ಐಪಿಎಲ್ ನಲ್ಲಿ ನಿಜವಾಗಿಯೂ ಗೆಲ್ಲುತ್ತಿರುವುದು ಯಾರು ?
ಸರಕಾರ ಜನಸಾಮಾನ್ಯರಿಂದ ಇನ್ನಷ್ಟು, ಮತ್ತಷ್ಟು ತೆರಿಗೆ ವಸೂಲಿ ಮಾಡಲು ಪ್ರತಿದಿನ ಬೇರೆ ಬೇರೆ ಉಪಾಯ ಹೂಡುತ್ತದೆ. ಬೇರೆ ಬೇರೆ ಹೆಸರಲ್ಲಿ ಪ್ರತ್ಯಕ್ಷ, ಪರೋಕ್ಷ ತೆರಿಗೆ ವಸೂಲಿ ಮಾಡುತ್ತದೆ. ಆದರೆ ಎಲ್ಲವೂ ವಾಣಿಜ್ಯಮಯವಾಗಿರುವ ಐಪಿಎಲ್ ಅನ್ನು ಆಯೋಜಿಸುತ್ತಿರುವ ಬಿಸಿಸಿಐ ಮಾತ್ರ ಸರಕಾರದ ದೃಷ್ಟಿಯಲ್ಲಿ ಕ್ರೀಡೆಯನ್ನು ಉತ್ತೇಜಿಸುವ ದತ್ತಿ ಸಂಸ್ಥೆ.
ಈಬಾರಿಯ ಐಪಿಎಲ್ ಮೊನ್ನೆ ಮುಗಿಯಿತು. ಅಹ್ಮದಾಬಾದ್ನಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಐಪಿಎಲ್ ಕಿರೀಟ ಧರಿಸಿತು. ಅಲ್ಲಿಗೆ ಐಪಿಎಲ್ಗೆ ಚೆನ್ನೈ ಹಾಗೂ ಧೋನಿಯೇ ನಿಜವಾದ ಕಿಂಗ್ಸ್ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಆದರೆ ಭಾರತೀಯರನ್ನು ಈ ಪರಿ ಆಕರ್ಷಿಸುವ ಐಪಿಎಲ್ನಲ್ಲಿ ನಿಜವಾಗಿಯೂ ಗೆಲ್ಲುತ್ತಿರುವುದು ಯಾರು? ನಾವು ನೀವು ಎಲ್ಲ ಕೆಲಸ ಬಿಟ್ಟು ನೋಡುವ ಕ್ರಿಕೆಟ್ನಿಂದ ನಿಜವಾಗಿ ಕೋಟಿ ಕೋಟಿ ಲಾಭ ಮಾಡಿಕೊಳ್ಳುತ್ತಿರುವವರು ಯಾರು?
ಅದಕ್ಕೆ ಉತ್ತರ - ಐಪಿಎಲ್ನ ಸ್ಥಾಪಕ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂದರೆ ಬಿಸಿಸಿಐ. ಭಾರತೀಯ ಎಂದು ಹೆಸರಲ್ಲೇನೋ ಇದೆ. ಆದರೆ ಇದೇನೂ ಸರಕಾರಿ ಸಂಸ್ಥೆಯಲ್ಲ. ಬದಲಾಗಿ ಇದೊಂದು ಪಕ್ಕಾ ಖಾಸಗಿ ಸಂಸ್ಥೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಬಿಸಿಸಿಐ ಕೋಟಿಗಟ್ಟಲೆ ರೂ. ಆದಾಯ ಗಳಿಸುತ್ತದೆ. ಆದರೆ ತನ್ನ ಬಹುಕೋಟಿ ಗಳಿಕೆಯ ಮೇಲೆ ಬಿಸಿಸಿಐ ತೆರಿಗೆ ಪಾವತಿಸುತ್ತದೆಯೇ? ಇಲ್ಲ. ಐಪಿಎಲ್ನ ಕೋಟಿಗಟ್ಟಲೆ ಆದಾಯಕ್ಕೆ ನಯಾಪೈಸೆ ತೆರಿಗೆಯನ್ನೂ ಅದು ಪಾವತಿಸುವುದಿಲ್ಲ. ಇಷ್ಟೆಲ್ಲ ಕೋಟಿ ಆದಾಯ ಪಡೆಯುವ ಅದು ಹೇಗೆ ತೆರಿಗೆ ತಪ್ಪಿಸಿಕೊಳ್ಳುತ್ತಿದೆ?
