'ಗ್ಯಾರಂಟಿ' ವಿಚಾರದಲ್ಲಿ ಕಾಂಗ್ರೆಸ್ ಮಾತು ತಪ್ಪಿದರೆ ‘ವಚನ ಭ್ರಷ್ಟ ಪೋಸ್ಟರ್ ’ ರಿಲೀಸ್: ಬಿಜೆಪಿ ಎಚ್ಚರಿಕೆ
ಬೆಂಗಳೂರು, ಜೂ. 1: ‘ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ವಿಚಾರದಲ್ಲಿ ನುಡಿದಂತೆ ನಡೆಯದೆ ಇದ್ದರೆ ನಾವು ನಿಮಗೆ ವಚನಭ್ರಷ್ಟ ಪಟ್ಟ ಕಟ್ಟುತ್ತೇವೆ. ವಚನಭ್ರಷ್ಟ ಪೋಸ್ಟರ್ ರಿಲೀಸ್ ಮಾಡುತ್ತೇವೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಎಚ್ಚರಿಸಿದ್ದಾರೆ.
ಗುರುವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಜಾರಿ ಸಂಬಂಧ ಸಂಪುಟ ಸಭೆ ನಾಳೆ ನಡೆಯಲಿದೆ. ಈಗಾಗಲೇ ಸರಕಾರ ರಚನೆ ಆಗುವ ಮೊದಲು, ಅಧಿಕಾರಕ್ಕೆ ಬರುವ ಮೊದಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕರ್ನಾಟಕದ ಜನತೆಗೆ ಏನು ಮಾತು ಕೊಟ್ಟಿದ್ದಾರೋ, ವಚನ ನೀಡಿದ್ದಾರೋ ಆ ಪ್ರಕಾರ ನಡೆಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.
ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ಈಗ ಏನೇನೋ ಷರತ್ತು ಹಾಕುತ್ತಿದ್ದಾರೆ. ಅಂದರೆ ಅದು ವಚನಭ್ರಷ್ಟತೆ. ಎಲ್ಲ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ., ಎಲ್ಲ ನಿರುದ್ಯೋಗಿ ಡಿಪ್ಲೊಮಾ ಪಡೆದವರಿಗೆ 1,500 ರೂ.ಕೊಡುವುದಾಗಿ ತಿಳಿಸಿದ್ದರು. ಈಗ ಕಂಡಿಷನ್ ಹಾಕುತ್ತಿದ್ದು, ವಚನಭ್ರಷ್ಟತೆ ಕಾಣುತ್ತಿದೆ. 200 ಯೂನಿಟ್ ಕರೆಂಟ್ ಉಚಿತ. ‘ಮಹದೇವಪ್ಪ ನಿನ್ಗೂ ಫ್ರೀ. ನನಗೂ ಫ್ರೀ’ ಎಂದಿದ್ದರು. ಅದರಂತೆ ನಡೆಯದಿದ್ದರೆ ವಚನಭ್ರಷ್ಟತೆ ಎಂದು ಆರೋಪಿಸಿದರು.
‘10 ಕೆಜಿ ಅಕ್ಕಿ ವಿಚಾರದಲ್ಲೂ ಈಗ ಕೇಂದ್ರವನ್ನು ಕೇಳುವುದಾಗಿ ಹೇಳುತ್ತಿದ್ದಾರೆ. ಮುಂಚೆ ಇದನ್ನು ಹೇಳಿದ್ದರೇ ಎಂದು ಕೇಳಿದರು. ನಿಮ್ಮ ಪ್ರಣಾಳಿಕೆ, ಭಾಷಣ, ಘೋಷಣೆಯಂತೆ ನಡೆಯಬೇಕು. ಅತ್ತೆಗೂ, ಸೊಸೆಗೂ ಉಚಿತ ಬಸ್ ಪ್ರಯಾಣ. ಹಾಸನಕ್ಕಾದ್ರೋ ಹೋಗಿ, ಧರ್ಮಸ್ಥಳಕ್ಕಾದ್ರೂ ಹೋಗಿ ಎಂದಿದ್ದರು. ಈಗ 60 ಕಿಮೀಗೆ ಮಿತಿ ಹೇರುವ ಮಾತನಾಡುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 85 ಸಾವಿರ ಕೋಟಿ ರೂ.ವೆಚ್ಚ ಆಗಲಿದೆ. ಇದನ್ನು ಎಲ್ಲಿಂದ ತರುತ್ತೀರಾ? ಈ ಹಣ ಹೇಗೆ ಹೊಂದಿಸುತ್ತೀರಾ? ಕೆಎಸ್ಸಾರ್ಟಿಸಿ ಈಗಾಗಲೇ ನಷ್ಟದಲ್ಲಿದೆ. ವೇತನ, ಡೀಸೆಲ್, ಬಸ್ ಪಂಕ್ಚರ್‍ಗೂ ದುಡ್ಡಿಲ್ಲದ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಉಚಿತ ಬಸ್ ಪ್ರಯಾಣ ಎಂದಿದ್ದೀರಿ ಎಂದು ಅವರು ಪ್ರಶ್ನೆ ಮುಂದಿಟ್ಟರು.