ಗುಣಮಟ್ಟದ ಶಿಕ್ಷಣವೂ ನೂತನ ಸರಕಾರದ 'ಗ್ಯಾರಂಟಿ'ಗಳಲ್ಲಿ ಸೇರ್ಪಡೆಯಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಜೂನ್ ತಿಂಗಳು ಎನ್ನುವುದು ನೂತನ ಸರಕಾರಕ್ಕೆ ಬಿತ್ತನೆಯ ಕಾಲ. ಶುಕ್ರವಾರ ಸಂಪುಟ ಸಭೆಯಲ್ಲಿ ಹತ್ತು ಹಲವು ಮಹತ್ವದ ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳಲಿದೆ. ಆ ನಿರ್ಧಾರಗಳ ತಳಹದಿಯ ಮೇಲೆ ಈ ರಾಜ್ಯದ ಭವಿಷ್ಯ ನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬಿತ್ತನೆಯಲ್ಲಿ ಯಶಸ್ವಿಯಾದದ್ದೇ ಆದರೆ, ಭವಿಷ್ಯದಲ್ಲಿ ನಾಡು ಒಳ್ಳೆಯ ಕೊಯ್ಲಿನ ದಿನಗಳನ್ನು ನೋಡಬಹುದು. ಚುನಾವಣೆಯ ಸಂದರ್ಭದಲ್ಲಿ ಪಕ್ಷವು ನೀಡಿರುವ ಐದು ಗ್ಯಾರಂಟಿಗಳ ಗತಿಯೇನಾಗುತ್ತದೆ ಎನ್ನುವುದು ಕೂಡ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ. ಹಿಂದಿನ ಬಿಜೆಪಿ ಸರಕಾರ ಭ್ರಷ್ಟಾಚಾರಗಳ ಮೂಲಕ ಗಬ್ಬೆಬ್ಬಿಸಿದ ನೆಲವನ್ನು ಹೊಸದಾಗಿ ಉತ್ತು, ಗೊಬ್ಬರ ಸುರಿದು, ಬೀಜ ಬಿತ್ತಿ ಬೆಳೆ ತೆಗೆಯುವುದೆಂದರೆ ಸಣ್ಣ ವಿಷಯವಲ್ಲ. ಮೊತ್ತ ಮೊದಲಾಗಿ ಹಿಂದಿನ ಸರಕಾರ ಕೃಷಿಯ ಹೆಸರಿನಲ್ಲಿ ಬಿತ್ತಿ ಬೆಳೆದ ಕಳೆಗಳನ್ನು ಕಿತ್ತು ಎಸೆಯುವ ಮಹತ್ವದ ಹೊಣೆಗಾರಿಕೆ ಸರಕಾರದ ಮೇಲಿದೆ. ಆ ಕಳೆಗಳನ್ನು ಕಿತ್ತು ಎಸೆದ ಬಳಿಕ ಮತ್ತೆ ಹೊಸದಾಗಿ ಏನನ್ನು, ಎಲ್ಲಿ, ಎಷ್ಟು ಬಿತ್ತ ಬೇಕು ಎನ್ನುವುದರ ಬಗ್ಗೆ ಸರಕಾರ ಯೋಚನೆ ಮಾಡಬೇಕು.
