ನೇಪಾಳದಿಂದ 10,000 ಮೆಗಾವ್ಯಾಟ್ ವಿದ್ಯುತ್ ಆಮದು: ಪ್ರಧಾನಿ ಮೋದಿ
ಹೊಸದಿಲ್ಲಿ: ನೇಪಾಳವು ಭಾರತದ ಭೂಭಾಗದ ಮೂಲಕ ಬಾಂಗ್ಲಾದೇಶಕ್ಕೆ ವಿದ್ಯುತ್ ರಫ್ತು ಮಾಡುವುದು ಸೇರಿದಂತೆ, ಹಲವು ವಿದ್ಯುತ್ ಮತ್ತು ಸಾರಿಗೆ ಒಪ್ಪಂದಗಳಿಗೆ ಭಾರತ ಮತ್ತು ನೇಪಾಳ ಗುರುವಾರ ಸಹಿ ಹಾಕಿವೆ.
ಇದಕ್ಕೂ ಮೊದಲು, ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಿರುವ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ರಾಮಾಯಣ ಸರ್ಕೀಟ್‌ಗೆ ಸಂಬಂಧಿಸಿದ ಯೋಜನೆಗಳನ್ನು ವೇಗವಾಗಿ ಮುಕ್ತಾಯಗೊಳಿಸಲು ಉಭಯ ದೇಶಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಭಾರತ ಮತ್ತು ನೇಪಾಳ ನಡುವಿನ ಗಡಿಯು ತಡೆಯಾಗಬಾರದು ಎಂದು ಮೋದಿ ನುಡಿದರು.
‘‘ಇಂದು ಭಾರತ ಮತ್ತು ನೇಪಾಳ ನಡುವೆ ದೀರ್ಘಾವಧಿಯ ವಿದ್ಯುತ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದನ್ವಯ, ಮುಂದಿನ ವರ್ಷಗಳಲ್ಲಿ ನಾವು ನೇಪಾಳದಿಂದ 10,000 ಮೆಗಾ ವ್ಯಾಟ್ ವಿದ್ಯುತ್ತನ್ನು ಆಮದು ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ’’ ಎಂದು ಅವರು ಹೇಳಿದರು.
ವಿದ್ಯುತ್ ಸಹಕಾರದ ಬಗ್ಗೆ ವಿವರಣೆ ನೀಡಿದ ಮೋದಿ, ಸಿಲಿಗುರಿಯಿಂದ ಪೂರ್ವ ನೇಪಾಳದ ಝಾಪದವರೆಗೆ ನೂತನ ಪೈಪ್‌ಲೈನೊಂದನ್ನು ನಿರ್ಮಿಸಲಾಗುವುದು ಎಂದರು.