‘ಪೆಡಂಭೂತ’ಗಳಿಂದ ಕ್ರೀಡೆಗೆ ಬಿಡುಗಡೆ ಎಂದು?
ಕುಸ್ತಿಪಟುಗಳ ಪ್ರತಿಭಟನೆಯ ವಿವಾದ ತಾರಕಕ್ಕೇರುತ್ತಿರುವ ಈ ಸಂದರ್ಭದಲ್ಲಿ ಈ ನಾಡಿನ ಕ್ರೀಡಾಕ್ಷೇತ್ರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಪ್ರತಿಭಟನೆಗೆ ದೇಶದಾದ್ಯಂತ ವಿವೇಕಿಗಳೂ, ಮಾನವಂತರೂ ಬೆಂಬಲ ಸೂಚಿಸುತ್ತಿದ್ದಾರೆ. ಇದೇ ವೇಳೆ ನಾಡಿನ ಕ್ರೀಡಾ ವಲಯವೂ ಚರ್ಚೆಗೆ ಗ್ರಾಸ ಒದಗಿಸಿದೆ. ತರಬೇತಿ, ಫಲಿತಾಂಶ, ಪದಕಗಳಷ್ಟೇ ಕ್ರೀಡೆಯಲ್ಲ ಎಂಬ ಅರಿವು ಮೂಡುತ್ತಿರುವಾಗಲೇ ಇವುಗಳ ಹಿಂದಿರುವ ಕರಿಛಾಯೆಗಳ ವಿಕ್ಷಿಪ್ತ ನರ್ತನವೂ ಬಯಲಾಗುತ್ತಿದೆ. ನೆರಳಿನತ್ತ ಬೊಟ್ಟು ಮಾಡುತ್ತಿರುವ ಅನೇಕರು ಅದು ಯಾರ ನೆರಳು ಎಂಬ ಬಗ್ಗೆ ಮೌನವಾಗಿದ್ದಾರೆ. ‘ನೆರಳು’ಗಳ ಬೆನ್ನು ಬಿದ್ದಿರುವವರೂ ಕ್ರೀಡಾರಂಗದ ಸೂಕ್ಷ್ಮಾವಲೋಕನ ಮಾಡುವ ಅಗತ್ಯ ಇದೆ.
ಇವತ್ತು ನಮ್ಮಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಕೇಂದ್ರಿತ ಕಾರ್ಪೊರೇಟ್ ಚಿಂತನೆಯೇ ಆಗಿದೆ. ಇದರಿಂದ ಹೊರಬಂದು ನಿಂತಾಗ ನೂರೆಂಟು ಕ್ರೀಡೆಗಳೂ, ಅವುಗಳ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಸಂಸ್ಥೆಗಳ ಸ್ವರೂಪ ಧುತ್ತೆನ್ನುತ್ತವೆ. ಇಂತಹ ಅನೇಕ ಸಂಸ್ಥೆಗಳು ಜಾತಿ ಲೆಕ್ಕಾಚಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳ ಕೂಪವೇ ಆಗಿಬಿಟ್ಟಿವೆ. ಲೈಂಗಿಕ ದೌರ್ಜನ್ಯ, ಮದ್ದು ಸೇವನೆ ಪ್ರಕರಣಗಳೂ ದಾಖಲಾಗಿವೆ. ಅಖಿಲ ಭಾರತ ಕುಸ್ತಿ ಸಂಸ್ಥೆಯ ಅಧ್ಯಕ್ಷನಾಗಿರುವ ಬ್ರಿಜ್ ಭೂಷಣ್ ಕುರಿತು ವಿವಾದಗಳ ಹುತ್ತವೇ ಬೆಳೆದು ಬಿಟ್ಟಿದೆ. ಇವುಗಳ ನಡುವೆಯೂ ವೃತ್ತಿಪರತೆಯಿಂದ ದಕ್ಷತೆ ಮತ್ತು ಪ್ರಾಮಾಣಿಕವಾಗಿ ನಡೆಯುತ್ತಿರುವ ಕ್ರೀಡಾ ಸಂಸ್ಥೆಗಳೂ ಇಲ್ಲವೆಂದಲ್ಲ. ಆದರೆ ಅವುಗಳ ಸಂಖ್ಯೆ ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ನಮ್ಮ ಕ್ರೀಡಾ ವ್ಯವಸ್ಥೆಯ ಆತ್ಮಶುದ್ಧಿಯ ಅನಿವಾರ್ಯತೆ ಇದೆ. ನಿತ್ಯವೂ ಹೊಸತುಗಳ ಪ್ರವಾಹ ಎಗ್ಗಿಲ್ಲದೆ ಪ್ರವಹಿಸುತ್ತಿರುವಾಗ ನಾವಿನ್ನೂ ‘ಪಾಳೇಗಾರಿಕೆ’ಯ ಸಾಂಪ್ರದಾಯಿಕತೆಯಲ್ಲೇ ಸಿಲುಕಿದ್ದೇವೆ. ಜಾತಿಗೊಂದು ಕ್ರೀಡಾಕೂಟದಂತಹ ಮನುಷ್ಯ ವಿರೋಧಿ ಚಟುವಟಿಕೆಗಳ ನಡುವೆ ಸಂಭ್ರಮಿಸುತ್ತಿದ್ದೇವೆ. ಒಲಿಂಪಿಕ್ಸ್ನ ಮೂಲ ಆಶಯವೇ ‘ಮನುಷ್ಯರ ನಡುವೆ ಎದ್ದಿರುವ ಜನಾಂಗ, ವರ್ಗ, ಮತೀಯ ಅನಿಷ್ಟ ಗೋಡೆಗಳನ್ನು ಕೆಡವಿ ಎಲ್ಲರೂ ಒಂದೇ’ ಎಂಬ ಭಾವವನ್ನು ಜನಮಾನಸದಲ್ಲಿ ತುಂಬುವುದಾಗಿದೆ. ಆದರೆ ನಮ್ಮಲ್ಲಿ ಏನಾಗಿದೆ?. ಜಾತಿ ಸಂಘಗಳ ಕ್ರೀಡಾ ಕೂಟಗಳಿಗೆ ಸರಕಾರವೇ ಹಣ ನೀಡುತ್ತಾ ಪರೋಕ್ಷವಾಗಿ ಜಾತೀಯತೆಯನ್ನು ಪ್ರೋತ್ಸಾಹಿಸುತ್ತಿದೆ. ಕ್ರೀಡಾಂಗಣಗಳಲ್ಲಿ ಎಳೆಯರನ್ನು, ಯುವಜನರನ್ನು ಆಯಾ ಜಾತಿಗಳ, ಧರ್ಮಗಳ ಪಂಜರದೊಳಗೆ ಬಂದಿಯನ್ನಾಗಿಸುತ್ತಿದೆ. ಇದು ಘೋರ ಅಪರಾಧ. ಇಂತಹ ಜಾತೀಯ ಕುಲುಮೆಯೊಳಗಿಂದ ಹರಿತಗೊಂಡು ಬಂದವರು ವೃತ್ತಿಪರ ಕ್ರೀಡಾ ಆಯ್ಕೆ ಶಿಬಿರಗಳಲ್ಲಿ ಜಾತೀಯತೆಯ, ಮತೀಯ ಕ್ರೌರ್ಯದ ಕತ್ತಿ ಬೀಸದಿರುತ್ತಾರೆಯೇ?.
ಇವತ್ತು ರಾಷ್ಟ್ರೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷನ ವಿರುದ್ಧ ವಿಶ್ವ ಕುಸ್ತಿ ಸಂಸ್ಥೆಯೇ ಕೋಪೋದ್ರಿಕ್ತವಾಗಿದ್ದರೂ, ಆತ ಗಟ್ಟಿಯಾಗಿ ನಿಂತಿರುವುದಕ್ಕೆ ಆತನ ಬೆನ್ನ ಹಿಂದಿರುವ ರಜಪೂತ್ ಜಾತಿ ಕಾರಣ ತಾನೆ. ಈ ಚುನಾವಣಾ ವರ್ಷದಲ್ಲಿ ಆ ಜಾತಿಯನ್ನು ಎದುರು ಹಾಕಿ ಕೊಳ್ಳಲು ಅಧಿಕಾರಸ್ಥರು ಸಿದ್ಧ್ದರಿಲ್ಲ. ಇಂತಹ ಜಾತೀಯ ಕ್ರಿಮಿಗಳು ಕ್ರೀಡಾ ಸಂಸ್ಥೆಗಳ ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿ ಕೊಳ್ಳಲು ಯಾರು ಕಾರಣ? ಇವತ್ತು ಹರ್ಯಾಣ ರಾಜ್ಯ ಬಿಜೆಪಿ ಘಟಕವೇ ಕುಸ್ತಿಪಟುಗಳ ಮೇಲಣ ದೌರ್ಜನ್ಯಕ್ಕೆ ಕೇಂದ್ರ ಸರಕಾರದ ವಿರುದ್ಧ ‘ಆಕ್ರೋಶ’ ವ್ಯಕ್ತ ಪಡಿಸಿದೆ. ಇಲ್ಲದಿದ್ದರೆ ಹರ್ಯಾಣದಲ್ಲಿರುವ ಶೇ. ಮೂವತ್ತರಷ್ಟು ಜಾಟ್ ಮತದಾರರು ತಮ್ಮ ಮೇಲೆ ತಿರುಗಿ ಬೀಳಬಹುದೆಂಬ ಭಯ ಅಷ್ಟೇ. ಪ್ರಾಮಾಣಿಕ ಕಳಕಳಿ ಏನಲ್ಲ.