ಬಿಸಿಸಿಐ ಪ್ರಕಾರ, ಅದು ಮಾಡುತ್ತಿರುವುದು ವಾಣಿಜ್ಯ ಚಟುವಟಿಕೆ ಅಲ್ಲವೇ ಅಲ್ಲ. ಬದಲಾಗಿ ಕ್ರೀಡೆಯನ್ನು, ಕ್ರಿಕೆಟ್ ಅನ್ನು ಉತ್ತೇಜಿಸುವ ಚಟುವಟಿಕೆ. ಹಾಗಾಗಿ ಅದಕ್ಕೆ ತೆರಿಗೆ ಹಾಕಬಾರದಂತೆ.
ನವೆಂಬರ್ 2021ರಲ್ಲಿ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಬಿಸಿಸಿಐನ ಈ ವಾದವನ್ನು ಎತ್ತಿಹಿಡಿಯಿತು. ಐಪಿಎಲ್ ಮೂಲಕ ಬರುವ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಹೇಳಿತು. ಕ್ರಿಕೆಟ್ ಅನ್ನು ಉತ್ತೇಜಿಸಲು ಬಳಸುವವರೆಗೆ ಐಪಿಎಲ್ ಲಾಭಕ್ಕೆ ತೆರಿಗೆ ವಿನಾಯಿತಿ ಪಡೆಯಲು ಬಿಸಿಸಿಐಗೆ ಅವಕಾಶ ನೀಡಿತು.
ಬಿಸಿಸಿಐಗೆ ತೆರಿಗೆ ವಿನಾಯಿತಿ ಇದ್ದರೂ, ಐಪಿಎಲ್ನಲ್ಲಿ ಭಾಗವಹಿಸುವ ಆಟಗಾರರು ತಮ್ಮ ಗಳಿಕೆಯ ಮೇಲೆ ತೆರಿಗೆ ಕಟ್ಟಲೇಬೇಕು. ಇದೊಂದು ರೀತಿಯ ದ್ವಂದ್ವ. ಇರಲಿ.
2008ರಲ್ಲಿ ಐಪಿಎಲ್ ಅನ್ನು ಪರಿಚಯಿಸುವ ಮೊದಲು, ಬಿಸಿಸಿಐ ಅನ್ನು ದತ್ತಿ ಸಂಸ್ಥೆ ಎಂದು ಪರಿಗಣಿಸಲಾಗಿತ್ತು. ಹಾಗಾಗಿ ಅದು ತೆರಿಗೆ ವಿನಾಯಿತಿ ಪಡೆದಿತ್ತು. ಆದರೆ ಐಪಿಎಲ್ ಬಂದ ನಂತರ ಆದಾಯ ತೆರಿಗೆ ಇಲಾಖೆ ತನ್ನ ನಿಲುವನ್ನು ಬದಲಾಯಿಸಿತು. ಅದನ್ನು ವಾಣಿಜ್ಯ ಚಟುವಟಿಕೆ ಎಂದು ವರ್ಗೀಕರಿಸಿತು. ಈ ಬದಲಾವಣೆಯಿಂದಾಗಿ ಬಿಸಿಸಿಐ ತೆರಿಗೆ ಪಾವತಿಸಬೇಕಾಯಿತು. 2007-08ರ ಆರ್ಥಿಕ ವರ್ಷದಿಂದ ಸರಿಸುಮಾರು 3,500 ಕೋಟಿ ರೂಪಾಯಿಗಳನ್ನು ಬಿಸಿಸಿಐ ತೆರಿಗೆಯಾಗಿ ಪಾವತಿಸಿದೆ.
ಈ ಸಾವಿರಾರು ಕೋಟಿ ರೂ. ತೆರಿಗೆ ಕಟ್ಟಿದ ಬಿಸಿಸಿಐ ಆಮೇಲೆ ಚುರುಕಾಗಿ, ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟಕ್ಕೆ ಹೊರಟಿತು. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ)ಗೆ ಮೇಲ್ಮನವಿ ಸಲ್ಲಿಸಿತು. ತೆರಿಗೆಯಿಂದ ವಿನಾಯಿತಿ ಕೋರಿ ಬಾಂಬೆ ಹೈಕೋರ್ಟ್ನಲ್ಲೂ ರಿಟ್ ಅರ್ಜಿ ಸಲ್ಲಿಸಿತು. ಮಂಡಳಿಯ ಕ್ರಿಕೆಟ್ ಪ್ರಚಾರದ ಉಪಕ್ರಮಗಳ ವಿಶಾಲ ವ್ಯಾಪ್ತಿಯನ್ನು ಪರಿಗಣಿಸದೆ, ಐಪಿಎಲ್ನಿಂದ ಬರುವ ಆದಾಯದ ಮೇಲೆ ತೆರಿಗೆ ಕಟ್ಟಿಸಿ ಆದಾಯ ತೆರಿಗೆ ಇಲಾಖೆ ತಪ್ಪುಮಾಡುತ್ತಿದೆ ಎಂದು ಬಿಸಿಸಿಐ ವಾದಿಸಿತು.
