ಎಚ್ಚೆತ್ತ ಸರಕಾರ, ‘ವಾರ್ತಾಭಾರತಿ’ಗೆ ಅಭಿನಂದನೆ
ಮಾನ್ಯರೇ,
ಕೊನೆಗೂ ಹೊಸ ಕಾಂಗ್ರೆಸ್ ಸರಕಾರ ಎಚ್ಚೆತ್ತುಕೊಂಡಿದೆ. ಅಲ್ಪಸಂಖ್ಯಾತ ಮುಸ್ಲಿಮರಿಗೆ ಆಗಿದ್ದ ದೊಡ್ಡ ಅನ್ಯಾಯವನ್ನು ಒಂದಿಷ್ಟಾದರೂ ಸರಿಪಡಿಸುವ ಕ್ರಮ ಕೈಗೊಂಡಿದೆ. ವಿಧಾನ ಪರಿಷತ್ ಸದಸ್ಯ, ಪಕ್ಷದ ಹಿರಿಯ ನಾಯಕ ನಸೀರ್ ಅಹ್ಮದ್ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಕೊಟ್ಟು ಸಂಪುಟ ದರ್ಜೆ ಸ್ಥಾನಮಾನ ನೀಡಿದೆ. ಕನಿಷ್ಠ ಅಂತಹ ಮನಸ್ಸು ಈ ಸರಕಾರಕ್ಕಿದೆ ಎಂಬುದೇ ಸಮಾಧಾನದ ವಿಷಯ. ಸರಕಾರವನ್ನು ಸಕಾಲದಲ್ಲಿ ಎಚ್ಚರಿಸಿದ ‘ವಾರ್ತಾಭಾರತಿ’ ಪತ್ರಿಕೆ, ಡಿಜಿಟಲ್ ಚಾನೆಲ್ ಹಾಗೂ ವಿಶ್ಲೇಷಣೆ ಬರೆದ ಎಚ್.ಎಂ. ನಿರಂಜನ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಬಾರಿ ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ತಮ್ಮ ಮತ ವಿಭಜನೆ ಆಗಲು ಬಿಟ್ಟಿಲ್ಲ. ಆದರೆ ಆ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಸ್ಪೀಕರ್ ಸ್ಥಾನ ಕೊಟ್ಟು ಎಲ್ಲರೂ ಅದರ ಸ್ಥಾನ ಮಹಿಮೆಯನ್ನು ಕೊಂಡಾಡುತ್ತಾ ಮೈಮರೆತಿದ್ದರು. ಆಗ ಈ ಸರಕಾರ ಬರುವಲ್ಲಿ ಮುಸ್ಲಿಮ್ ಸಮುದಾಯದ ಬೆಂಬಲ ಎಷ್ಟು ನಿರ್ಣಾಯಕವಾಗಿತ್ತು? ಆದರೆ ಸರಕಾರ ಬಂದ ಮೇಲೆ ಆ ಸಮುದಾಯಕ್ಕೆ ಸಿಕ್ಕಿದ್ದೇನು? ಇತರ ಸಮುದಾಯಗಳಿಗೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ? ಸಿಕ್ಕಿರುವ ಎರಡು ಖಾತೆಗಳೂ ಇತರ ಖಾತೆಗಳಿಗೆ ಹೋಲಿಸಿದರೆ ಎಂಥವು? ಎಂಬುದರ ಬಗ್ಗೆ ಮಾಹಿತಿ, ಅಂಕಿ ಅಂಶಗಳ ಸಹಿತ ವೈಜ್ಞಾನಿಕ ವಿಶ್ಲೇಷಣೆಯನ್ನು ‘ವಾರ್ತಾಭಾರತಿ’ ಪ್ರಕಟಿಸಿದ್ದು ಅತ್ಯಂತ ಸೂಕ್ತವಾಗಿತ್ತು. ಈ ಬಗ್ಗೆ ‘ವಾರ್ತಾಭಾರತಿ’ಯ ಡಿಜಿಟಲ್ ಚಾನೆಲ್‌ನಲ್ಲೂ ಕಾರ್ಯಕ್ರಮ ಪ್ರಸಾರವಾಗಿ ರಾಜ್ಯಾದ್ಯಂತ ಸಾಕಷ್ಟು ಆರೋಗ್ಯಕರ ಚರ್ಚೆಗೆ ಕಾರಣವಾಗಿತ್ತು. ಈಗ ಅದರ ಫಲಶ್ರುತಿ ಸಿಕ್ಕಿದೆ.