ಇಲ್ಲೊಂದು ಗಮನಾರ್ಹ ಅಂಶವೆಂದರೆ ಕುಸ್ತಿಯಂತಹ ಕ್ರೀಡೆಗಳಲ್ಲಿ ಶತಮಾನಗಳಿಂದಲೂ ಹಿಂದುಳಿದ ಜಾತಿಗಳು ಮತ್ತು ಮುಸಲ್ಮಾನರೇ ಬಹುಸಂಖ್ಯಾತರು. ಸಾಮಾಜಿಕ ಹಿನ್ನಡೆಗಳ ನಡುವೆಯೂ ಅಖಾಡದಲ್ಲಿ ಇವರೇ ಎದ್ದು ನಿಲ್ಲುತ್ತಿದ್ದುದು ಇತಿಹಾಸ. ಇದೀಗ ಇಂತಹ ಕ್ರೀಡೆಗಳ ಪ್ರಾತಿನಿಧಿಕ ಸಂಸ್ಥೆಗಳನ್ನೇ ಹದಗೆಡಿಸಿಬಿಟ್ಟರೆ ನಷ್ಟ ಯಾರಿಗೆ?. ಇಂತಹದ್ದೊಂದು ಮಹಾ ಪಿತೂರಿ ಇರಲಿಕ್ಕಿಲ್ಲ ಎನ್ನಬಹುದು. ಆದರೆ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಇಂತಹ ಒಬ್ಬಾತನ ಪರವಾಗಿ ಸಾಧುಸಂತರು ಬೃಹತ್ ಮೆರವಣಿಗೆಗೆ ಕರೆಕೊಟ್ಟಿರುವುದನ್ನು ಏನೆಂದು ಅರ್ಥೈಸಿ ಕೊಳ್ಳಬೇಕು. ಇಂತಹ ಒಳಸುಳಿಗಳು ಈ ನಾಡಿನಾದ್ಯಂತ ಕ್ರೀಡಾಂಗಣದಲ್ಲಿ ಪ್ರತಿಭಾವಂತರ ಕಾಲಿಗೆ ಕೊಡಲಿಯಂತಿವೆ. ಉತ್ತರ ಭಾರತದಲ್ಲಿ ಇವತ್ತು ರೈತಮುಖಂಡರು, ಬಹುಜನ ಸಂಘಟನೆಗಳು ಇಂತಹ ಕಾರಣಗಳಿಗಾಗಿಯೇ ಕುಸ್ತಿಪಟುಗಳ ಪರ ನಿಂತಿವೆ.