ಬಿಸಿಸಿಐ ವಾದವನ್ನು ಐಟಿಎಟಿ ಎತ್ತಿಹಿಡಿಯಿತು. ನವೆಂಬರ್ 2, 2021ರಂದು ನೀಡಲಾದ ನ್ಯಾಯ ಮಂಡಳಿಯ ತೀರ್ಪು, ಕ್ರಿಕೆಟ್ ಆಟವನ್ನು ಉತ್ತೇಜಿಸುತ್ತಿ ರುವುದರಿಂದ ಐಪಿಎಲ್ ಮೂಲಕ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಹೇಳಿತು.
ಐಪಿಎಲ್ ಎಂದರೇನೇ ಎಲ್ಲವೂ ವ್ಯಾಪಾರ. ಅಲ್ಲಿ ಪ್ರತಿಯೊಂದಕ್ಕೂ ದುಡ್ಡು, ದುಡ್ಡು, ದುಡ್ಡು. ಈಗ ಜಾಗತಿಕವಾಗಿ ಅತ್ಯಂತ ಲಾಭದಾಯಕ ಕ್ರೀಡಾ ಲೀಗ್ಗಳಲ್ಲಿ ಐಪಿಎಲ್ ಒಂದು. 2022ರಲ್ಲಿ ಬಿಸಿಸಿಐ 2023ರಿಂದ ಪ್ರಾರಂಭವಾಗುವ ಐದು ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿತು. ಅದು ರೂ. 48 ಸಾವಿರ ಕೋಟಿಗೂ ಹೆಚ್ಚು ಮೊತ್ತಕ್ಕೆ. ಈ ಮೊತ್ತ ತ್ರಿಪುರ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ಮಿರೆರಾಂ, ಸಿಕ್ಕಿಂ ಈ ರಾಜ್ಯಗಳ ವಾರ್ಷಿಕ ಬಜೆಟ್ಗಿಂತ ಹೆಚ್ಚು. ದೇಶದ ಹತ್ತು ಹಲವು ಪ್ರತಿಷ್ಠಿತ ಕಂಪೆನಿಗಳ ಮೌಲ್ಯವೂ ಐಪಿಎಲ್ ಗಳಿಸಿದ ಈ ಮೊತ್ತಕ್ಕಿಂತ ಕಡಿಮೆ.
ಮಾಧ್ಯಮ ಹಕ್ಕುಗಳ ಮಾರಾಟದ ಮೂಲಕ ಐಪಿಎಲ್ ಹೊಸ ದಾಖಲೆ ಬರೆಯಿತು. ಈ ಐತಿಹಾಸಿಕ ಒಪ್ಪಂದವು ಐಪಿಎಲ್ ಅನ್ನು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾ ಲೀಗ್ ಮಾಡಿತು. ಪ್ರತೀ ಐಪಿಎಲ್ ಪಂದ್ಯದ ಮೌಲ್ಯವು ಮಾಧ್ಯಮ ಹಕ್ಕುಗಳ ಹರಾಜಿನ ಸಮಯದಲ್ಲಿ ಗಮನಾರ್ಹವಾದ ಜಿಗಿತವನ್ನು ಕಂಡಿತು. ಇದು ಲೀಗ್ನ ಆರ್ಥಿಕ ಲಾಭ ಅದೆಷ್ಟು ದೊಡ್ಡದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಇನ್ನು, ಇದು ಕೇವಲ ಐಪಿಎಲ್ನ ಐದು ವರ್ಷಗಳ ಮಾಧ್ಯಮ ಹಕ್ಕುಗಳಿಂದ ಬರುವ ದುಡ್ಡು. ಐಪಿಎಲ್ನಿಂದ ಬರುವ ಬೇರೆಲ್ಲ ಆದಾಯಗಳ ಲೆಕ್ಕವನ್ನು ಇಲ್ಲಿ ಹೇಳಿಯೇ ಇಲ್ಲ. ಐಪಿಎಲ್ ಅಲ್ಲದೆ ಬಿಸಿಸಿಐ ಗಳಿಸುವ ಬೇರೆ ಆದಾಯಗಳದ್ದು ಬೇರೆಯೇ ಲೆಕ್ಕವಿದೆ.
