಿಸುತ್ತವೆಯಷ್ಟೆ.
ಇನ್ನು ಈಗಿರುವ ರಾಜದಂಡ ಭಾರತದ ಬಹುತ್ವವನ್ನು ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆ. ರಾಜಕೀಯವಾಗಿ ಚೋಳ ರಾಜವಂಶವನ್ನು, ಧಾರ್ಮಿಕವಾಗಿ ಶೈವ ಸಂಪ್ರದಾಯವನ್ನು, ಭಾಷಿಕವಾಗಿ ತಮಿಳನ್ನು ಅದು ಪ್ರತಿನಿಧಿಸುತ್ತಿದೆ. ಮುಂದೆ, ಬೇರೆ ಧಾರ್ಮಿಕ ಪಂಗಡಗಳು ತಮ್ಮ ಲಾಂಛನಗಳನ್ನು ಸೇರಿಸಲು ಕೇಳಬಹುದು. ಹಿಂದಿಯನ್ನು ಮಾತ್ರ ರಾಷ್ಟ್ರಭಾಷೆಯೆನ್ನುವ ಅಲ್ಪದೃಷ್ಟಿಯವರು ಹಿಂದಿಯ, ದೇವಭಾಷೆಯ ಕಾಲ್ಪನಿಕರು ಸಂಸ್ಕೃತದ ಬರಹಗಳನ್ನು, ಬೇರೆ ಬೇರೆ ಭಾಷೆಯವರು ಅವರವರ ಭಾಷೆಗಳನ್ನು ರಾಜದಂಡದ ಮೇಲೆ ಬೇಕೆನ್ನಬಹುದು. ವರ್ತಮಾನದ ಭಾರತದಲ್ಲಿ ಇವೆಲ್ಲವೂ ಅನಿರೀಕ್ಷಿತವೂ ಅಲ್ಲ; ಅತಿರೇಕಗಳೂ ಅಲ್ಲ ಎಂಬುದು ಸರ್ವವಿಧಿತ.
ಹೊಸ ಸಂಸತ್ ಭವನದಲ್ಲಿ ರಾಜದಂಡದ ಸ್ಥಾನವನ್ನು ನಮ್ಮ ರಾಷ್ಟ್ರೀಯ ಲಾಂಛನ(ಸಿಂಹಸ್ತಂಭ)ವೇ ಸಶಕ್ತವಾಗಿ, ಅರ್ಥಪೂರ್ಣವಾಗಿ ತುಂಬುತ್ತದೆಯಲ್ಲವೆ? ಅದಕ್ಕೊಂದು ಪರ್ಯಾಯವೂ ಪ್ರತಿಸ್ಪರ್ಧಿಯೂ ಎನ್ನುವಂತೆ, ಈ ರಾಜದಂಡ ಅಲ್ಲಿರಬೇಕೆ? ರಾಷ್ಟ್ರಗೀತೆ ‘ಜನಗಣಮನ’ಕ್ಕೆ ಪ್ರತಿಸ್ಪರ್ಧಿ ಎಂಬಂತೆ ‘ವಂದೇ ಮಾತರಂ’ ಗೀತೆಯನ್ನು ಬಿಂಬಿಸಿದ ಉದಾಹರಣೆಗಳು ಕಣ್ಣಮುಂದಿರುವಾಗ, ಇಂತಹ ಹಿಮ್ಮುಖ ಚಲನೆಯ ಪ್ರಕ್ರಿಯೆಗಳು ಕಾರ್ಯಗತವಾಗಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇಂತಹ ಅನಪೇಕ್ಷಿತ, ಅನಗತ್ಯ ವಿಷಯಗಳನ್ನು ನಿಭಾಯಿಸಲು ಆಡಳಿತಕ್ಕಿರಬೇಕಾಗಿದ್ದ ಪ್ರಬುದ್ಧತೆ ಇಲ್ಲವಾಗಿದ್ದು, ವರ್ತಮಾನದ ಭಾರತದ ದುರಂತ!