ದೇಶದ ಕ್ರೀಡಾಚಟುವಟಿಕೆಗಳ ಹಿನ್ನಡೆಗೆ ಇಷ್ಟೇ ಕಾರಣಗಳಲ್ಲ. ಎಳೆಯ ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಚಿವುಟಿ ಹಾಕಿ, ಪುಸ್ತಕ ಕೊಟ್ಟು ಕುಳ್ಳಿರಿಸುವುದು ಬಹಳಷ್ಟು ಪೋಷಕರ ಪರಿಪಾಠ. ಕ್ರೀಡಾಳುಗಳಿಗೆ ಕೆಲವೇ ತಿಂಗಳ ತರಬೇತು ನೀಡಿ ಬೆಟ್ಟದಷ್ಟು ನಿರೀಕ್ಷಿಸಲಾಗುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಪ್ರತಿಭಾವಂತ ಕ್ರೀಡಾಪಟುಗಳನ್ನು ಅಂತರಕಾಲೇಜು ಮಟ್ಟದಲ್ಲಿ ಪದಕ ಗಳಿಸುವುದಕ್ಕಷ್ಟೇ ಸೀಮಿತಗೊಳಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ. ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ ಕೊಡುವಲ್ಲಿ ತಮ್ಮ ಪ್ರಯತ್ನ ಎಷ್ಟು ಪ್ರಾಮಾಣಿಕ ಎಂದು ಕ್ರೀಡಾ ಇಲಾಖೆ, ಕ್ರೀಡಾಡಳಿತಗಾರರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಸೂಕ್ತ. ಇನ್ನು ತೀರಾ ಕಡಿಮೆ ಸಂಭಾವನೆ ಮತ್ತು ಸೀಮಿತ ಉದ್ಯೋಗಾವಕಾಶಗಳಿಂದ ಕ್ರೀಡಾಪಟುಗಳ ಬದುಕು ಅಸಹನೀಯ ಎನಿಸುತ್ತಿದೆ. ಇಂತಹ ಸಂದಿಗ್ಧದಲ್ಲಿ ಎಚ್ಚರಗಣ್ಣುಗಳಾಗ ಬೇಕಿದ್ದ ಮಾಧ್ಯಮಗಳಂತೂ ಕುರುಡಾಗಿವೆ. ಕ್ರಿಕೆಟ್ ಅಥವಾ ‘ಕಾರ್ಪೊರೇಟ್ ಕ್ರೀಡಾ ಸಂಭ್ರಮ, ಜಾತೀಯ ಕ್ರೀಡಾ ಜಾತ್ರೆ’ಗಳ ವೈಭವದಲ್ಲಿ ಮುಳುಗಿವೆ. ಪರಿಸ್ಥಿತಿಯನ್ನು ಸರಿ ಪಡಿಸಬೇಕೆಂಬ ಸದುದ್ದೇಶದಿಂದ ಮಹಾ ಕ್ರೀಡಾ ಸಾಧಕರು, ಅನುಭವಿ ಸಜ್ಜನರು ಈ ಸುಳಿಯ ಒಳಗಿಳಿದರೆ ‘ವ್ಯವಸ್ಥೆ’ಯೇ ಅಂತಹವರನ್ನು ನುಂಗಿ ನೀರು ಕುಡಿಯುತ್ತದೆ.
ಇಂತಹ ನೂರೆಂಟು ಸಮಸ್ಯೆಗಳು ಕ್ರೀಡಾಕ್ಷೇತ್ರವನ್ನು ಕಿತ್ತು ತಿನ್ನುತ್ತಿರುವುದರ ನಡುವೆಯೇ, ಸಾಮಾಜಿಕ ಅಸಮಾನತೆಯ ಅಗೋಚರ ‘ಪೆಡಂಭೂತ’ವು ಕ್ರೀಡಾಕ್ಷೇತ್ರವನ್ನು ಕುಷ್ಠದ ವ್ರಣದಂತೆ ಕಾಡುತ್ತಿದೆ. ಮುಖ್ಯವಾಗಿ ಈ ‘ಪೆಡಂಭೂತ’ದಿಂದ ಕ್ರೀಡಾಕ್ಷೇತ್ರವನ್ನು ಪಾರು ಮಾಡಿದಾಗಲಷ್ಟೇ ಪ್ರತಿಭಟನಾನಿರತ ಕುಸ್ತಿಪಟುಗಳಂತಹ ಸಹಸ್ರಾರು ಪ್ರತಿಭಾವಂತ ಕ್ರೀಡಾಳುಗಳ ಕಣ್ಣೀರು ನಿಲ್ಲಬಹುದು. ಕ್ರೀಡಾಭಿವೃದ್ಧಿಯ ನಿಟ್ಟಿನಲ್ಲಿ ಉತ್ತಮ ದೇಹದಾರ್ಢ್ಯದಷ್ಟೇ, ಅಂಗ ಸೌಷ್ಟವದಷ್ಟೇ ಮುಖ್ಯವಾಗಿ ಎಲ್ಲೆಡೆ ಮೆದುಳು ಶುದ್ಧಿಯಾಗಬೇಕಿದೆ. ಮನುಷ್ಯ ಪ್ರೀತಿಯ ಸ್ವಸ್ಥ ಮನಸ್ಸು ಅರಳಬೇಕಿದೆ. ಈ ನಿಟ್ಟಿನಲ್ಲಿ ಬದಲಾವಣೆ ಸಾಧ್ಯವಾಗದಿದ್ದರೆ ಕ್ರೀಡಾರಂಗ ಎದುರಿಸುತ್ತಿರುವ ನೂರೆಂಟು ‘ಅವ್ಯಕ್ತ’ ಸಮಸ್ಯೆಗಳು ಇದೇ ರೀತಿ ಮುಂದುವರಿಯುತ್ತವೆ, ಅಷ್ಟೇ