ಈಗ ಪ್ರತೀ ಐಪಿಎಲ್ ಪಂದ್ಯದ ಮೌಲ್ಯವು ಹಿಂದಿನ ರೂ. 54.5 ಕೋಟಿಯಿಂದ ರೂ. 114 ಕೋಟಿಗೆ ಜಿಗಿದಿದೆ. ಇದು ಶೇ. 100ಕ್ಕಿಂತ ಹೆಚ್ಚಿನ ಜಿಗಿತ.
ಜಾಗತಿಕವಾಗಿ ಐಪಿಎಲ್ನಲ್ಲಿ ಪ್ರತೀ ಪಂದ್ಯದ ಮೌಲ್ಯ 14.61 ಮಿಲಿಯನ್ ಅಮೆರಿಕನ್ ಡಾಲರ್. ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಫುಟ್ಬಾಲ್ ಲೀಗ್ ಬಳಿಕ ಎರಡನೇ ಸ್ಥಾನದಲ್ಲಿದೆ ಐಪಿಎಲ್. ಅಲ್ಲಿ ಪ್ರತೀ ಪಂದ್ಯದ ಮೌಲ್ಯ 17 ಮಿಲಿಯನ್ ಅಮೆರಿಕನ್ ಡಾಲರ್.
ನಮ್ಮ ದೇಶದಲ್ಲಿ ಹಾಕಿ, ಫುಟ್ಬಾಲ್, ಅತ್ಲೆಟಿಕ್ಸ್ ಸಹಿತ ಬಹುತೇಕ ಎಲ್ಲ ಕ್ರೀಡೆಗಳನ್ನು ನಿಯಂತ್ರಿಸುವುದು ಸರಕಾರಿ ಸಂಸ್ಥೆಗಳು ಅಥವಾ ಸರಕಾರದ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳು. ಆದರೆ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ದೇಶ ವಿದೇಶಗಳ ಟೂರ್ನಿಗೆ ಕಳಿಸುವ ಬಿಸಿಸಿಐ ಸರಕಾರಿ ಸಂಸ್ಥೆಯಲ್ಲ. ಅದರ ಮೇಲೆ ನೇರವಾಗಿ ಸರಕಾರದ ಯಾವುದೇ ನಿಯಂತ್ರಣವೂ ಇಲ್ಲ. ಅಲ್ಲೇನಿದ್ದರೂ ದೇಶದ ಪ್ರತಿಷ್ಠಿತ ಉದ್ಯಮಿಗಳು ಹಾಗೂ ಪಕ್ಷಭೇದವಿಲ್ಲದೆ ಪ್ರಭಾವಿ ರಾಜಕಾರಣಿಗಳು ಆಡಿದ್ದೇ ಆಟ.
ಸರಕಾರ ಜನಸಾಮಾನ್ಯರಿಂದ ಇನ್ನಷ್ಟು, ಮತ್ತಷ್ಟು ತೆರಿಗೆ ವಸೂಲಿ ಮಾಡಲು ಪ್ರತಿದಿನ ಬೇರೆ ಬೇರೆ ಉಪಾಯ ಹೂಡುತ್ತದೆ. ಬೇರೆ ಬೇರೆ ಹೆಸರಲ್ಲಿ ಪ್ರತ್ಯಕ್ಷ, ಪರೋಕ್ಷ ತೆರಿಗೆ ವಸೂಲಿ ಮಾಡುತ್ತದೆ. ಆದರೆ ಎಲ್ಲವೂ ವಾಣಿಜ್ಯಮಯವಾಗಿರುವ ಐಪಿಎಲ್ ಅನ್ನು ಆಯೋಜಿಸುತ್ತಿರುವ ಬಿಸಿಸಿಐ ಮಾತ್ರ ಸರಕಾರದ ದೃಷ್ಟಿಯಲ್ಲಿ ಕ್ರೀಡೆಯನ್ನು ಉತ್ತೇಜಿಸುವ ದತ್ತಿ ಸಂಸ್ಥೆ.
ಐಪಿಎಲ್‌ಗೆ, ಬಿಸಿಸಿಐಗೆ ನೀಡುವ ಈ ಸಾವಿರಾರು ಕೋಟಿಗಳ ರೂ. ವಿನಾಯಿತಿ ಬಗ್ಗೆ ಚಕಾರ ಎತ್ತದವರು ಬಡವರಿಗೆ ಕೊಡುವ ಕೆಲವೇ ಕೆಜಿ ಅಕ್ಕಿಯ ಬಗ್ಗೆ ಮಾತ್ರ ಭಾರೀ ತಲೆಕೆಡಿಸಿಕೊಳ್ಳುತ್ತಾರೆ. ನಿಜಕ್ಕೂ ತಮಾಷೆ ಅಲ್ಲವೆ?