ಒಬ್ಬ ಅರ್ಹ ಮುಸ್ಲಿಮ್ ಶಾಸಕರಿಗೆ ಸಮಾಧಾನಕರ ಸ್ಥಾನವನ್ನಾದರೂ ನೀಡಲಾಗಿದೆ. ಮುಂದೆ ಇನ್ನಷ್ಟು ಸೂಕ್ತ ಸ್ಥಾನಮಾನಗಳು ಆ ಸಮುದಾಯಕ್ಕೆ ಹಾಗೂ ರಾಜ್ಯದ ಸರ್ವಧರ್ಮೀಯ ಮಹಿಳೆಯರಿಗೆ ಸಿಗಬೇಕು. ‘ವಾರ್ತಾಭಾರತಿ’ ವಿಶ್ಲೇಷಣೆಯಲ್ಲಿ ಹೇಳಿದಂತೆ ಮಹಿಳೆಯರಿಗೂ ಈ ಸರಕಾರದಲ್ಲಿ ತೀರಾ ಕಡಿಮೆ ಪ್ರಾತಿನಿಧ್ಯ ಸಿಕ್ಕಿದೆ. ಅದು ಸರಿಯಲ್ಲ. ಸಿದ್ದರಾಮಯ್ಯ ಅವರಂತಹ ಸಾಮಾಜಿಕ ನ್ಯಾಯದ ಪ್ರತಿಪಾದಕ ಹಾಗೂ ಮುತ್ಸದ್ದಿಯೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಇದು ರಾಜ್ಯದ ಎಲ್ಲ ಪ್ರಜ್ಞಾವಂತರಿಗೆ ಸಂತಸದ ವಿಷಯ. ಆದರೆ ಸರಕಾರಿ ವ್ಯವಸ್ಥೆ ಎಂದ ಮೇಲೆ ಅದಕ್ಕೆ ಅದರ ಲೋಪದೋಷ ಎತ್ತಿ ತೋರಿಸುವ, ಆಗಾಗ ಅದರ ಭರವಸೆಗಳನ್ನು ನೆನಪಿಸುವ, ಅದರ ಆಶಯಗಳನ್ನು ಮರೆಯದಂತೆ ಎಚ್ಚರಿಸುವ ಮಾಧ್ಯಮ ಹಾಗೂ ಜಾಗೃತ ಪ್ರಜೆಗಳು ಅತ್ಯಗತ್ಯ. ಅಂತಹ ಕೆಲಸವನ್ನು ‘ವಾರ್ತಾಭಾರತಿ’ ಅತ್ಯಂತ ಸಮರ್ಥವಾಗಿ ಮಾಡಿದೆ. ಅದಕ್ಕಾಗಿ ಅಭಿನಂದನೆಗಳು. ಮುಸ್ಲಿಮರ ಪ್ರಾತಿನಿಧ್ಯಕ್ಕಾಗಿ ಶ್ರಮಿಸಿದ ಎಲ್ಲಾ ಸೌಹಾರ್ದ ಜೀವಿಗಳಿಗೂ, ಸಮುದಾಯದ ಹಿತಚಿಂತಕರಿಗೂ ಅಭಿನಂದನೆಗಳು.
ಸಮುದಾಯದ ಹೆಸರಿನಲ್ಲಿ ಸಮುದಾಯದ ಪ್ರತಿನಿಧಿಗಳಾಗಿ ಸರಕಾರದಲ್ಲಿ ಅಧಿಕಾರ ಪಡೆದವರು ಸಮುದಾಯಕ್ಕೆ ಉತ್ತಮ ಹೆಸರು ಬರುವಂತೆ ಕಾರ್ಯ ನಿರ್ವಹಿಸಬೇಕು.