ಜೂನ್ ತಿಂಗಳು ಶಾಲೆ ಆರಂಭವಾಗುವ ಸಮಯ. ಶಾಲೆಯ ಬಾಗಿಲು ಮತ್ತು ನೂತನ ಸರಕಾರದ ಸಂಪುಟದ ಬಾಗಿಲು ಜೊತೆ ಜೊತೆಯಾಗಿಯೇ ತೆರೆದಿವೆ. ಒಂದೆಡೆ ಹೊರಗೆ ಗದ್ದೆಯಲ್ಲಿ ರೈತರು ಭೂಮಿ ಉಳುವುದಕ್ಕೆ ಸಿದ್ಧತೆ ನಡೆಸುತ್ತಿರುವಾಗಲೇ, ಇತ್ತ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಚಿಂತನೆಗಳನ್ನು, ಆಲೋಚನೆಗಳನ್ನು ಉಳುವ ಕೆಲಸದಲ್ಲಿ ಶಿಕ್ಷಕರು ತೊಡಗುತ್ತಾರೆ. ಹೇಗೆ ಹೊಲ ಗದ್ದೆಗಳನ್ನು ಬೀಜ ಬಿತ್ತುವ ಮೊದಲು ಕಳೆ ತೆಗೆದು, ಗೊಬ್ಬರ ಹಾಕಿ ಸಿದ್ಧಗೊಳಿಸುತ್ತಾರೆಯೋ ಅದೇ ರೀತಿಯ ಸಿದ್ಧತೆ ಶಾಲೆ, ಕಾಲೇಜುಗಳಲ್ಲು ನಡೆಯುತ್ತವೆ. ನಮ್ಮ ಶಾಲಾ ಕಾಲೇಜುಗಳನ್ನು ಬಿತ್ತನೆಗೆ ಯೋಗ್ಯವಾದ ಗದ್ದೆಗಳಾಗಿ ಬದಲಿಸುವ ಸವಾಲು ಸರಕಾರದ ಮುಂದಿದೆ. ಅದಕ್ಕೆ ಮೊದಲು, ಈ ಹಿಂದಿನ ಸರಕಾರ ಶಾಲಾ ಕಾಲೇಜುಗಳಲ್ಲಿ ಬಿತ್ತಿ ಬೆಳೆದ ಕಳೆಗಳನ್ನು, ಕಳ್ಳಿ ಮುಳ್ಳುಗಳನ್ನು ಬೇರು ಸಮೇತ ಕಿತ್ತು ಹಾಕಬೇಕು. ಅದನ್ನು ಕಿತ್ತು ಹಾಕದೇ ಅದರ ಜೊತೆ ಜೊತೆಗೇ ಹೊಸ ಬೆಳೆಯನ್ನು ಬೆಳೆಯಲು ಮುಂದಾದರೆ ಫಸಲು ಆರೋಗ್ಯಪೂರ್ಣವಾಗಿರಲು ಸಾಧ್ಯವಿಲ್ಲ. ಆದುದರಿಂದ, ಮೊತ್ತ ಮೊದಲು, ಈ ಹಿಂದಿನ ಸರಕಾರ ತನ್ನ ರಾಜಕೀಯ ದುರುದ್ದೇಶಗಳಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ನಡೆಸಿದ ಹಸ್ತಕ್ಷೇಪಗಳನ್ನು ಸರಿಪಡಿಸಬೇಕು. ಇದರ ಜೊತೆಗೆ, ಲಾಕ್‌ಡೌನ್ ಕಾಲದಲ್ಲಿ ಕುಸಿದು ಹೋಗಿದ್ದ ಶೈಕ್ಷಣಿಕ ಗುಣಮಟ್ಟವನ್ನು ಮೇಲೆತ್ತಿ ನಿಲ್ಲಿಸುವುದಕ್ಕೆ ನೆರವಾಗಬೇಕು.
