ಕೊಡಗಿನ ಪ್ರವಾಸಿ ತಾಣಗಳಲ್ಲಿ ಖಾಸಗಿ ವಾಹನಗಳ ಬಾಡಿಗೆಗೆ ನಿಷೇಧ
ಮಡಿಕೇರಿ ಜೂ.1 : ಕೊಡಗಿನ ಪ್ರವಾಸಿ ತಾಣಗಳಾದ ಮಾಂದಲ ಪಟ್ಟಿ, ಅಬ್ಬಿಫಾಲ್ಸ್ ಮೊದಲಾದೆಡೆಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳನ್ನು ಬಾಡಿಗೆಗೆ ಬಳಸಲು ಅವಕಾಶವಿಲ್ಲವೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ ಎಸ್.ಎನ್. ತಿಳಿಸಿದ್ದಾರೆ.
ಜಿಲ್ಲೆ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದೆ. ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಜಿಲ್ಲೆಗಾಗಮಿಸುವುದಲ್ಲದೆ, ಮಡಿಕೇರಿ ಸಮೀಪದ ಅಬ್ಬಿಫಾಲ್ಸ್, ಮಾಂದಲಪಟ್ಟಿ ಪ್ರದೇಶಗಳಿಗೆ ತೆರಳುತ್ತಾರೆ. ಇದನ್ನು ಬಳಸಿಕೊಂಡು ಹಲ ಖಾಸಗಿ ಜೀಪ್‍ಗಳನ್ನು ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಪ್ರಮಾಣ ಹೆಚ್ಚಾಗುತ್ತಾ ಸಾಗಿತ್ತು.
ಇತ್ತೀಚೆಗೆ ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ತೆರಳಿದ್ದ ಪ್ರವಾಸಿಗರ ಮೇಲೆ ಬಾಡಿಗೆ ಜೀಪ್ ಓಡಿಸುತ್ತಿದ್ದ ಮಂದಿ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮತ್ತು ಸಾರಿಗೆ ಪ್ರಾಧಿಕಾರಕ್ಕೆ ಬಂದ ದೂರಿನ ಹಿನ್ನೆಲೆಯಲ್ಲಿ ಪ್ರದೇಶಿಕ ಸಾರಿಗೆ ಅಧಿಕಾರಿ ಮಧುರ ಅವರು ತಮ್ಮ ಕಛೇರಿಯಲ್ಲಿ ಮಾಂದಲಪಟ್ಟಿ, ಅಬ್ಬಿಫಾಲ್ಸ್ ಪ್ರವಾಸಿ ತಾಣಗಳು ಬರುವ ಕೆ.ನಿಡುಗಣೆ ಪಮಚಾಯ್ತಿಯ ಅಧ್ಯಕ್ಷರು ಮತ್ತು ಖಾಸಗಿ ಜೀಪ್ ಮಾಲೀಕರುಗಳೊಂದಿಗೆ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳನ್ನು ಬಾಡಿಗೆ ವಾಹನಗಳನ್ನಾಗಿ ಪ್ರವಾಸಿತಾಣಗಳಲ್ಲಿ ಓಡಿಸಕೂಡದು. ಹಾಗೊಮ್ಮೆ ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಸಷ್ಟಪಡಿಸಿದರು.
ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಖಾಸಗಿ ಜೀಪ್‍ಗಳನ್ನು ಬಾಡಿಗೆಗೆ ಓಡಿಸಲು ಅವಕಾಶವಿಲ್ಲದೇ ಇರುವುದನ್ನು ವಾಹನ ಮಾಲೀಕರಿಗೆ ಮನದಟ್ಟು ಮಾಡಿದ ಮಧುರ ಅವರು, ಖಾಸಗಿ ಜೀಪ್‍ಗಳನ್ನು `ಸಾರಿಗೆ ವಾಹನ'ಗಳನ್ನಾಗಿ ಪರಿವರ್ತಿಸಿಕೊಂಡು ನಿಯಮಾನುಸಾರ ಉಪಯೋಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಖಾಸಗಿ ವಾಹನಗಳನ್ನು ಬಾಡಿಗೆ ವಾಹನಗಳನ್ನಾಗಿ ಪರಿವರ್ತನೆ ಮಾಡಲು ಅನುಸರಿಸಬೇಕಾದ ವಿಧಾನದ ಬಗ್ಗೆ ಮತ್ತು ಪಾವತಿಸಬೇಕಾಗುವ ಶುಲ್ಕ ಮತ್ತು ತೆರಿಗೆಯ ಬಗ್ಗೆಯೂ ಪೂರ್ಣ ಮಾಹಿತಿಯನ್ನು ಅವರು ಇದೇ ಸಂದರ್ಭ ಒದಗಿಸಿದರು.
ಅಗತ್ಯ ಸಹಕಾರ : ಖಾಸಗಿ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಪರಿವರ್ತಿಸಲು, ಸುಗಮವಾಗಿ, ಶೀಘ್ರವಾಗಿ, ನಿಯಮಾನುಸಾರ ಈ ಪ್ರದೇಶಿಕ ಸಾರಿಗೆ ಕಛೇರಿಯಿಂದ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುತ್ತದೆ. ವಾಹನಗಳ ಪರಿವರ್ತನೆಗೆ ಅರ್ಜಿಗಳನ್ನು ಸಲ್ಲಿಸುವವರಿಗೆ ಪ್ರಥಮ ಆದ್ಯತೆ ನೀಡಿ, ಅವರ ವಾಹನಗಳನ್ನು ಬಾಡಿಗೆ ವಾಹನಗಳನ್ನಾಗಿ ಮಾಡಿಕೊಡಲಾಗುವುದು. ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಕಾನೂನಿನಡಿ ಕ್ರಮ ಜರುಗಿಸಲಾಗುವುದೆಂದು ಮಧುರ ಅವರು ಸ್ಪಷ್ಟಪಡಿಸಿದರು.