ಲಾಕ್‌ಡೌನ್ ಕಾಲದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಶಾಲೆಗಳಿಂದ ಹೊರ ತಳ್ಳಲ್ಪಟ್ಟರು. ಶಾಲೆಗಳು ವರ್ಷಗಳ ಕಾಲ ಮುಚ್ಚಲ್ಪಟ್ಟವು. ಇತ್ತ ಬಡವರ ಮಕ್ಕಳು ಆರ್ಥಿಕ ಒತ್ತಡಗಳಿಂದಾಗಿ ಅನಿವಾರ್ಯವಾಗಿ ದುಡಿಮೆಗೆ ಇಳಿಯಬೇಕಾಯಿತು. ಈ ಸಂದರ್ಭದಲ್ಲಿ ಘೋಷಣೆಯಾದ ಆನ್‌ಲೈನ್ ಶಿಕ್ಷಣ ದೊಡ್ಡ ಮಟ್ಟದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ತಾರತಮ್ಯವನ್ನು ಮಾಡಿತು. ಮೊಬೈಲ್, ಇಂಟರ್‌ನೆಟ್ ಇದ್ದವರಿಗಷ್ಟೇ ಶಿಕ್ಷಣ ಎನ್ನುವಂತಾಯಿತು. ನಗರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ನಡುವಿನ ಅಂತರವೂ ಹಿಗ್ಗಿತು. ಲಾಕ್‌ಡೌನ್ ಮುಗಿದ ಬಳಿಕವೂ ಈ ಅಂತರವನ್ನು ತುಂಬುವುದಕ್ಕೆ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಶಾಲೆತೊರೆದು ದುಡಿಮೆಗಿಳಿದ ಸಹಸ್ರಾರು ಮಕ್ಕಳು ಮತ್ತೆ ಶಾಲೆಯ ಮೆಟ್ಟಿಲನ್ನೇ ತುಳಿಯಲಿಲ್ಲ. ಅವರಲ್ಲಿ ವಿದ್ಯಾರ್ಥಿನಿಯರದು ದೊಡ್ಡ ಸಂಖ್ಯೆಯಾಗಿತ್ತು. ಇವರನ್ನೆಲ್ಲ ಮರಳಿ ಶಾಲೆಗೆ ಕರೆತರುವ ಮಹತ್ವದ ಹೊಣೆಗಾರಿಕೆ ಅಂದಿನ ಬಿಜೆಪಿ ಸರಕಾರದ ಮೇಲಿತ್ತು. ಆದರೆ ಆ ಹೊಣೆಯನ್ನು ನಿಭಾಯಿಸುವ ಬದಲು, ಶಾಲೆಗಳಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನೇ 'ಸಮವಸ್ತ್ರ'ದ ನೆಪದಲ್ಲಿ ಹೊರ ಹಾಕಿತು.
ಲಾಕ್‌ಡೌನ್ ಆನಂತರ ಶಾಲೆ, ಕಾಲೇಜುಗಳಿಗೆ ಮರಳಿ ಬರುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕೆ ಸರಕಾರ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಸಮವಸ್ತ್ರಕ್ಕಾಗಿ ಶಿಕ್ಷಣವಲ್ಲ, ಶಿಕ್ಷಣಕ್ಕಾಗಿ ಸಮವಸ್ತ್ರ ಎನ್ನುವುದನ್ನು ಮರೆತು, ಕೊರೋನ ಕಾಲದಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿತು. ತಲೆವಸ್ತ್ರವನ್ನು ಶಾಲೆಯೊಳಗೆ ಧರಿಸುವುದನ್ನು ವಿರೋಧಿಸಿ ನಿರ್ದಿಷ್ಟ ಧರ್ಮದ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಬಹಿಷ್ಕರಿಸಿತು. ಕೇಂದ್ರ ಸರಕಾರದ 'ಬೆೇಟಿ ಬಚಾವೋ, ಬೆೇಟಿ ಪಢಾವೋ' ಘೋಷಣೆಯ ಬಹುದೊಡ್ಡ ಅಣಕವಾಗಿತ್ತು ರಾಜ್ಯ ಸರಕಾರದ ನಿರ್ಧಾರ. ಇಷ್ಟೇ ಅಲ್ಲ, ಹಿಜಾಬ್‌ನ ಹೆಸರಲ್ಲಿ ಶಾಲೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರ ವಿರುದ್ಧ ಸಂಘಪರಿವಾರವನ್ನು ಎತ್ತಿ ಕಟ್ಟಿತು. ಸಚಿವರೊಬ್ಬರ ಕುಮ್ಮಕ್ಕಿನಲ್ಲಿ ಕೇಸರಿ ಶಾಲುಗಳನ್ನು ಧರಿಸಿದ ವಿದ್ಯಾರ್ಥಿಗಳು ತಮ್ಮದೇ ಶಾಲೆಗಳ ಮೇಲೆ ಕಲ್ಲುತೂರಾಟ ನಡೆಸಿದರು. ಸರಕಾರಿ ಶಾಲೆಗಳ ಮೇಲೆ ಸಮವಸ್ತ್ರದ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಾಕಲಾದ ಬಹಿಷ್ಕಾರವನ್ನು ಹಿಂದೆಗೆಯುವುದು ನೂತನ ಸರಕಾರದ ಮೊತ್ತ ಮೊದಲ ಕೆಲಸವಾಗಬೇಕಾಗಿದೆ.
ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅದನ್ನು ಸುಧಾರಿಸುವ ಬದಲಿಗೆ ಪಠ್ಯಗಳನ್ನು ವಿರೂಪಗೊಳಿಸುವ ಹೊಸ ಸಾಹಸವೊಂದಕ್ಕೆ ಹಿಂದಿನ ಸರಕಾರ ಕೈ ಹಾಕಿತು. ಶಿಕ್ಷಣ ತಜ್ಞರಲ್ಲದ, ಸಂಘಪರಿವಾರದ ಕೆಳದರ್ಜೆಯ ಕಾರ್ಯಕರ್ತರ ಕೈಗೆ ಶಾಲಾ ಪಠ್ಯಗಳನ್ನು ತಿದ್ದುವ ಹೊಣೆಗಾರಿಕೆಯನ್ನು ನೀಡಿತು. ಕುವೆಂಪು, ನಾರಾಯಣಗುರು ಮೊದಲಾದ ಮಹನೀಯರಿಗೆ ಪಠ್ಯಗಳಲ್ಲಿ ಅಪಚಾರವನ್ನು ಎಸಗಿತು. ಇತಿಹಾಸ ಪುಸ್ತಕಗಳನ್ನು ತನಗೆ ಬೇಕಾದಂತೆ ತಿದ್ದಿತು. 'ಬೌದ್ಧ ಧರ್ಮದ ಉಗಮಕ್ಕೆ ಕಾರಣವೇನು?' ಎನ್ನುವ ಪ್ರಶ್ನೆಯನ್ನೇ, ವೈದಿಕ ಶಕ್ತಿಗಳ ಭಾವನೆಗಳಿಗೆ ಧಕ್ಕೆಯಾಗುವ ನೆಪದಿಂದ ಕಿತ್ತು ಹಾಕಿತು. ಹೆಡಗೇವಾರ್‌ರಂತಹ ಸಂವಿಧಾನವಿರೋಧಿಗಳಿಗೆ, ಜಾತೀವಾದಿಗಳಿಗೆ ಪಠ್ಯದಲ್ಲಿ ಅವಕಾಶವನ್ನು ನೀಡಿತು. ಹಿಂದಿನ ಸರಕಾರ ಬಿತ್ತಿ ಬೆಳೆಸಿದ ಈ ಎಲ್ಲ ಕಳೆಗಳನ್ನು ಕಿತ್ತು ಹಾಕದೆ ಹೊಸತನ್ನು ಕಟ್ಟುವುದು ಸಾಧ್ಯವಿಲ್ಲದ ಮಾತು. ಆದುದರಿಂದ, ಹಿಂದಿನ ಸರಕಾರ ಪಠ್ಯ ಪುಸ್ತಕಗಳಲ್ಲಿ ಮಾಡಿದ ಎಲ್ಲ ಅನಾಹುತಗಳನ್ನು ಸರಿಪಡಿಸಿ, ಆಧುನಿಕ ದಿನಗಳಿಗೆ ಪೂರಕವಾಗುವಂತೆ ಹೊಸ ತಿದ್ದುಪಡಿಗಳನ್ನು ಮಾಡುವುದಕ್ಕಾಗಿ ಹಿರಿಯ ಶಿಕ್ಷಣ ತಜ್ಞರ ನೇತೃತ್ವದಲ್ಲಿ ತಂಡವನ್ನು ಸಿದ್ಧಪಡಿಸಬೇಕಾಗಿದೆ.
ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದಾಗಿ ಸಾಲು ಸಾಲಾಗಿ ಮುಚ್ಚುತ್ತಿರುವುದನ್ನು ನೂತನ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ಮಾಧ್ಯಮಗಳ ಬಗ್ಗೆ ಪೋಷಕರ ಕೀಳರಿಮೆಯೇ ಇದಕ್ಕೆ ಮುಖ್ಯ ಕಾರಣ ಎಂದು ಈಗಾಗಲೇ ಗುರುತಿಸಲಾಗಿದೆ. ಬದುಕಿನ ಭಾಷೆಯಾಗಿ ಇಂಗ್ಲಿಷ್ ಆದ್ಯತೆಯನ್ನು ಪಡೆಯುತ್ತಿರುವುದರಿಂದ, ಮಧ್ಯಮವರ್ಗ ಸಾಲ ಸೋಲ ಮಾಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಇಚ್ಛಿಸುತ್ತಿದೆ. ಕೇವಲ ಬಡವರ ಮಕ್ಕಳಷ್ಟೇ ಕನ್ನಡ ಮಾಧ್ಯಮವನ್ನು ಅವಲಂಬಿಸಬೇಕಾಗಿದೆ. ಸಹಜವಾಗಿಯೇ ಇದರಿಂದಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಶಾಲೆಗಳನ್ನು ಮುಚ್ಚಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತಿದೆ.
ಎಲ್ಲರಿಗೂ ಶಿಕ್ಷಣ ಎನ್ನುವ ಘೋಷಣೆಯನ್ನು ಈಡೇರಿಸುವುದು ಸರಕಾರಿ ಶಾಲೆಗಳ ಮುಖ್ಯ ಉದ್ದೇಶವಾಗಿರುವುದರಿಂದ, ಸರಕಾರಿ ಶಾಲೆಗಳಲ್ಲಿ ಕನ್ನಡ-ಇಂಗ್ಲಿಷ್ ಜೊತೆ ಜೊತೆಯಾಗಿ ಕಲಿಸುವ ಪ್ರಯತ್ನವನ್ನು ಮಾಡಬೇಕು. ಈಗಾಗಲೇ ಹಲವು ಸರಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಮಾರ್ಪಡಿಸಲಾಗಿದೆ. ಅವುಗಳಿಗೆ ಬೇಕಾದ ಶಿಕ್ಷಕರನ್ನು, ಮೂಲಭೂತ ಸೌಕರ್ಯಗಳನ್ನು ನೀಡಲು ಸರಕಾರ ವಿಶೇಷ ಅನುದಾನಗಳನ್ನು ನೀಡಬೇಕು. ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಉಚಿತ ಸಮಾನ ಶಿಕ್ಷಣ ಮತ್ತು ಆರೋಗ್ಯ ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಹೊಸದಾಗಿ ಸೇರ್ಪಡೆಯಾಗಬೇಕು. ಹತ್ತು ಕೆಜಿ ಅಕ್ಕಿ ಎಷ್ಟು ಮುಖ್ಯವೋ, ಎಲ್ಲರಿಗೂ ಶಿಕ್ಷಣವೂ ಅಷ್ಟೇ ಮುಖ್ಯ. ಇದನ್ನು ಸಂಪುಟ ಸಭೆಯಲ್ಲಿ ಸರಕಾರ ಗಂಭೀರವಾಗಿ ಪರಿಗಣಿಸಬೇಕು.